ಚಕ್ರಬಡ್ಡಿ ಹೊರತಾದ ವಿನಾಯ್ತಿ ಅಸಾಧ್ಯ: ಕೇಂದ್ರ| ಹೆಚ್ಚು ವಿನಾಯ್ತಿ ನೀಡಿದರೆ ಆರ್ಥಿಕತೆಗೆ ಧಕ್ಕೆ| ಸುಪ್ರೀಂಗೆ ಕೇಂದ್ರದ ಪರಿಷ್ಕೃತ ಅಫಿಡವಿಟ್
ನವದೆಹಲಿ(ಅ.11): ‘ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯಿಂದ 6 ತಿಂಗಳು ‘ವಿನಾಯಿತಿ’ ಪಡೆದವರ ಸಾಲದ ಚಕ್ರಬಡ್ಡಿ ಮನ್ನಾಗೆ ಒಪ್ಪಿದ್ದೇವೆ. ಆದರೆ ಇದಕ್ಕಿಂತ ಮುಂದುವರಿದು ಇನ್ನುಳಿದ ವಲಯಗಳಿಗೂ ವಿನಾಯಿತಿ ನೀಡಲು ಮುಂದಾದರೆ ಆರ್ಥಿಕತೆಗೆ ಧಕ್ಕೆಯಾಗುತ್ತದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಪರಿಷ್ಕೃತ ಅಫಿಡವಿಟ್ ಸಲ್ಲಿಸಿದೆ.
ಅ.5ರಂದು ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿ, ‘6 ತಿಂಗಳು ಸಾಲ ಮರುಪಾವತಿ ಮುಂದೂಡಿಕೆ ಆಯ್ಕೆ ಪಡೆದ 2 ಕೋಟಿ ರು.ವರೆಗಿನ ಗೃಹ, ವಾಹನ ಸೇರಿದಂತೆ ವೈಯಕ್ತಿಕ ಸಾಲಗಾರರು ಹಾಗೂ ಸಣ್ಣ ಉದ್ದಿಮೆಗಳ ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡಲಾಗುವುದು’ ಎಂದು ತಿಳಿಸಿತ್ತು. ಆದರೆ ಈ ಅಫಿಡವಿಟ್ ಒಪ್ಪಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ‘ಕೇವಲ ಚಕ್ರಬಡ್ಡಿ ಮನ್ನಾ ಒಪ್ಪಲು ಸಾಧ್ಯವಿಲ್ಲ. ರಿಯಲ್ ಎಸ್ಟೇಟ್ ಸೇರಿ ಇತರ ವಲಯಗಳಿಗೆ ಯಾವ ವಿನಾಯಿತಿ ನೀಡುತ್ತೀರಿ? ಕಾಮತ್ ಸಮಿತಿ ಗುರುತಿಸಿದ 26 ಸಂಕಷ್ಟದ ವಲಯ ಯಾವುವು ಎಂಬ ಬಗ್ಗೆ ಪರಿಷ್ಕೃತ ಅಫಿಡವಿಟ್ ಸಲ್ಲಿಸಿ’ ಎಂದು ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಪರಿಷ್ಕೃತ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ‘20 ಲಕ್ಷ ಕೋಟಿ ರು. ಆತ್ಮನಿರ್ಭರ ಪ್ಯಾಕೇಜ್ ಹಾಗೂ 1.70 ಲಕ್ಷ ಕೋಟಿ ರು. ಗರೀಬ್ ಕಲ್ಯಾಣ್ ಪ್ಯಾಕೇಜ್ನಂಥ ವಿತ್ತೀಯ ನೀತಿ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನೂ ಮುಂದುವರಿದು ವಿವಿಧ ವಲಯಗಳಿಗೆ ಇಂಥದ್ದೇ ಸವಲತ್ತು ನೀಡಲಾಗದು. 2 ಕೋಟಿ ರು.ವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಹೊರತಾದ ಘೋಷಣೆಗಳಿಂದ ಆರ್ಥಿಕತೆಗೆ ಹಾಗೂ ಬ್ಯಾಂಕಿಂಗ್ ವಲಯಕ್ಕೆ ಧಕ್ಕೆಯಾಗುತ್ತದೆ’ ಎಂದಿದೆ.
ಅಲ್ಲದೆ, ‘ವಿತ್ತೀಯ ನೀತಿ ನಿರೂಪಣೆ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಕೋರ್ಟ್ಗಳು ಹಸ್ತಕ್ಷೇಪ ಮಾಡಬಾರದು’ ಎಂಬ ಮಹತ್ವದ ಅಭಿಪ್ರಾಯವನ್ನೂ ಸರ್ಕಾರ ವ್ಯಕ್ತಪಡಿಸಿದೆ.
‘ಸಾಲಗಾರರು ಹಾಗೂ ಬ್ಯಾಂಕ್ಗಳು ಕುಳಿತು ಸಾಲ ತಮ್ಮತಮ್ಮ ಸಾಲ ಯೋಜನೆ ಪುನಾರಚಿಸಿಕೊಳ್ಳುವುದು ಇರುವ ಏಕೈಕ ಪರಿಹಾರ. ಅಲ್ಲದೆ, ಕಾಮತ್ ಸಮಿತಿ ಶಿಫಾರಸಿನ ಪ್ರಕಾರ ವಿವಿಧ 26 ವಲಯಗಳಿಗೆ ಪರಿಹಾರ ನೀಡುವ ಒಂದೇ ನಿರ್ದಿಷ್ಟಸೂತ್ರ ರೂಪಿಸಲು ಆಗದು’ ಎಂದು ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಬೆಳಗ್ಗೆ ರಿಸವ್ರ್ ಬ್ಯಾಂಕ್ ಪ್ರತ್ಯೇಕ ಅಫಿಡವಿಟ್ ಸಲ್ಲಿಸಿತ್ತು. ‘ಸಾಲ ಮರುಪಾವತಿ ವಿನಾಯಿತಿ ಅವಧಿ ವಿಸ್ತರಣೆ ಹೊಣೆಯನ್ನು ಬ್ಯಾಂಕ್ಗಳಿಗೇ ಬಿಡಬೇಕು. ಆದರೆ ವಿನಾಯಿತಿ ನೀಡುವುದು ಆರ್ಥಿಕತೆಗೆ ಮಾರಕವಾಗಬಹುದು’ ಎಂದು ತಿಳಿಸಿತ್ತು.
ಈ ವಿಷಯವನ್ನು ಅಕ್ಟೋಬರ್ 13ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಚಕ್ರಬಡ್ಡಿ ಮನ್ನಾಗೆ ಕೇಂದ್ರದ ‘1 ತಿಂಗಳ ಸೂತ್ರ’
ನವದೆಹಲಿ: 2 ಕೋಟಿ ರು.ವರೆಗಿನ ಸಾಲದ 6 ತಿಂಗಳ ಅವಧಿಯ ಚಕ್ರಬಡ್ಡಿ ಮನ್ನಾ ಮಾಡುವ ಪರಿಹಾರ ಸೂತ್ರವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
‘ಚಕ್ರಬಡ್ಡಿ ಮನ್ನಾ ಅಧಿಸೂಚನೆ ಹೊರಬಿದ್ದ ದಿನದಿಂದ 1 ತಿಂಗಳ ಅವಧಿಯಲ್ಲಿ ಬ್ಯಾಂಕ್ಗಳು ಮನ್ನಾ ಕ್ರಮ ಜಾರಿಗೆ ತರಬೇಕು. ಬಳಿಕ ಮನ್ನಾ ಆದ ಹಣ ಭರಿಸಿಕೊಡುವಂತೆ ಬ್ಯಾಂಕ್ಗಳು ಕೇಂದ್ರ ಸರ್ಕಾರಕ್ಕೆ ಕೋರಬಹುದು’ ಎಂದು ತಿಳಿಸಿದೆ.
