ಸಾವಿರಾರು ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಪಡೆದಿರುವ ಕಾಂಗ್ರೆಸ್‌ ಪಕ್ಷ, ಶೀಘ್ರದಲ್ಲೇ ಇನ್ನೂ ಮೂರು ನೋಟಿಸ್‌ ಸ್ವೀಕರಿಸಲಿದೆ ಎಂದು ಹೇಳಲಾಗಿದ್ದು, ದಿನದಿಂದ ದಿನಕ್ಕೆ ಪಕ್ಷದ ಸಂಕಷ್ಟ ಹೆಚ್ಚುತ್ತಾ ಸಾಗಿದೆ. 

ನವದೆಹಲಿ (ಮಾ.31): ಸಾವಿರಾರು ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಪಡೆದಿರುವ ಕಾಂಗ್ರೆಸ್‌ ಪಕ್ಷ, ಶೀಘ್ರದಲ್ಲೇ ಇನ್ನೂ ಮೂರು ನೋಟಿಸ್‌ ಸ್ವೀಕರಿಸಲಿದೆ ಎಂದು ಹೇಳಲಾಗಿದ್ದು, ದಿನದಿಂದ ದಿನಕ್ಕೆ ಪಕ್ಷದ ಸಂಕಷ್ಟ ಹೆಚ್ಚುತ್ತಾ ಸಾಗಿದೆ. ಇತ್ತೀಚೆಗಷ್ಟೇ ₹1823 ಕೋಟಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್‌ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿತ್ತು. ಅದಕ್ಕೂ ಮೊದಲು ಪಕ್ಷದ ಹಲವು ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿತ್ತು. ಪಕ್ಷ ನಡೆಸಿರುವ ಅಕ್ರಮಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿರುವುದರಿಂದ ಯಾವುದೇ ನ್ಯಾಯಾಂಗ ಸಂಸ್ಥೆಯಿಂದ ತನಿಖೆಗೆ ತಡೆ ತರುವುದಕ್ಕೆ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೆ 2500 ಕೋಟಿ ರು. ತೆರಿಗೆ ಬಾಕಿ ಪಾವತಿಯ ನೋಟಿಸ್‌ ಜಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಇವೆಲ್ಲದರ ಮೂಲ 2013ರಿಂದ 2019ರ ನಡುವೆ ಪಕ್ಷವು ನಗದು ರೂಪದಲ್ಲಿ ಪಡೆದಿರುವ 626 ಕೋಟಿ ರು. ಹಣ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಇದರಲ್ಲಿ ಹೆಚ್ಚಿನ ಪಾಲನ್ನು ಮೇಘಾ ಎಂಜಿನಿಯರಿಂಗ್‌ ಎಂಬ ಕಂಪನಿ ದೇಣಿಗೆ ನೀಡಿದೆ. ಇದು ಕಾಂಗ್ರೆಸ್‌ನ ಕಟ್ಟಾಳು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರ ಆಪ್ತರ ಕಂಪನಿಯಾಗಿದೆ. ಈ ಕಂಪನಿಗೆ ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ ನೀಡಿರುವ ಕಾಮಗಾರಿಗಳ ಗುತ್ತಿಗೆಗೆ ಪ್ರತಿಯಾಗಿ ಲಂಚದ ರೂಪದಲ್ಲಿ ಪಕ್ಷಕ್ಕೆ ಹಣ ಸಂದಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿರುವುದಾಗಿ ನ್ಯೂಸ್‌18 ವರದಿ ಮಾಡಿದೆ.

ತೆರಿಗೆ ವಿನಾಯ್ತಿ ಸಿಗದಿರುವುದಕ್ಕೆ ಕಾರಣ: ಕಾಂಗ್ರಸ್‌ ಪಕ್ಷ ನಡೆಸಿರುವ ಎಲ್ಲ ಹಣಕಾಸು ವ್ಯವಹಾರಕ್ಕೂ ದಾಖಲೆಗಳು ಲಭ್ಯವಾಗಿವೆ. ಕಮಲನಾಥ್‌ ಅವರ ಅಧಿಕೃತ ನಿವಾಸದಿಂದಲೇ ಎಐಸಿಸಿ ಕಚೇರಿಗೆ 20 ಕೋಟಿ ರು. ನಗದು ಸಂದಾಯವಾಗಿದೆ. ಹೀಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು, ಆದಾಯ ತೆರಿಗೆ ಕಾಯ್ದೆಯ 13ಎ ಸೆಕ್ಷನ್‌ ಪ್ರಕಾರ ರಾಜಕೀಯ ಪಕ್ಷವು ನಗದು ರೂಪದಲ್ಲಿ 2000 ರು.ಗಿಂತ ಹೆಚ್ಚು ಹಣವನ್ನು ಪಡೆಯದಿದ್ದರೆ ಮಾತ್ರ ಆದಾಯ ತೆರಿಗೆಯಿಂದ ವಿನಾಯ್ತಿ ಸಿಗಲಿದೆ. ಆದರೆ ಕಾಂಗ್ರೆಸ್‌ ಪಕ್ಷ ನೂರಾರು ಕೋಟಿ ರು.ಗಳನ್ನು ನಗದು ರೂಪದಲ್ಲಿ ಪಡೆದಿದೆ. ಹೀಗಾಗಿ ಅಷ್ಟೂ ಆದಾಯಕ್ಕೆ ಅದು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ.ಶಿವಕುಮಾರ್‌ಗೆ ಮತ್ತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌!

ಚುನಾವಣೆ ಸಮಯದಲ್ಲಿ ನೋಟಿಸ್‌ ಏಕೆ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಪಕ್ಷಕ್ಕೆ ನೋಟಿಸ್‌ ನೀಡಿರುವ ಬಗ್ಗೆ ವ್ಯಕ್ತವಾಗಿರುವ ಟೀಕೆಗೂ ಮೂಲಗಳು ಸ್ಪಷ್ಟನೆ ನೀಡಿದ್ದು, ‘2024ರ ಮಾರ್ಚ್‌ 31ಕ್ಕೆ ಆದಾಯ ತೆರಿಗೆ ಅಸೆಸ್‌ಮೆಂಟ್‌ ಮುಗಿಯಬೇಕಿರುವುದರಿಂದ ಈ ಸಮಯದಲ್ಲೇ ನೋಟಿಸ್‌ ನೀಡಲಾಗಿದೆ’ ಎಂದು ಹೇಳಿವೆ. ಕಾಂಗ್ರೆಸ್‌ ಪಕ್ಷ ತಾನು ಮುಗ್ಧ ಎಂದು ಹೇಳಿಕೊಳ್ಳುತ್ತಿದೆ. ಅದಕ್ಕೆ ಧೈರ್ಯವಿದ್ದರೆ ಅಸೆಸ್‌ಮೆಂಟ್‌ ಆದೇಶದ ಸಂಪೂರ್ಣ ದಾಖಲೆಯನ್ನು ಬಿಡುಗಡೆ ಮಾಡಲಿ. ಆಗ ಆ ಪಕ್ಷ ಎಸಗಿರುವ ಅಕ್ರಮಗಳು ಎಲ್ಲರಿಗೂ ತಿಳಿಯುತ್ತವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.