ನವದೆಹಲಿ(ಜ.05): ಕಳೆದೊಂದು ತಿಂಗಳಿನಿಂದ ಭಾರತದಲ್ಲಿ ಹಂತಹಂತವಾಗಿ ಹೊಸ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗಿರುವುದರ ಹಿಂದೆ ಸ್ಥಳೀಯವಾಗಿ ಅಭಿವೃದ್ಧಿಯಾದ ‘ಸಾಮೂಹಿಕ ರೋಗನಿರೋಧಕ ಶಕ್ತಿ’ (ಹರ್ಡ್‌ ಇಮ್ಯುನಿಟಿ) ಮತ್ತು ದೇಶದ ಯುವ ಸಮೂಹವೇ ಕಾರಣವಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜೊತೆಗೆ ದೇಶದಲ್ಲಿ ಸೋಂಕಿನ 2ನೇ ಅಲೆ ಕಾಣಿಸಿಕೊಳ್ಳದೇ ಇರುವುದಕ್ಕೂ ಇದೇ ಕಾರಣ ಎಂದಿದ್ದಾರೆ.

ಸೆಪ್ಟೆಂಬರ್‌ 16ರಂದು ಏಕದಿನದ ದಾಖಲೆ 97,894ರಷ್ಟುಕೊರೋನಾ ಪ್ರಕರಣಗಳು ವರದಿಯಾಗಿ ದೇಶವನ್ನು ಬೆಚ್ಚಿಬೀಳಿಸಿದ್ದವು. ಆದರೆ ಸೋಮವಾರ ಕೇವಲ 16,504 ಪ್ರಕರಣಗಳು ವರದಿಯಾಗಿವೆ. ಅಂದರೆ ದೈನಂದಿನ ಕೊರೋನಾ ಸೋಂಕಿತರ ಪ್ರಮಾಣ 6 ಪಟ್ಟು ಕುಸಿದಿದೆ.

ಈ ಕುರಿತು ಕಾರಣ ಏನಿರಬಹುದು ಎಂದು ತಜ್ಞರು ಅಧ್ಯಯನ ನಡೆಸಿದಾಗ ಮೊದಲನೆಯದಾಗಿ ‘ಸ್ಥಳೀಯ ಮಟ್ಟ’ದಲ್ಲಿ ‘ಸಾಮೂಹಿಕ ರೋಗ ನಿರೋಧಕ ಶಕ್ತಿ’ ಹೆಚ್ಚಿರುವ ಸಾಧ್ಯತೆ ಕಂಡುಬಂದಿದೆ. ಈ ಬಗ್ಗೆ ವಿವರಣೆ ನೀಡಿರುವ ದಿಲ್ಲಿಯ ರಾಷ್ಟ್ರೀಯ ರೋಗನಿರೋಧಕ ಸಂಸ್ಥೆಯ ತಜ್ಞ ಡಾ| ಸತ್ಯಜಿತ್‌ ರಥ್‌ ಅವರು, ‘ಕೊರೋನಾದ ಮೊದಲ ಅಲೆ ಎದ್ದಾಗ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ಕೊರೋನಾ ಸೋಂಕು ಸಾಕಷ್ಟುವ್ಯಾಪಿಸಿತ್ತು. ಈ ವೇಳೆಯೇ ಅಲ್ಲಿನ ಸಾಕಷ್ಟುಜನರಲ್ಲಿ ಸೋಂಕು ಕಾಣಿಸಿಕೊಂಡು ರೋಗನಿರೋಧಕ ಶಕ್ತಿಯು ಉತ್ಪತ್ತಿಯಾಯಿತು. ಇದು ಸೋಂಕಿನ ಹರಡುವಿಕೆ ಮೇಲೆ ಕಡಿವಾಣ ಹಾಕಿತು’ ಎಂದು ವಿಶ್ಲೇಷಿಸಿದ್ದಾರೆ.

ಇದೇ ವೇಳೆ, ‘ಜನರು ಕೊರೋನಾ ತೀವ್ರವಾಗಿದ್ದಾಗ ಜಾಗರೂಕತೆ ವಹಿಸಿ ಅನಗತ್ಯ ಪ್ರಯಾಣ ನಿಲ್ಲಿಸಿದರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯತ್ನಿಸಿದರು. ಇದೂ ಕೂಡ ಈಗಿನ ಸೋಂಕು ಇಳಿಕೆಗೆ ಒಂದು ಕಾರಣ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವಾಷಿಂಗ್ಟನ್‌ನಲ್ಲಿರುವ ಭಾರತೀಯ ಮೂಲದ ತಜ್ಞ ಡಾ| ರಮಣನ್‌ ಲಕ್ಷ್ಮೇನಾರಾಯಣ ಪ್ರತಿಕ್ರಿಯಿಸಿ, ‘ಭಾರತದಲ್ಲಿ 35 ವರ್ಷಕ್ಕಿಂತ ಕೆಳಗಿನವರ ಸಂಖ್ಯೆ ಶೇ.65 ಇದೆ. ಈ ವಯೋಮಾನದವರಲ್ಲಿ ರೋಗನಿರೋಧಕ ಶಕ್ತಿ ಸಾಕಷ್ಟುಇರುವ ಕಾರಣ ಅವರಿಗೆ ಸೋಂಕು ಹರಡುವ ಸಾಧ್ಯತೆ ತುಂಬಾ ಕ್ಷೀಣ’ ಎಂದು ಹೇಳಿದ್ದಾರೆ.

‘ಈ ಎಲ್ಲ ಕಾರಣಗಳಿಂದಾಗಿ ಮೊದಲ ಅಲೆ ಎದ್ದ ಸಂದರ್ಭದಲ್ಲಿ ಅಬ್ಬರಿಸಿದ್ದ ಕೊರೋನಾ ವೈರಾಣು ಈಗ ಕ್ಷೀಣವಾಗಿದೆ. ಹೀಗಾಗಿ ಭಾರತದಲ್ಲಿ ಕೊರೋನಾದ 2ನೇ ಅಲೆಯು ಮೊದಲನೆ ಅಲೆಯಷ್ಟುಬಲವಾಗಿ ಇರಲಿಕ್ಕಿಲ್ಲ’ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಹರ್ಡ್‌ ಇಮ್ಯುನಿಟಿ ಎಂದರೇನು?

ಒಟ್ಟಾರೆ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಉದ್ಭವಿಸಿದಾಗ ಸೋಂಕಿನ ಹರಡುವಿಕೆ ಸಾಧ್ಯತೆ ಕ್ಷೀಣವಾಗುತ್ತದೆ. ವೈರಾಣು ತನ್ನ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಇಂಥ ರೋಗ ನಿರೋಧಕ ಶಕ್ತಿ ಉತ್ಪತ್ತಿಗೇ ಸಾಮೂಹಿಕ ರೋಗ ನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಎನ್ನುತ್ತಾರೆ.