ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ವಾರಾಂತ್ಯದ ಲಾಕ್ಡೌನ್‌ ಜಾರಿ| ಜನದಟ್ಟಣೆಯಿಂದ ಕೂಡಿರುತ್ತಿದ್ದ ಸ್ಥಳಗಳು ಬಿಕೋ ಬಿಕೋ

ಮುಂಬೈ(ಏ.11): ಕೊರೋನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಘೋಷಿಸಿದ್ದ ವಾರಾಂತ್ಯದ ಲಾಕ್ಡೌನ್‌ ಶುಕ್ರವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಹೀಗಾಗಿ ಭಾರೀ ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಾರುಕಟ್ಟೆ, ಬಸ್‌ ನಿಲ್ದಾಣ, ಕಚೇರಿ ಪ್ರದೇಶಗಳು ಶನಿವಾರ ಬಿಕೋ ಎನ್ನುತ್ತಿದ್ದವು.

ಮಧ್ಯಪ್ರದೇಶದಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ ಆರಂಭವಾದ ವಾರಾಂತ್ಯದ ಲಾಕ್ಡೌನ್‌ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಇರಲಿದೆ. ಮಹಾರಾಷ್ಟ್ರದಲ್ಲಿ ಏ.30ರವರೆಗೆ ವಾರಾಂತ್ಯದ ಲಾಕ್‌ಡೌನ್‌ ಮುಂದುವರಿಯಲಿದ್ದು, ಪ್ರತೀ ಶುಕ್ರವಾರ ರಾತ್ರಿ 8 ಗಂಟೆಗೆ ಆರಂಭವಾಗಿ ಸೋಮವಾರ ಬೆಳಗ್ಗೆ 7 ಗಂಟೆಗೆ ಅಂತ್ಯವಾಗಲಿದೆ.

ಬೇರೆ ದಿನಗಳಲ್ಲಿ ಭಾರೀ ಜನಸ್ತೋಮದಿಂದ ಕೂಡಿರುತ್ತಿದ್ದ ಮುಂಬೈ, ಪುಣೆ, ಔರಂಗಾಬಾದ್‌ ಮತ್ತು ನಾಗ್ಪುರ ನಗರಗಳು ಶನಿವಾರ ಬಿಕೋ ಎನ್ನುತ್ತಿದ್ದವು. ಅಲ್ಲದೆ ಮುಂಬೈ ಸೇರಿದಂತೆ ಇನ್ನಿತರೆಡೆ ಮಾರುಕಟ್ಟೆಗಳಲ್ಲಿ ಜನರು ಮುಖಕ್ಕೆ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಸೇರಿ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಇನ್ನಿತರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದದ್ದು ಕಂಡುಬಂದಿದೆ.

ಏತನ್ಮಧ್ಯೆ ಹೆಚ್ಚು ಸೋಂಕು ದಾಖಲಾಗುತ್ತಿರುವ ಮಧ್ಯಪ್ರದೇಶದ ವಿವಿಧ ನಗರಗಳಲ್ಲಿ ಸೋಮವಾರದಿಂದ ಆರಂಭವಾಗಲಿರುವ ಲಾಕ್‌ಡೌನ್‌ ಅನ್ನು ಏ.22ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಏ.19ರವರೆಗೆ ಮಾತ್ರ ಲಾಕ್‌ಡೌನ್‌ ವಿಧಿಸಲಾಗಿತ್ತು.