ದೇಶದ ಜನರಲ್ಲಿ ದೇಶಭಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕೆ ಈ ಬಾರಿಯ ಲೋಕಮಾನ್ಯ ತಿಲಕ್‌ ಪ್ರಶಸ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದಾರೆ.

ಪುಣೆ: ದೇಶದ ಜನರಲ್ಲಿ ದೇಶಭಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕೆ ಈ ಬಾರಿಯ ಲೋಕಮಾನ್ಯ ತಿಲಕ್‌ ಪ್ರಶಸ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ತಿಲಕ್‌ರ 103ನೇ ಪುಣ್ಯಸ್ಮರಣೆಯಂದು ಪ್ರದಾನ ಮಾಡಲಾಗುತ್ತದೆ. ಈ ಕುರಿತು ಮಾತನಾಡಿದ ಲೋಕಮಾನ್ಯ ತಿಲಕ್‌ ಟ್ರಸ್ಟ್‌ ಅಧ್ಯಕ್ಷ ದೀಪಕ್‌,‘ದೇಶದ ಜನರಲ್ಲಿ ರಾಷ್ಟ್ರಪ್ರೇಮವನ್ನು ಎಚ್ಚರಿಸಿ ವಿಶ್ವದಲ್ಲಿ ಭಾರತಕ್ಕೆ ಅಪಾರ ಗೌರವವನ್ನು ತರುವಲ್ಲಿ ಪ್ರಧಾನ ಮಂತ್ರಿ ಅವರ ಪರಿಶ್ರಮವನ್ನು ಪರಿಗಣಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

ಪುಣೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎನ್‌ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಅನೇಕರ ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉತ್ತಮ ನಾಯಕತ್ವ ಗುಣ ಹಾಗೂ ದೇಶದ ನಾಗರಿಕರಲ್ಲಿ ದೇಶಾಭಿಮಾನವನ್ನು ಮೂಡಿಸಿದ ಕಾರಣಕ್ಕೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಆಯೋಜಕರು ಹೇಳಿದ್ದಾರೆ. ಲೋಕಮಾನ್ಯ ತಿಲಕರ 103ನೇ ಪುಣ್ಯತಿಥಿಯಾದ ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ (ಹಿಂದ್ ಸ್ವರಾಜ್ ಸಂಘ) ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದೀಪಕ್ ತಿಲಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿಯಲ್ಲಿ ಪ್ರಧಾನ ಮಂತ್ರಿಯವರ ಸರ್ವೋಚ್ಚ ನಾಯಕತ್ವದಲ್ಲಿ ಭಾರತವು ಪ್ರಗತಿಯ ಏಣಿಯನ್ನು ಏರಿದೆ ಎಂದು ತಿಲಕ್ ಟ್ರಸ್ಟ್ ಹೇಳಿದೆ. ಪ್ರಧಾನಿ ಮೋದಿಯವರು ಜಾಗತಿಕ ಭೂಪಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದಾರೆ. ಹೀಗಾಗಿ ತಿಲಕ್ ಸ್ಮಾರಕ ಟ್ರಸ್ಟ್ ಅವಿರೋಧವಾಗಿ ಪ್ರಧಾನಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಂಘಟಕರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಗವರ್ನರ್ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಭಾಗವಹಿಸಲಿದ್ದಾರೆ. ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ 8 ಎಂಎಲ್‌ಎಗಳು ಪ್ರಸ್ತುತ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಸೇರಿದ್ದರು.