Asianet Suvarna News Asianet Suvarna News

ದೇಶವ್ಯಾಪಿ ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆ?: ಏನೇನು ಆರಂಭ? ನಿಷೇಧ?

ಇಂದು ಲಾಕ್‌ಡೌನ್‌ 3.0 ಅಂತ್ಯ| ಮೇ 31ರವರೆಗೆ ವಿಸ್ತರಣೆ ಬಹುತೇಕ ಖಚಿತ?| ಆದರೆ ನಿರ್ಬಂಧಗಳು ಭಾರಿ ಸಡಿಲ ಸಾಧ್ಯತೆ| ಇಂದು ಹೊಸ ಮಾರ್ಗಸೂಚಿ ಪ್ರಕಟ ನಿರೀಕ್ಷೆ

Lockdown likely to be extended till May 31 with more relaxations
Author
Bangalore, First Published May 17, 2020, 7:49 AM IST

ನವದೆಹಲಿ(ಮೇ.17): ಕೊರೋನಾ ಸೋಂಕು ಹರಡುವಿಕೆ ತಡೆಗೆ ಘೋಷಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್‌ 3.0 ಭಾನುವಾರಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ಹೊಸ ಸೋಂಕಿತರ ಪ್ರಮಾಣ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಇಳಿಯದ ಮತ್ತು ವಿದೇಶಗಳಿಂದ ಬಂದವರಲ್ಲಿ ಹಾಗೂ ತವರಿಗೆ ಮರಳುತ್ತಿರುವ ಲಕ್ಷಾಂತರ ಸಂಖ್ಯೆಯ ವಲಸೆ ಕಾರ್ಮಿಕರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 31ರವರೆಗೂ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಮತ್ತೆ 14 ದಿನಗಳ ಕಾಲ ವಿಸ್ತರಿಸಿದರೆ ಒಟ್ಟಾರೆ ಲಾಕ್‌ಡೌನ್‌ ಅವಧಿ 68 ದಿನಗಳಿಗೆ ಹಿಗ್ಗಿದಂತೆ ಆಗಲಿದೆ. ಈ ಬಾರಿಯ ಲಾಕ್‌ಡೌನ್‌ ಲಘುವಾಗಿದ್ದು ಹಲವು ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ.

ಲಾಕ್‌ಡೌನ್‌ ವಿಸ್ತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇ 12ರ ಭಾಷಣದಲ್ಲೇ ಸುಳಿವು ನೀಡಿದ್ದರು. ಆರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶದಿಂದ ಈ ಬಾರಿಯ ಲಾಕ್‌ಡೌನ್‌ ವಿಭಿನ್ನವಾಗಿರಲಿದೆ ಎನ್ನುವ ಮೂಲಕ ಸಡಿಲಿಕೆ ಸುಳಿವು ನೀಡಿದ್ದರು. ಹೀಗಾಗಿ ಸೋಮವಾರದಿಂದ 4ನೇ ಸುತ್ತಿನಲ್ಲಿ ನಡೆಯಲಿರುವ ವಿಸ್ತರಣೆ ವೇಳೆ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ನಿರ್ಧರಿಸುವ ಹೊಣೆಯನ್ನು ರಾಜ್ಯಗಳಿಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಹಸಿರು ವಲಯಗಳಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆಯುವ, ಕಿತ್ತಳೆ ವಲಯದಲ್ಲಿ ಸೀಮಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಭವವಿದೆ. ಕೆಂಪು ವಲಯದಲ್ಲೂ ಸಾಕಷ್ಟುನಿರ್ಬಂಧ ಸಡಿಲಿಕೆ ಮಾಡಿ, ಕಂಟೇನ್ಮೆಂಟ್‌ ವಲಯದಲ್ಲಿ ಮಾತ್ರ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ನಿನ್ನೆ 36 ಮಂದಿಗೆ ಕೊರೋನಾ, ಒಬ್ಬನಿಂದಲೇ 14 ಜನರಿಗೆ ಸೋಂಕು!

ಈ ಕುರಿತಂತೆ ಕೇಂದ್ರ ಸರ್ಕಾರ ಭಾನುವಾರ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಂಭವವಿದೆ. ಶನಿವಾರವೇ ಮಾರ್ಗಸೂಚಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ, ರಾಜ್ಯಗಳ ಸಲಹೆ ಪರಿಶೀಲನೆ ಕಾರಣ ತಡವಾಗಿದೆ ಎಂದು ಹೇಳಲಾಗಿದೆ.

ಸಂಚಾರ ಸಡಿಲಿಕೆ:

ಮಾಲ್‌ಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಅಂಗಡಿ ತೆರೆಯಲು ಅವಕಾಶ ಸಿಗುವ ಸಂಭವವಿದೆ. ಸೀಮಿತ ಜನರೊಂದಿಗೆ ರೆಸ್ಟೋರೆಂಟ್‌ಗಳ ಕಾರ್ಯನಿರ್ವಹಣೆಗೆ ಒಪ್ಪಿಗೆ ದೊರಕುವ ಸಾಧ್ಯತೆ ಇದೆ. ಬಸ್‌, ಆಟೋ ಸಂಚಾರಕ್ಕೂ ಷರತ್ತುಬದ್ಧ ಅನುಮತಿ ಸಿಗುವ ನಿರೀಕ್ಷೆ ಇದೆ.

ಸೀಮಿತವಾಗಿ ಮಹಾನಗರಗಳ ನಡುವೆ ಸಾಮಾಜಿಕ ಅಂತರ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದೇಶೀಯ ವಿಮಾನ, ಮೆಟ್ರೋ ಸಂಚಾರ ಆರಂಭವಾಗುವ ಲಕ್ಷಣ ಕಂಡುಬರುತ್ತಿದೆ. ಆದರೆ ರೈಲುಗಳ ಸಂಚಾರ ಹೆಚ್ಚಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ತಿರುಪತಿ ತಿಮ್ಮಪ್ಪನ 500 ಕೋಟಿ ರೂ. ಆಸ್ತಿ ಮಾರಾಟ?

ಕಾರ್ಮಿಕರಿಗೆ ನೆರವು:

ಲಾಕ್ಡೌನ್‌ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವು ನೀಡಲು ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಮತ್ತು ಪುನರ್‌ವಸತಿ ನಿಧಿಯಲ್ಲಿ ಇರುವ 11000 ಕೋಟಿ ರು.ಗಳನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಈ ಹಣ ಬಳಕೆ ಸಂಬಂಧ ಕೆಲ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಏನೇನು ಆರಂಭ?

ಕಿತ್ತಳೆ, ಹಸಿರು ವಲಯ

- ಸೀಮಿತ ಜನರೊಂದಿಗೆ ಬಸ್‌, ಆಟೋ, ಕ್ಯಾಬ್‌, ದೇಶೀಯ ವಿಮಾನ, ಮೆಟ್ರೋ

- ಮಾಲ್‌ಗಳಲ್ಲಿ ಕೆಲ ಅಂಗಡಿ, ಸಾಮಾಜಿಕ ಅಂತರದೊಂದಿಗೆ ರೆಸ್ಟೋರೆಂಟ್‌ ಸೇವೆ

- ಸಲೂನ್‌, ಸ್ಥಳೀಯ ಮಾರುಕಟ್ಟೆ, ಗೃಹೋಪಯೋಗಿ ಉಪಕರಣ ರಿಪೇರಿ ಸೇವೆಗಳು

ಶಿವಾಜಿನಗರಕ್ಕೆ ಕಂಟಕನಾದ ‘ಪಿ-653’!

ಏನೇನು ನಿಷೇಧ?

ಶೈಕ್ಷಣಿಕ ಚಟುವಟಿಕೆ, ಅಂತಾರಾಷ್ಟ್ರೀಯ ವಿಮಾನಯಾನ, ಅಂತಾರಾಜ್ಯ ಬಸ್‌ ಸಂಚಾರ, ಸಾರ್ವಜನಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನಾ ಮಂದಿರಗಳು, ದೊಡ್ಡ ಮಾರುಕಟ್ಟೆ, ಸಿನಿಮಾ ಥಿಯೇಟರ್‌.

Follow Us:
Download App:
  • android
  • ios