ನಾನು ಇರುವವರೆಗೂ ನೆರೆ ದೇಶದ ಮುಸ್ಲಿಮೇತರರ ಅನುಕೂಲಕ್ಕೆ ಇರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದಾಗದು’ ಎಂದು ಪ್ರಧಾನಿ ನರೇಂದ್ರ ಮೋದಿ ಖಂಡ ತುಂಡವಾಗಿ ಹೇಳಿದ್ದಾರೆ.

ಬ್ಯಾರಕ್‌ಪುರ/ಹೂಗ್ಲಿ (ಮೇ.13): ಪ. ಬಂಗಾಳದ ಟಿಎಂಸಿ ಆಡಳಿತದಲ್ಲಿ ಹಿಂದೂಗಳು 2ನೇ ದರ್ಜೆ ನಾಗರಿಕರಾಗಿ ಪರಿವರ್ತಿತರಾಗಿದ್ದಾರೆ. ಇಲ್ಲಿ ಒಂದು ಕೋಮನ್ನು ಓಲೈಸಲು ಹಿಂದೂಗಳನ್ನು ತುಳಿಯುವ ಯತ್ನ ನಡೆದಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನು ಇರುವವರೆಗೂ ನೆರೆ ದೇಶದ ಮುಸ್ಲಿಮೇತರರ ಅನುಕೂಲಕ್ಕೆ ಇರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದಾಗದು’ ಎಂದು ಖಂಡ ತುಂಡವಾಗಿ ಹೇಳಿದ್ದಾರೆ.

ಬಂಗಾಳದ ಬ್ಯಾರಕ್‌ಪುರ ಹಾಗೂ ಹೂಗ್ಲಿ ಜಿಲ್ಲೆಗಳಲ್ಲಿ ಬಿಜೆಪಿ ಪರ ಭಾನುವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ‘ಬಂಗಾಳದಲ್ಲಿ ಹಿಂದೂಗಳು 2ನೇ ದರ್ಜೆ ನಾಗರಿಕರಾಗಿಬಿಟ್ಟಿದ್ದಾರೆ. ಅವರಿಗೆ ರಾಮನವಮಿ ಸೇರಿ ಹಿಂದೂಗಳ ಹಬ್ಬ ಆಚರಿಸಲು ಕೂಡ ಯಾವುದೇ ಸ್ವಾತಂತ್ರ್ಯ ಇಲ್ಲವಾಗಿದೆ. ಹಿಂದೂಗಳನ್ನು ಭಾಗೀರಥಿ ನದಿಗೆ ಎಸೆಯುವ ಹೇಳಿಕೆಗಳನ್ನು ಟಿಎಂಸಿ ನಾಯಕರು (ಟಿಎಂಸಿ ಶಾಸಕ ಹುಮಾಯೂನ್ ಕಬೀರ್‌) ನೀಡುತ್ತಿದ್ದಾರೆ. ರಾಜ್ಯದಲ್ಲಿ ಬರೀ ಒಂದು ಕೋಮಿನ ಓಲೈಕೆ ನಡೆದಿದೆ’ ಎಂದು ಆರೋಪಿಸಿದರು.

ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿದ ಅವರು, ‘ಮೊದಲು ತನಿಖಾ ಏಜೆನ್ಸಿಗಳನ್ನು ಸಂದೇಶ್‌ಖಾಲಿಗೆ ಹೋಗದಂತೆ ಬೆದರಿಸುವ ಯತ್ನ ನಡೆಯಿತು. ಆರೋಪಿಗಳ ರಕ್ಷಣೆಗೆ ಪೊಲೀಸರು ಯತ್ನಿಸಿದರು. ಇಂದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರನ್ನು ಬೆದರಿಸಿ ದೂರು ಹಿಂಪಡೆಯುವಂತೆ ಬಲವಂತ ಮಾಡುವ ಯತ್ನಗಳನ್ನು ಟಿಎಂಸಿ ನಡೆಸುತ್ತಿದೆ. ಇದಕ್ಕೆಲ್ಲ ಕಾರಣ ಇದರ ಮುಖ್ಯ ಆರೋಪಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ಮನೆಗೆ ನೀರು ನನ್ನ ಧ್ಯೇಯ, ಪ್ರತಿ ಮನೆಗೆ ಬಾಂಬ್‌ ಟಿಎಂಸಿ ಧ್ಯೇಯ’ ಎಂದು ರಾಜ್ಯದ ಸಂದೇಶ್‌ಖಾಲಿಯ ಟಿಎಂಸಿ ನಾಯಕರ ಮನೆಗಳಲ್ಲಿ ಬಾಂಬ್‌ ಪತ್ತೆಯಾದ ಘಟನೆಗಳನ್ನು ಉದಾಹರಿಸಿದರು. ಇದೇ ವೇಳೆ, ‘ನೆರೆಯ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಮಹತ್ವದ್ದು. ಪೌರತ್ವ ನೀಡುವ ಸಿಎಎ ಕಾಯ್ದೆ ವಿರುದ್ಧ ಇಂದು ಟಿಎಂಸಿ ಹಾಗೂ ಕಾಂಗ್ರೆಸ್‌ ಮಾತನಾಡುತ್ತಿವೆ. ಆದರೆ ನಾನು ಇರುವವರೆಗೂ ಸಿಎಎ ರದ್ದಾಗಲು ಬಿಡುವುದಿಲ್ಲ’ ಎಂದು ಗುಡುಗಿದರು.

ಹತಾಶೆಯಿಂದ ‘ಪ್ರಧಾನಿ ಮೋದಿ ಸಮಾಧಿ’ ಹೇಳಿಕೆ: ಸಿಎಂ ಸಿದ್ದರಾಮಯ್ಯ

ರಾಹುಲ್‌ ವಯಸ್ಸಷ್ಟೂ ಕಾಂಗ್ರೆಸ್‌ ಸೀಟಿಲ್ಲ: ಇನ್ನು ರಾಹುಲ್‌ ಗಾಂಧಿ ಅವರ ವಯಸ್ಸಿನಷ್ಟೂ ಕಾಂಗ್ರೆಸ್‌ಗೆ ಸೀಟು ಬರುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ 400 ಸ್ಥಾನ ಬರುವುದು ಗ್ಯಾರಂಟಿ ಎಂದು ಹೇಳಿದರು.