ದಿಲ್ಲಿ ಪರಿಸ್ಥಿತಿ ಗಂಭೀರ: 100 ಐಸಿಯು ಬೆಡ್‌ ಮಾತ್ರ ಖಾಲಿ| ಕೇಜ್ರಿ ಬೇಡಿಕೆ ಮೇರೆಗೆ ಸೋಂಕಿತರ ಆರೈಕೆಗೆ 75 ರೈಲ್ವೆ ಕೋಚ್‌ಗಳು

ನವದೆಹಲಿ(ಏ.19): ನಿತ್ಯ 20000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ದೆಹಲಿಯಲ್ಲಿ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿದೆ ಎಂದು ಸ್ವತಃ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸದ್ಯ ರಾಜಧಾನಿಯಲ್ಲಿ ಐಸಿಯು ಸೌಲಭ್ಯ ಇರುವ ಕೇವಲ 100 ಹಾಸಿಗೆಗಳು ಮಾತ್ರವೇ ರೋಗಿಗಳಿಗೆ ಖಾಲಿ ಉಳಿದಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸೋಂಕಿತರ ಆರೈಕೆಗೆ 2 ರೈಲ್ವೆ ನಿಲ್ದಾಣಗಳಲ್ಲಿ 5000 ಬೆಡ್‌ಗಳ ಕೋವಿಡ್‌ ಕೇರ್‌ ಕೋಚ್‌ ನಿಯೋಜಿಸುವಂತೆ ಕೋರಿದ್ದಾರೆ.

ಇದಕ್ಕೆ ತಕ್ಷಣವೇ ಸ್ಪಂದಿಸಿರುವ ರೈಲ್ವೆ ಇಲಾಖೆ 50 ಕೋವಿಡ್‌ ಐಸೋಲೇಶನ್‌ ಕೋಚ್‌ಗಳನ್ನು ಶುಕುರ್‌ ಬಸ್ತಿ ನಿಲ್ದಾಣದಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಇನ್ನು 25 ಕೋಚ್‌ಗಳನ್ನು ಆನಂದ ವಿಹಾರ್‌ ನಿಲ್ದಾಣದಲ್ಲಿ ನಿಯೋಜಿಸಲಾಗುವುದು ಎಂದು ಭಾನುವಾರ ಹೇಳಿದೆ.

ದಿಲ್ಲಿಯಲ್ಲಿ ಭಾನುವಾರ ಸುಮಾರು 25 ಸಾವಿರ ಕೊರೋನಾ ಪ್ರಕರಣಗಳು ವರದಿ ಆಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್‌ಗಳು ಸಿಗುತ್ತಿಲ್ಲ.