ನವದೆಹಲಿ(ಡಿ.31): ಕರ್ನಾಟಕದ ವಿಧಾನಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ಸಾವಿಗೆ ಆಘಾತ ವ್ಯಕ್ತಪಡಿಸಿರುವ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಧರ್ಮೇಗೌಡರ ಸಾವಿನಿಂದ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುವೆ. ಅವರು ಸಭಾಪತಿ ಸ್ಥಾನದಲ್ಲಿ ಕೂತಾಗ ಇತ್ತೀಚೆಗೆ ನಡೆದ ದುರದೃಷ್ಟಕರ ಘಟನೆಯು ಪ್ರಜಾಪ್ರಭುತ್ವದ ಮೇಲೆ ನಡೆದ ಗಂಭೀರ ದಾಳಿಯಾಗಿತ್ತು. ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ವಿಧಾನಪರಿಷತ್ತಿನಲ್ಲಿ ಅವರನ್ನು ಸದಸ್ಯರು ಎಳೆದಾಡಿದ ಘಟನೆಯನ್ನು ಬಿರ್ಲಾ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

‘ಶಾಸನಸಭೆಗಳ ಹಿರಿಮೆಯನ್ನು ಹಾಗೂ ಸಭಾಪತಿಗಳ ಸ್ವಾತಂತ್ರ್ಯ ಮತ್ತು ಗೌರವವನ್ನು ರಕ್ಷಿಸುವುದು ಎಲ್ಲರ ಕರ್ತವ್ಯ’ ಎಂದೂ ಬಿರ್ಲಾ ಹೇಳಿದ್ದಾರೆ.

ಧರ್ಮೇಗೌಡರ ಮೃತದೇಹ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಬಳಿ ರೈಲು ಹಳಿ ಮೇಲೆ ಸೋಮವಾರ ತಡರಾತ್ರಿ ಪತ್ತೆಯಾಗಿತ್ತು.