ಅಮೆರಿಕ ನೂತನ ಅಧ್ಯಕ್ಷ ಬೈಡೆನ್‌ಗೆ ಮೋದಿ ಶುಭಾಶಯ, ಹೇಳೇ ಬಿಟ್ರು ಈ ಮಾತು!
ಅಮೆರಿಕ ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಪಿಎಂ ಮೋದಿ ಶುಭಾಶಯ| ಟ್ವೀಟ್ ಮಾಡಿ ಶುಭ ಕೋರಿದ ಮೋದಿ| ಕಮಲಾ ಹ್ಯಾರಿಸ್ ಗೆಲುವು ಭಾರತೀಯ ಅಮೆರಿಕನ್ನರಿಗೆ ಹೆಮ್ಮೆಯ ಸಂಗತಿ ಎಂದ ಪ್ರಧಾನಿ
ನವದೆಹಲಿ(ನ.08): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರದಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬೈಡೆನ್‌ಗೆ ಶುಭ ಕೋರಿದ್ದಾರೆ. ಇದೇ ವೇಳೆ ಅವರು ಉಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಪಟ್ಟ ಶ್ರಮವನ್ನೂ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಟ್ವೀಟ್‌ನಲ್ಲಿ ಈ ಬಾರಿ ಅಮೆರಿಕ ಉಪ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ಗೂ ಶುಭ ಕೋರಿದ್ದು, ಅವರ ಜಯ ಭಾರತೀಯ ಅಮೆರಿಕನ್ನರಿಗೆ ಒಂದು ಹೆಮ್ಮೆಯ ವಿಚಾರ ಎಂದಿದ್ದಾರೆ.
"
ಟ್ವೀಟ್ ಮಾಡಿರುವ ಪಿಎಂ ಮೋದಿ 'ಅಭೂತಪೂರ್ವ ಜಯ ಸಾಧಿಸಿರುವ ಜೋ ಬೈಡೆನ್‌ಗೆ ಶುಭಾಶಯ. ಉಪ ರಾಷ್ಟ್ರಪತಿಯಾಗಿದ್ದಾಗ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಗಟ್ಟಿಗೊಳಿಸುವ ನಿಮ್ಮ ಯತ್ನ ಮಹತ್ವಪೂರ್ಣ ಹಾಗೂ ಅಮೂಲ್ಯವಾದದ್ದು. ನಾನು ಭಾರತ ಹಾಗೂ ಅಮೆರಿಕ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತೊಂದು ಬಾರಿ ಒಟ್ಟಾಗಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ; ಎಂದಿದ್ದಾರೆ.
ಇನ್ನು ಕಮಲಾ ಹ್ಯಾರಿಸ್‌ಗೆ ಶುಭ ಕೋರಿರುವ ಪಿಎಂ ಕಮಲಾ ಹ್ಯಾರಿಸ್ ನಿಮಗೆ ಶುಭಾಶಯ. ನಿಮ್ಮ ಗೆಲುವು ಎಲ್ಲರಿಗೂ ಪ್ರೇರಣೆ ಹಾಗೂ ಇದು ಎಲ್ಲಾ ಭಾರತೀಯ ಅಮೆರಿಕನ್ನರಿಗೆ ಹೆಮ್ಮೆಯ ವಿಚಾರ' ಎಂದಿದ್ದಾರೆ. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಯಾಕೆಂದರೆ ಅವರು ಈ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾರೆ.