ಈ ಬಾರಿ ಎರಡು ಶಕ್ತಿಗಳ ನಡುವೆ ಚುನಾವಣೆ: ಗೆದ್ದ ಬಳಿಕ ಪಿಎಂ ಆಯ್ಕೆ ಎಂದ ರಾಹುಲ್ ಗಾಂಧಿ
ಲೋಕಸಭಾ ಚುನಾವಣೆಯಲ್ಲಿ ಗೆದ್ದನಂತರ ಪ್ರಧಾನಿ ಯಾರಾಗುತ್ತಾರೆ ಎಂದು ಇಂಡಿಯಾ ಮೈತ್ರಿಕೂಟ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಯನಾಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ತಿಳಿಸಿದರು.
ನವದೆಹಲಿ (ಏ.06): ಲೋಕಸಭಾ ಚುನಾವಣೆಯಲ್ಲಿ ಗೆದ್ದನಂತರ ಪ್ರಧಾನಿ ಯಾರಾಗುತ್ತಾರೆ ಎಂದು ಇಂಡಿಯಾ ಮೈತ್ರಿಕೂಟ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಯನಾಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ತಿಳಿಸಿದರು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ಸದ್ಯಕ್ಕೆ ಹೇಳಲಾಗುವುದಿಲ್ಲ.
ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಇಂಡಿಯಾ ಮೈತ್ರಿಕೂಟದೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಹೇಳುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಜಯ ಗಳಿಸಲಿದೆ. ಈ ಚುನಾವಣೆ ಪ್ರಮುಖವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿರುವ ಶಕ್ತಿ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸುತ್ತಿರುವ ಶಕ್ತಿ ನಡುವೆ ನಡೆಯುವ ಚುನಾವಣೆ ಎಂದರು.
ಕುಮಾರಸ್ವಾಮಿ ಆಗಮನದಿಂದ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಬಲ: ಡಾ.ಕೆ.ಸುಧಾಕರ್
ಬಿಜೆಪಿ ಯೋಜನೆಗಳ ಮರು ತನಿಖೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಹಲವು ಭರವಸೆಗಳನ್ನು ಘೋಷಿಸಿದೆ. ಇದರ ಜೊತೆಗೆ ಬಿಜೆಪಿ ಕಾಲದ ರಫೇಲ್ ಡೀಲ್, ನೋಟು ಅಪನಗದೀಕರಣ, ಚುನಾವಣಾ ಬಾಂಡ್‌ಗಳ ಬಗ್ಗೆ ಪ್ರಸ್ತಾಪಿಸಿದೆ. ಭ್ರಷ್ಟಾಚಾರ ನಿರ್ಮೂಲನೆಯ ಭರವಸೆಯನ್ನು ನೀಡಿರುವ ಕಾಂಗ್ರೆಸ್, ‘ಮೋಸ ಮಾಡಿದವರಿಗೆ ದೇಶ ತೊರೆಯಲು ಬಿಜೆಪಿ ಅನುಮತಿ ನೀಡಿದೆ.
ಅವರನ್ನು ಇಂದಿಗೂ ವಾಪಾಸ್ ಕರೆಸುವುದಕ್ಕೆ ಆಗಿಲ್ಲ, ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಎನ್‌ಡಿಎ ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿರುವ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇವೆ’ ಎಂದಿದೆ. ಜೊತೆಗೆ, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ, 500 ,ರು.1000 ಮುಖ ಬೆಲೆಯ ನೋಟು ನಿಷೇಧದ ಕುರಿತು ಮರು ತನಿಖೆ ನಡೆಸುವುದಾಗಿ ಉಲ್ಲೇಖಿಸಿದೆ. ಇದರ ಜೊತೆಗೆ ಸದ್ಯ ಭಾರಿ ವಿವಾದವನ್ನು ಸೃಷ್ಟಿಸಿರುವ ಎಲೆಕ್ಟೋರಲ್ ಬಾಂಡ್ ಬಗ್ಗೆಯೂ ತನಿಖೆ ನಡೆಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.
ಕಾಂಗ್ರೆಸ್ ಪ್ರಣಾಳಿಕೆಗೆ ಥಾಯ್ಲೆಂಡ್ ನ್ಯೂಯಾರ್ಕ್ ಫೋಟೋ ಬಳಕೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳು ಸುಳ್ಳಿನ ಕಂತೆಗಳಾಗಿದ್ದು, ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಯತ್ನಿಸುತ್ತಿದೆ. ಜೊತೆಗೆ ಪ್ರಣಾಳಿಕೆಯಲ್ಲಿ ನ್ಯೂಯಾರ್ಕ್ ಹಾಗೂ ಥಾಯ್ಲೆಂಡ್ ಪೋಟೋಗಳನ್ನು ಬಳಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ, ಮತದಾರರಲ್ಲಿ ಗೊಂದಲ ಉಂಟುಮಾಡುವಂತಹ ಪ್ರಣಾಳಿಕೆಗಳನ್ನು ಕಾಂಗ್ರೆಸ್ ಘೋಷಿಸಿದೆ. ದಶಕಗಳಿಂದ ಆಧಿಕಾರದಲ್ಲಿದ್ದ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸರಿರಲಿಲ್ಲ. ಈಗ ನ್ಯಾಯದ ಬಗ್ಗೆ ಮಾತನಾಡುತ್ತಿದೆ ಎಂದು ದೂರಿದರು.
ಕುಮಾರಸ್ವಾಮಿ ಸಹಕಾರ ಕೇಳಿದ್ದಾರೆಯೇ ವಿನಾ ಪ್ರಚಾರಕ್ಕೆ ಬನ್ನಿ ಎಂದಿಲ್ಲ: ಸುಮಲತಾ ಅಂಬರೀಶ್
ಪ್ರಣಾಳಿಕೆಯಲ್ಲಿ ಬಳಸಿರುವ ಫೋಟೊಗಳು ನ್ಯೂಯಾರ್ಕ್, ಥಾಯ್ಲೆಂಡ್ ಫೋಟೋಗಳಾಗಿದ್ದು, ಕಾಂಗ್ರೆಸ್‌ನ ಗಂಭೀರತೆಯನ್ನು ಮತದಾರರೇ ಅರ್ಥ ಮಾಡಿಕೊಳ್ಳಬೇಕು ಎಂದರು. ಪರಿಸರ ವಿಭಾಗದಲ್ಲಿ ಬಳಸಲಾದ ಫೋಟೋವನ್ನು ತೋರಿಸಿದ ತ್ರಿವೇದಿ, ರಾಹುಲ್ ಗಾಂಧಿಯವರ ನೆಚ್ಚಿನ ತಾಣವಾದ ಥಾಯ್ಲೆಂಡ್‌ನ ಫೋಟೋ ಇದಾಗಿದೆ. ತಮ್ಮ ಪಕ್ಷದ ಪ್ರಣಾಳಿಕೆಯನ್ನು ಯಾರು ತಯಾರಿಸುತ್ತಿದ್ದಾರೆ ಎಂಬುದನ್ನು ಪಕ್ಷವೇ ತಿಳಿದುಕೊಂಡಿಲ್ಲ. ಅಂಥದ್ದರಲ್ಲಿ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂಬುದು ಎಷ್ಟರ ಮಟ್ಟಿಗೆ ನಂಬಬೇಕು ಎಂದು ಹಾಸ್ಯವಾಡಿದರು.