'4 ಮಕ್ಕಳು ಮಾಡಿಕೊಳ್ಳಿ, 1 ಲಕ್ಷ ಪಡೆಯಿರಿ..' ಹೊಸ ದಂಪತಿಗಳಿಗೆ ಮಧ್ಯಪ್ರದೇಶ ಬ್ರಾಹ್ಮಣ ಮಂಡಳಿ ಆಫರ್!
ಮಧ್ಯಪ್ರದೇಶ ಸರ್ಕಾರದ ಬ್ರಾಹ್ಮಣ ಮಂಡಳಿಯು ನಾಲ್ಕು ಮಕ್ಕಳನ್ನು ಹೊಂದಿರುವ ಬ್ರಾಹ್ಮಣ ದಂಪತಿಗಳಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಮಂಡಳಿ ಮುಖ್ಯಸ್ಥ ಪಂಡಿತ್ ವಿಷ್ಣು ರಾಜೋರಿಯಾ ಈ ಘೋಷಣೆ ಮಾಡಿದ್ದು, ಇದು ವೈಯಕ್ತಿಕ ಉಪಕ್ರಮವಾಗಿದ್ದು ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭೋಪಾಲ್ (ಜ.13): ಮಧ್ಯಪ್ರದೇಶ ಸರ್ಕಾರದ ಬ್ರಾಹ್ಮಣ ಮಂಡಳಿಯ ಮುಖ್ಯಸ್ಥ, ಹೊಸ ದಂಪತಿಗಳು ಆಫರ್ ಘೋಷಣೆ ಮಾಡಿದ್ದಾರೆ. ನಾಲ್ಕು ಮಕ್ಕಳನ್ನು ಹೊಂದಲು ನಿರ್ಧಾರ ಮಾಡುವ ಬ್ರಾಹ್ಮಣ ದಂಪತಿಗಳಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. ಪಂಡಿತ್ ವಿಷ್ಣು ರಾಜೋರಿಯಾ ಪರಶುರಾಮ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದು, ರಾಜ್ಯ ಕ್ಯಾಬಿನೆಟ್ ಸಚಿವ ದರ್ಜೆಯನ್ನು ಹೊಂದಿದ್ದಾರೆ. ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜೋರಿಯಾ, ನಾವು ನಮ್ಮ ಕುಟುಂಬಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಹೆಚ್ಚಾಗಿ ನಿಲ್ಲಿಸಿದ್ದೇವೆ. ಇದರಿಂದಾಗಿ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
"ನನಗೆ ಯುವಕರಿಂದ ಹೆಚ್ಚಿನ ಭರವಸೆಗಳಿವೆ. ಹಿರಿಯರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ಆಲಿಸಿ, ಭವಿಷ್ಯದ ಪೀಳಿಗೆಯ ರಕ್ಷಣೆಗೆ ನೀವು ಜವಾಬ್ದಾರರು. ಯುವಕರು ಜೀವನದಲ್ಲಿ ಸೆಟಲ್ ಆದ ಬಳಿಕ, ಒಂದು ಮಗು ಮಾಡಿಕೊಂಡು ಸುಮ್ಮನಾಗುತ್ತಾರೆ. ಇದು ಸಮಸ್ಯೆಗೆ ಕಾರಣವಾಗಿದೆ. ಹೊಸ ದಂಪತಿಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ನಂತರ ಅವರು ಪರಶುರಾಮ ಮಂಡಳಿಯು ನಾಲ್ಕು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ 1 ಲಕ್ಷ ರೂ. ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದರು. "ನಾನು ಮಂಡಳಿಯ ಅಧ್ಯಕ್ಷನಾಗಿದ್ದರೂ ಅಥವಾ ಇಲ್ಲದಿದ್ದರೂ, ಪ್ರಶಸ್ತಿಯನ್ನು ನೀಡಲಾಗುವುದು' ಎಂದಿದ್ದಾರೆ.
ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ, ಅವರಿಗೆ ಶಿಕ್ಷಣ, ಜೀವನ ಎಲ್ಲವೂ ದುಬಾರಿಯಾಗಿದೆ ಎಂದು ಯುವಕರು ಆಗಾಗ್ಗೆ ನಮ್ಮೊಂದಿಗೆ ಹೇಳುತ್ತಿರುತ್ತಾರೆ ಎಂದು ರಾಜೋರಿಯಾ ತಿಳಿಸಿದ್ದಾರೆ. ಇದನ್ನು ಹೇಗಾದರೂ ನಿರ್ವಹಿಸಬಹುದು. ಆದರೆ ಮಕ್ಕಳಿಗೆ ಜನ್ಮ ನೀಡುವಲ್ಲಿ ವಿಳಂಬ ಮಾಡಬೇಡಿ. ಇಲ್ಲದಿದ್ದರೆ, ಧರ್ಮದ್ರೋಹಿಗಳೇ ಈ ದೇಶವನ್ನು ವಶಪಡಿಸಿಕೊಳ್ಳುತ್ತಾರೆ' ಎಂದಿದ್ದಾರೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಘೋಷಣೆ "ವೈಯಕ್ತಿಕ ಉಪಕ್ರಮ" ಮತ್ತು ಸರ್ಕಾರಿ ಉಪಕ್ರಮವಲ್ಲ ಎಂದು ಹೇಳಿದರು. "ಇದು ಸಮುದಾಯ ಕಾರ್ಯಕ್ರಮದಲ್ಲಿ ನನ್ನ ಹೇಳಿಕೆಯಾಗಿದೆ. ಬ್ರಾಹ್ಮಣ ಸಮಾಜವು ಉನ್ನತ ಹುದ್ದೆಗಳಿಗೆ ಮಕ್ಕಳಿಗೆ ಶಿಕ್ಷಣ ಮತ್ತು ತರಬೇತಿ ಸೇರಿದಂತೆ ಈ ಬದ್ಧತೆಗಳನ್ನು ಪೂರೈಸಬಹುದು ಎಂದಿದ್ದಾರೆ.
ಕಾಂಗ್ರೆಸ್ ನ ಮುಖೇಶ್ ನಾಯಕ್, ರಾಜೋರಿಯಾ ತಮ್ಮ ಹೇಳಿಕೆಯನ್ನು ಪುನರ್ವಿಮರ್ಶಿಸಬೇಕು ಎಂದು ಹೇಳಿದರು. "ಅವರು ಒಬ್ಬ ವಿದ್ವಾಂಸರು, ನನ್ನ ಸ್ನೇಹಿತ. ಜನಸಂಖ್ಯಾ ಬೆಳವಣಿಗೆಯು ಇಂದಿನ ವಿಶ್ವದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದಷ್ಟೂ ಅವರ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಹಿಂದೂಗಳನ್ನು ತಿಂದುಹಾಕುತ್ತಾರೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಇವು ಕಾಲ್ಪನಿಕ ಕಲ್ಪನೆಗಳು. ನಾವು ಒಗ್ಗಟ್ಟಾಗಿದ್ದಾಗ ಮಾತ್ರ ನಮ್ಮ ದೇಶ ಶಕ್ತಿಶಾಲಿಯಾಗುತ್ತದೆ" ಎಂದು ಅವರು ಹೇಳಿದರು.
ಗರ್ಲ್‌ಫ್ರೆಂಡ್‌ನ ಗಂಡ, ತಂದೆಯನ್ನು ಕೊಲ್ಲಲು ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದ ವಕೀಲ, ಆದ್ರೆ ಕೊಲೆಯಾದವನೇ ಬೇರೆ!
"ಬಿಜೆಪಿ ಸರ್ಕಾರ ನಿಯಮಗಳು ಮತ್ತು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಅವರು ಏನು ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಸರ್ಕಾರವು ಈ ವಿಷಯವು ಪೋಷಕರ ನಿರ್ಧಾರ ಎಂದು ನಂಬುತ್ತದೆ. ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಬಿಜೆಪಿ ಹೇಳಿದೆ.
ಕೇಂದ್ರ ಬಜೆಟ್‌ನಲ್ಲಿ ಇಪಿಎಫ್‌ಒ ಕನಿಷ್ಠ ಪಿಂಚಣಿ ₹7500ಕ್ಕೆ ಏರಿಕೆ ಸಾಧ್ಯತೆ!