Asianet Suvarna News Asianet Suvarna News

ಆಯುಷ್ಮಾನ್‌ ಭಾರತದಡಿ ಇನ್ನು 10 ಲಕ್ಷ ರು. ಆರೋಗ್ಯ ವಿಮೆ?: 70 ವರ್ಷ ಮೇಲ್ಪಟ್ಟವರಿಗೂ ವಿಮಾ ಸೌಲಭ್ಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಸದ್ಯ ಇರುವ 5 ಲಕ್ಷ ರು. ವಿಮೆ ಮೊತ್ತವನ್ನು 10 ಲಕ್ಷ ರು.ಗೆ ಹೆಚ್ಚಳ ಮಾಡಲು ಹಾಗೂ 70 ವರ್ಷ ಮೇಲ್ಪಟ್ಟವರನ್ನೂ ವಿಮಾ ಸೌಲಭ್ಯದ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ.
 

limits of ayushman bharat scheme to increase 10 lakhs will be insured instead of 5 lakhs gvd
Author
First Published Jul 8, 2024, 5:26 AM IST

ನವದೆಹಲಿ (ಜು.08): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಸದ್ಯ ಇರುವ 5 ಲಕ್ಷ ರು. ವಿಮೆ ಮೊತ್ತವನ್ನು 10 ಲಕ್ಷ ರು.ಗೆ ಹೆಚ್ಚಳ ಮಾಡಲು ಹಾಗೂ 70 ವರ್ಷ ಮೇಲ್ಪಟ್ಟವರನ್ನೂ ವಿಮಾ ಸೌಲಭ್ಯದ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಜತೆಗೆ ಮುಂದಿನ ಮೂರು ವರ್ಷಗಳಲ್ಲಿ ಈ ವಿಮೆಯ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನೂ ಹಾಕಿಕೊಂಡಿದೆ ಎಂದು ಹೇಳಲಾಗಿದೆ. ಜು.23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುವ ಬಜೆಟ್‌ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಸದ್ಯ 16ರಿಂದ 59 ವರ್ಷದೊಳಗಿನವರು ಆಯುಷ್ಮಾನ್‌ ಭಾರತ ಯೋಜನೆಯಡಿ ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆಗೆ (ಪ್ರತಿ ಕುಟುಂಬಕ್ಕೆ) ಅರ್ಹರಾಗಿದ್ದಾರೆ. 2018ರಲ್ಲಿ ಈ ದರವನ್ನು ನಿಗದಿ ಮಾಡಲಾಗಿದೆ. ಹೆಚ್ಚಿದ ಹಣದುಬ್ಬರ ಹಾಗೂ ಕಸಿ, ಕ್ಯಾನ್ಸರ್‌ನಂತಹ ದುಬಾರಿ ಚಿಕಿತ್ಸೆಗಳಿಗೂ ಅನುಕೂಲವಾಗಲಿ ಎಂದು ಇದೀಗ ವಿಮೆ ದರ ಹೆಚ್ಚಳ ಮಾಡುವ ಚಿಂತನೆ ಇದೆ. ಜತೆಗೆ ಇದೀಗ ಸರ್ಕಾರ 70 ವರ್ಷ ಮೇಲ್ಪಟ್ಟವರನ್ನೂ ವಿಮಾ ಸೌಲಭ್ಯದ ವ್ಯಾಪ್ತಿಗೆ ತರಲು ಉದ್ದೇಶಿಸಿದೆ. 60ರಿಂದ 69 ವರ್ಷದವರ ಬಗ್ಗೆ ಇನ್ನಷ್ಟೇ ವಿವರ ತಿಳಿದುಬರಬೇಕಿದೆ.

ವಿಮಾ ಮೊತ್ತವನ್ನು 5ರಿಂದ 10 ಲಕ್ಷ ರು.ಗೆ ಹೆಚ್ಚಳ ಮಾಡುವುದರಿಂದ ಹಾಗೂ 70 ವರ್ಷ ಮೇಲ್ಪಟ್ಟವರಿಗೂ ವಿಮೆ ಒದಗಿಸುವುದರಿಂದ ಮತ್ತು ಫಲಾನುಭವಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12076 ಕೋಟಿ ರು. ಹೊರೆ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡೆಂಘೀ ಆಯ್ತು, ಈಗ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

ಫಲಾನುಭವಿಗಳ ಸಂಖ್ಯೆ ದುಪ್ಪಟ್ಟಾದರೆ, ದೇಶದ ಮೂರನೇ 2ರಷ್ಟು ಜನಸಂಖ್ಯೆಯು ಆರೋಗ್ಯ ವಿಮಾ ವ್ಯಾಪ್ತಿಗೆ ಒಳಪಟ್ಟಂತಾಗುತ್ತದೆ. ಕುಟುಂಬಗಳು ಸಾಲದ ಕೂಪಕ್ಕೆ ತಳ್ಳಲ್ಪಡುತ್ತಿರುವುದಕ್ಕೆ ಆರೋಗ್ಯ ವೆಚ್ಚವೂ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ವಿವರಿಸಿವೆ. ಜೂ.27ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು 70 ವರ್ಷ ಮೇಲ್ಪಟ್ಟ ವೃದ್ಧರನ್ನೂ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆಗೆ ಪರಿಗಣಿಸಲಾಗುವುದು ಎಂದು ಹೇಳಿದ್ದರು. 70 ವರ್ಷ ಮೇಲ್ಪಟ್ಟ 4ರಿಂದ 5 ಕೋಟಿ ಮಂದಿ ದೇಶದಲ್ಲಿದ್ದಾರೆ ಎಂಂದು ಮೂಲಗಳು ವಿವರಿಸಿವೆ.

Latest Videos
Follow Us:
Download App:
  • android
  • ios