ಬಹಿರ್ದೆಸೆಗೆ ಕುಳಿತ ವ್ಯಕ್ತಿ ಮೇಲೆ ದಾಳಿ ಮಾಡಿ, ನುಂಗಲು ಮುಂದಾದ 13 ಅಡಿ ಉದ್ದದ ಹೆಬ್ಬಾವು!
ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಹೆಬ್ಬಾವು ದಾಳಿ ಮಾಡಿದ್ದು, ಆತನ ಕೈಗಳನ್ನು ನುಂಗಿದೆ. ಇಡೀ ದೇಹ ನುಂಗಬೇಕು ಎನ್ನುವಷ್ಟರಲ್ಲಿ ಈ ದೃಶ್ಯ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.
ಮಧ್ಯಪ್ರದೇಶ (ಜು.24): ಪ್ರತಿದಿನ ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಲು ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಹೆಬ್ಬಾವು ದಾಳಿ ಮಾಡಿದ್ದು, ಆತನನ್ನು ನುಂಗಲು ಮುಂದಾಗಿದೆ. ಬಹಿರ್ದೆಸೆಗೆ ಕುಳಿತ ವ್ಯಕ್ತಿಯ ಎರಡೂ ಕಾಲುಗಳು ಹಾಗೂ ಕುತ್ತಿಗೆಗೆ ಸುತ್ತಿಕೊಂಡು ಕೈಗಳನ್ನು ನುಂಗಿದೆ. ಇನ್ನೇನು ಆತನನ್ನು ಪೂರ್ತಿಯಾಗಿ ನುಂಗಬೇಕು ಎನ್ನುವಷ್ಟರಲ್ಲಿ ಗ್ರಾಮಸ್ಥರ ಕಣ್ಣಿಗೆ ಈ ದೃಶ್ಯ ಬಿದ್ದಿದೆ.
ಈ ಘಟನೆ ಕಳೆದ ಎರಡು ದಿನಗಳ ಹಿಂದೆ ಸೋಮವಾರ ಬೆಳಗ್ಗೆ ಮಧ್ಯಪ್ರದೇಶ ರಾಜ್ಯದ ಜಬ್ಬಲಪುರ ಬಳಿಯ ಗ್ರಾಮದಲ್ಲಿ ನಡೆದಿದೆ. ಎಂದಿನಂತೆ ಸೋಮವಾರ ಬೆಳಗ್ಗೆಯೂ ಮಲವಿಸರ್ಜನೆಗೆಂದು ಕಾಡಿಗೆ ತೆರಳಿದ್ದ ವೇಳೆ 13 ಅಡಿ ಹೆಬ್ಬಾವು ದಾಳಿ ಮಾಡಿದೆ. ಬಹಿರ್ದೆಸೆಗೆ ತೆರಳಿ ವ್ಯಕ್ತಿ ಮರದ ಕೆಳಗೆ ಕುಳಿತಿದ್ದು, ಮರದ ಮೇಲಿಂದಲೇ ಆತನ ಮೇಲೆ ಹೆಬ್ಬಾವು ದಾಳಿ ಮಾಡಿದೆ. ಬಹಿರ್ದೆಸೆಗೆ ಕುಳಿತವನು ಮೇಲೇಳಲೂ ಸಾಧ್ಯವಾಗದಂತೆ ಆತನ ಕಾಲುಗಳನ್ನು ಸುತ್ತಿಕೊಂಡಿದೆ. ಕೂಡಲೇ ಆತ ಜೋರಾಗಿ ಸಹಾಯಕ್ಕಾಗಿ ಕಾಪಾಡಿ, ಕಾಪಾಡಿ ಎಂದು ಕೂಗಿಕೊಂಡಿದ್ದಾನೆ.
ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ
ಇನ್ನು ಗ್ರಾಮೀಣ ಪ್ರದೇಶವಾಗಿದ್ದರಿಂದ ಬಹಿರ್ದೆಸೆಗೆ ತೆರಳಿದ್ದ ಇತರೆ ರೈತರು ಸಹಾಯಕ್ಕಾಗಿ ಕೂಗಿಕೊಂಡ ವ್ಯಕ್ತಿಯ ಧ್ವನಿ ಕೇಳಿ ಸ್ಥಳಕ್ಕೆ ಬರುವಷ್ಟರಲ್ಲಿ ಆತನ ಕುತ್ತಿಗೆಗೂ ಹೆಬ್ಬಾವು ಸುತ್ತಿಕೊಂಡಿದೆ. ಆದರೆ, ಒಂದಿಬ್ಬರಿಂದ ಹೆಬ್ಬಾವಿನ ಹಿಡಿತದಲ್ಲಿದ್ದ ವ್ಯಕ್ತಿಯನ್ನು ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಸಹಾಯಕ್ಕಾಗಿ ಗ್ರಾಮದಲ್ಲಿದ್ದ ಇತರೆ ಪುರುಷರನ್ನು ಸ್ಥಳಕ್ಕೆ ಕರೆದಿದ್ದಾರೆ. ಈ ವೇಳೆ ಕೆಲವರು ಹರಿತವಾದ ಆಯುಧ, ಕಟ್ಟಿಗೆ, ದೊಣ್ಣೆಗಳನ್ನು ಹಿಡಿದು ಸ್ಥಳಕ್ಕೆ ಬಂದಿದ್ದಾರೆ. ಆದರೆ, ಅದಾಗಲೇ ಹೆಬ್ಬಾವು ಬಹಿರ್ದೆಸೆಗೆ ಕುಳಿತಿದ್ದ ವ್ಯಕ್ತಿಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಲು ಮುಂದಾಗಿದೆ.
ಹೆಬ್ಬಾವು ತನ್ನನ್ನು ನುಂಗುತ್ತದೆ ಎಂದು ಅರಿತ ವ್ಯಕ್ತಿ ಹಾವಿನ ಕತ್ತನ್ನು ಹಿಡಿದುಕೊಂಡಿದ್ದಾನೆ. ಆದರೆ, ಹಾವು ವ್ಯಕ್ತಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಂಡುತ್ತಾ ತನ್ನ ಹಿಡಿತ ಬಿಗಿಗೊಳಿಸಿದ್ದರಿಂದ ನೋವು ತಾಳಲಾರದೇ ಹೆಬ್ಬಾವಿನ ಕತ್ತನ್ನು ಬಿಟ್ಟಿದ್ದಾನೆ. ಆಗ ಹೆಬ್ಬಾವು ತನ್ನ ತಲೆ ಹಿಡಿದುಕೊಂಡಿದ್ದ ಕೈಗಳನ್ನು ಬಾಯಿಯೊಳಗೆ ಹಾಕಿಕೊಂಡು ನುಂಗಲು ಶುರುಮಾಡಿದೆ. ಆತನ ಎರಗೈಯ ಅರ್ಧ ಭಾಗವನ್ನು ಹಾವು ನುಂಗಿದ್ದು, ಇತರೆ ಭಾಗವನ್ನು ಒಳಗೆ ಎಳೆದುಕೊಳ್ಳುತ್ತಿದೆ. ಅಷ್ಟರಲ್ಲಾಗಲೇ ಗ್ರಾಮಸ್ಥರು ಗುಂಪು ಸೇರಿದ್ದು, ಹಾವಿನ ಮೇಲೆ ದಾಳಿ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ನೆಲದ ಮೇಲೆ ಹರಿದಾಡುವ ಹಾವು ದಾಳಿ ಮಾಡಲು ಬರುತ್ತಿದ್ದರೆ ಅದರ ಮೇಲೆ ಹಲ್ಲೆ ಮಾಡುವುದು ಸುಲಭ. ಆದರೆ, ವ್ಯಕ್ತಿಯ ಮೈಗೆ ಸುತ್ತಿಕೊಂಡ ಹಾವಿಗೆ ಹಲ್ಲೆ ಮಾಡಲು ಮುಮದಾದರೆ ವ್ಯಕ್ತಿಗೂ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ಎರಡು ಉದ್ದದ ದೊಣ್ಣೆಗಳನ್ನು ಹಿಡಿದು ಹೆಬ್ಬಾವಿನ ಹಿಡಿತ ಸಡಿಸಲು ಮುಂದಾಗಿದ್ದಾರೆ. ಆದರೆ, ಹಾವು ತನಗೆ ಹಾನಿ ಆಗುವುದನ್ನು ಎಚ್ಚೆತ್ತು ಬೇಟೆಯ ಮೇಲೆ ಬಿಗಿ ಹಿಡಿತ ಹೆಚ್ಚಿಸಿದೆ. ಆಗ ಬಹಿರ್ದೆಸೆಗೆ ಕುಳಿತ ವ್ಯಕ್ತಿ ಹಾವಿನ ದಾಳಿಯಿಂದ ನರಳಲು ಶುರುಮಾಡಿದ್ದಾನೆ.
ರಣಭೀಕರ ಮಳೆಯಿಂದ ಉತ್ತರ ಕನ್ನಡದಲ್ಲಿ ಇನ್ನೂ ತಗ್ಗದ ಸಾವಿನ ಸರಣಿ; ಸ್ಥಳದಲ್ಲೇ ಅಪ್ಪಚ್ಚಿಯಾದ ಸ್ಕೂಟರ್ ಸವಾರ
ಹಾವಿನ ಹಿಡಿತದಿಂದ ವ್ಯಕ್ತಿಯನ್ನು ಕಾಪಾಡಲು ಹಾವಿನ ಮೇಲೆ ಹರಿತ ಆಯುಧಗಳಿಂದ ದಾಳಿ ಮಾಡುವುದೇ ಲೇಸು ಎಂದರಿತ ಗ್ರಾಮಸ್ಥರು ಕೊಡಲಿಯಿಂದ ಹಾವಿನ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಹಾವು ಕೊಡಲಿ ಏಟುಗಳನ್ನು ತಾಳಲಾರದೇ ಒದ್ದಾಡುತ್ತಾ ತನ್ನ ಹಿಡಿತವನ್ನು ಸಡಿಲಿಸಿದೆ. ಆಗ ಹಾವು ತಂತಾನೇ ಬಾಯೊಳಗೆ ನುಂಗಿದ್ದ ವ್ಯಕ್ತಿಯ ಕೈಯನ್ನು ಹೊರಗೆ ಉಗುಳಿದೆ. ಆಗ ಹಾವಿನ ದಾಳಿಗೊಳಗಾದ ವ್ಯಕ್ತಿ ಹಾವಿನಿಂದ ತಪ್ಪಿಸಿಕೊಂಡಿದ್ದಾನೆ. ಆದರೆ, ಗ್ರಾಮಸ್ಥರು ದಾಳಿ ಮಾಡಿದ ಹಾವನ್ನು ಉಳಿಸಬಾರದು ಎಂದು ಅದರ ಮೇಲೆ ತೀವ್ರವಾಗಿ ದಾಳಿ ಮಾಡಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ಣ ಬಿಹಾರಿ ಸಿಂಗ್ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಕೆಲವರು ಹಾವನ್ನು ಕೊಂದಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನೀವು ಆ ವ್ಯಕ್ತಿಯನ್ನು ಉಳಿಸಲು ಧೈರ್ಯವಾಗಿ ಹಾವಿನ ಮೇಲೆ ದಾಳಿ ಮಾಡಿದ್ದು ಒಳ್ಳೆಯ ಕಾರ್ಯ ಎಂದು ಹೇಳಿದ್ದಾರೆ.