ನವದೆಹಲಿ(ಮೇ.12): ಕೊರೋನಾ ಲಸಿಕೆ ವಿತರಣೆ ವೇಳೆ ಮೊದಲ ಡೋಸ್‌ ಪಡೆದ ಫಲಾನುಭವಿಗಳಿಗೆ ಆದ್ಯತೆ ಆಧಾರದ ಮೇರೆಗೆ 2ನೇ ಡೋಸ್‌ ಲಸಿಕೆ ನೀಡಲು ಕ್ರಮ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಅಲ್ಲದೆ ಕೇಂದ್ರ ಸರ್ಕಾರದಿಂದ ಪಡೆಯುವ ಲಸಿಕೆಗಳ ಪೈಕಿ ಕನಿಷ್ಠ ಶೇ.70ರಷ್ಟುಲಸಿಕೆಯನ್ನು 2ನೇ ಡೋಸ್‌ ಪಡೆಯಬೇಕಿರುವ ಫಲಾನುಭವಿಗಳಿಗೆ ಮೀಸಲಿಡುವಂತೆ ಸೂಚಿಸಲಾಗಿದೆ. ಈ ಕುರಿತಾಗಿ ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮತ್ತು ಕೋವಿಡ್‌ ನಿರ್ವಹಣೆ ಮತ್ತು ತಾಂತ್ರಿಕ ಗ್ರೂಪ್‌ನ ಅಧ್ಯಕ್ಷ ಡಾ.ಆರ್‌.ಎಸ್‌ ಶರ್ಮಾ ಅವರು ಉನ್ನತ ಹಂತದ ಸಭೆ ನಡೆಸಿದರು.

ಈ ವೇಳೆ ದೇಶದೆಲ್ಲೆಡೆ ಲಸಿಕೆಯ 2ನೇ ಡೋಸ್‌ಗಾಗಿ ದೊಡ್ಡ ಸಂಖ್ಯೆಯ ಫಲಾನುಭವಿಗಳು ಕಾಯುತ್ತಿದ್ದಾರೆ. ಹೀಗಾಗಿ ಲಸಿಕೆ ಅನುಪಯುಕ್ತವಾಗದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.