* ಕಠಿಣ ಕಾಯ್ದೆ ಜಾರಿಗೆ ಮಧ್ಯಪ್ರದೇಶ ಸರ್ಕಾರ ನಿರ್ಧಾರ* ಕಳ್ಳಭಟ್ಟಿ ಸಾವು:  ದೋಷಿಗಳಿಗೆ 20 ಲಕ್ಷ ದಂಡ, ಗಲ್ಲು ಶಿಕ್ಷೆ

ಭೋಪಾಲ್‌(ಆ.04): ವಿಷಪೂರಿತ ಮದ್ಯಸೇವನೆಯಿಂದ ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ, ಅಂಥ ಪ್ರಕರಣದ ದೋಷಿಗಳಿಗೆ ಜೀವಾವಧಿ ಅಥವಾ ಗಲ್ಲು ಶಿಕ್ಷೆ ವಿಧಿಸುವ ಮತ್ತು ದೋಷಿಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು 20 ಲಕ್ಷ ರು.ಗಳಿಗೆ ಹೆಚ್ಚಿಸುವ ಕಾನೂನು ಜಾರಿಗೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದ್ದು, ರಾಜ್ಯ ವಿಧಾನಸಭೆಯ ಅನುಮೋದನೆ ಬಳಿಕ ಇದು ಕಾಯ್ದೆ ಸ್ವರೂಪ ಪಡೆದುಕೊಳ್ಳಲಿದೆ.

ಹಾಲಿ ಇರುವ ಕಾಯ್ದೆ ಅನ್ವಯ, ವಿಷಪೂರಿತ ಮದ್ಯ ಮಾರಾಟ ಪ್ರಕರಣದ ದೋಷಿಗಳಿಗೆ 5ರಿಂದ 10 ವರ್ಷ ಜೈಲು, 10 ಲಕ್ಷ ರು.ವರೆಗೆ ದಂಡ ವಿಧಿಸಬಹುದಾಗಿದೆ. ಆದರೆ ರಾಜ್ಯದಲ್ಲಿ ಈ ಕಾಯ್ದೆ ಇರುವ ಹೊರತಾಗಿಯೂ ವಿಷ ಪೂರಿತ ಮದ್ಯಸೇವನೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗಷ್ಟೇ ಮಂಡ್‌ಸೌರ್‌ ಮತ್ತು ಇಂದೋರ್‌ನಲ್ಲಿ ಕಳ್ಳಭಟ್ಟಿಕುಡಿದು 7 ಮಂದಿ ಸಾವನ್ನಪ್ಪಿದ್ದರು.