ಲವ್‌ ಜಿಹಾದ್‌ ಸತ್ಯ; ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ| 2030ಕ್ಕೆ ದೇಶವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡಲು ಸಂಚು| ಫ್ರಾನ್ಸ್‌ನಲ್ಲಿ ಈಗಾಗಲೇ ಇದು ನಡೆದಿದೆ| ಕೇರಳದ ವಿವಾದಾತ್ಮಕ ಶಾಸಕ ಜಾರ್ಜ್ ಹೇಳಿಕೆ

ತಿರುವನಂತಪುರ(ಏ.13): ‘ಲವ್‌ ಜಿಹಾದ್‌’ ಎಂಬುದು ಸತ್ಯ. ಇದನ್ನು ಬಳಸಿಕೊಂಡು ಭಾರತವನ್ನು 2030ರ ವೇಳೆಗೆ ‘ಇಸ್ಲಾಮಿಕ್‌ ರಾಷ್ಟ್ರ’ ಮಾಡುವ ಸಂಚು ನಡೆದಿದೆ. ಹೀಗಾಗಿ ಇದರ ತಡೆಗೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಎಂದು ಕೇರಳದ ವಿವಾದಾತ್ಮಕ ಶಾಸಕ, ಕೇರಳ ಜನಪಕ್ಷಂ ಅಧ್ಯಕ್ಷ ಪಿ.ಸಿ. ಜಾರ್ಜ್ ಆಗ್ರಹಿಸಿದ್ದಾರೆ.

ಇಡುಕ್ಕಿ ಜಿಲ್ಲೆಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಈಗಾಗಲೇ ಕ್ರೈಸ್ತ ದೇಶವಾಗಿದ್ದ ಫ್ರಾನ್ಸ್‌ನಲ್ಲಿ ಮುಸ್ಲಿಮರ ಹಾವಳಿ ಹೆಚ್ಚಿದೆ. ಆ ದೇಶವನ್ನು ಮುಸ್ಲಿಂ ದೇಶವನ್ನಾಗಿ ಮಾಡುವ ಯತ್ನ ನಡೆದಿದೆ. ಅದೇ ರೀತಿ ಭಾರತವನ್ನೂ 2030ಕ್ಕೆ ಇಸ್ಲಾಮಿಕ್‌ ದೇಶ ಮಾಡಲು ಮುಸ್ಲಿಮರು ಸಂಚು ನಡೆಸಿದ್ದಾರೆ. ಇದಕ್ಕೆ ಎಡರಂಗ ಹಾಗೂ ಕಾಂಗ್ರೆಸ್‌ ಕೈಜೋಡಿಸಿವೆ’ ಎಂದು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

‘ಭಾರತನ್ನು ಇಸ್ಲಾಮಿಕ್‌ ದೇಶ ಮಾಡಲು ಈ ಹಿಂದೆಯೇ ಯತ್ನ ಆರಂಭವಾಗಿದ್ದವು. ಆದರೆ ನರೇಂದ್ರ ಮೋದಿ ಅವರು ನೋಟು ರದ್ದತಿ ಕ್ರಮ ಕೈಗೊಂಡಿದ್ದರಿಂದ ಇದಕ್ಕೆ ಹಿನ್ನಡೆ ಆಯಿತು’ ಎಂದಿದ್ದಾರೆ.

‘ಲವ್‌ ಜಿಹಾದ್‌ ಎಂಬುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳುತ್ತದೆ. ಆದರೆ ಲವ್‌ ಜಿಹಾದ್‌ ಸತ್ಯ. ಒಂದು ಧರ್ಮಕ್ಕೆ ಈ ದೇಶವನ್ನು ಕೊಡಬೇಕೆ? ಇದಕ್ಕೆಲ್ಲ ಪರಿಹಾರವೆಂದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು’ ಎಂದು ಜಾರ್ಜ್ ಹೇಳಿದ್ದಾರೆ.