ನವದೆಹಲಿ(ಏ.16): ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆ ವೇಗ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ 12,000ಕ್ಕೇರಿಕೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಹೊಸ ಸೂತ್ರ ಮುಂದಿಟ್ಟಿದ್ದಾರೆ. ಮೋದಿ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್ ಪ್ಲಾನ್‌ನಿಂದ ಕೊರೋನಾ ನಿಯಂತ್ರಣ ಸಾಧ್ಯವಿಲ್ಲ. ಲಾಕ್‌ಡೌನ್‌ನಿಂದ ಕೊರೋನಾ ಹರಡುವಿಕೆ ಪ್ರಮಾಣ ತಗ್ಗಬಹುದು. ಆದರೆ ಕೊರೋನಾ ನಿರ್ಮೂಲನೆ ಅಸಾಧ್ಯ ಎಂದು ರಾಹುಲ್ ಹೇಳಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ 3 ಕಠಿಣ ಕ್ರಮ ಇಂದಿನಿಂದಲೇ ಜಾರಿ.

ಕೇಂದ್ರ ಸರ್ಕಾರ ಇದೀಗ ಪರಿಣಾಮಕಾರಿಯಾಗಿ ಹಾಗೂ ಆಕ್ರಮಣಕಾರಿಯಾಗಿ ಪರೀಕ್ಷೆಗೆ ಒಳಪಡಿಸವುದೇ ಹೆಚ್ಚು ಸೂಕ್ತ. ವೈರಸ್ ಬೆನ್ನಟ್ಟಿ ಹೋಗಬೇಕಿದೆ. ಸೋಂಕಿತರು ಸಂಪರ್ಕಿಸಿದ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಮೂಲಕ ಅವರೆಲ್ಲನ್ನೂ ಪರೀಕ್ಷೆ ಒಳಪಡಿಸಬೇಕು. ಲಾಕ್‌ಡೌನ್‌ನಿಂದ ಕೆಲ ದಿನಗಳ ವರೆಗೆ ಕೊರೋನಾ ಹರಡುವಿಕೆ ತಡೆಯಬಹುದು. ಆದರೆ ಶಾಶ್ವತ ಪರಿಹಾರವಲ್ಲ ಎಂದು ಗಾಂಧಿ ಹೇಳಿದ್ದಾರೆ.

ಸೋಂಕಿತರ ಟ್ರಾವೆಲ್ ಹಿಸ್ಟರ್ ಪಡೆದರೆ ಸೋಂಕು ಯಾವ ದಿಕ್ಕಿನಲ್ಲಿ ಹರಡುತ್ತಿದೆ ಅನ್ನೋ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಬಳಸಿ ಎಲ್ಲರ ಪರೀಕ್ಷೆ ನಡೆಸಬೇಕು. ಸೋಂಕು ಕಂಡುಬಂದಲ್ಲಿ ಚಿಕಿತ್ಸೆ, ಕ್ವಾರಂಟೈನ್ ಸೇರಿದಂತೆ ಇತರ ಮಾರ್ಗಗಳನ್ನು ಬಳಸಿ ಕೊರೋನಾ ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಆಕ್ರಮಣಕಾರಿಯಾದ ಪರೀಕ್ಷೆ ಒಂದೇ ಕೊರೋನಾ ಸೋಂಕಿಗೆ ಪರಿಹಾರ. ಇದು ಕೇಂದ್ರ ಸರ್ಕಾರಕ್ಕೆ ನನ್ನ ಸಲಹೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.