ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ನಾಯಕರು ಸಡ್ಡು! ನಾಯಕತ್ವಕ್ಕೆ ಚುನಾವಣೆ ನಡೆಸಿ
ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಪಟ್ಟಕಟ್ಟುವ ವರದಿಗಳ ಬೆನ್ನಲ್ಲೇ ಬಹಿರಂಗ ಆಕ್ಷೇಪ| ಹಿರಿಯರು ಮುಂದೆ ಬನ್ನಿ: ಸಂದೀಪ್ ದೀಕ್ಷಿತ್| ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಾಯಕತ್ವಕ್ಕೆ ಚುನಾವಣೆ ನಡೆಸಬೇಕು. ಈ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಆಗಬೇಕು|
ನವದೆಹಲಿ(ಫೆ.21): ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಶೂನ್ಯ ಸಂಪಾದಿಸುವ ಮೂಲಕ ಹೀನಾಯ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಂಡಿರುವ ಸಿಟ್ಟು ಮತ್ತೊಂದು ಮಜಲು ತಲುಪಿದೆ.
ರಾಹುಲ್ ಗಾಂಧಿ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ವರದಿಗಳ ಸಂದರ್ಭದಲ್ಲೇ, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ನಾಯಕತ್ವಕ್ಕೆ ಚುನಾವಣೆ ನಡೆಸಿ ಎಂದು ಕಾಂಗ್ರೆಸ್ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಆಗ್ರಹಪಡಿಸಿದ್ದಾರೆ.
ಇದೇ ವೇಳೆ, ಪಕ್ಷಕ್ಕಾಗಿ ಹಿರಿಯ ನಾಯಕರು ಮುಂದೆ ಬರಬೇಕು ಎಂದು ಮತ್ತೊಬ್ಬ ಮುಖಂಡ ಸಂದೀಪ್ ದೀಕ್ಷಿತ್ ಕೂಡ ಒತ್ತಾಯಿಸಿದ್ದಾರೆ. ತನ್ಮೂಲಕ ಈ ಇಬ್ಬರೂ ನಾಯಕರು ಗಾಂಧಿ ‘ನಾಯಕತ್ವ’ಕ್ಕೇ ಸಡ್ಡು ಹೊಡೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ಸೋಲು: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಛೋಪ್ರಾ ರಾಜೀನಾಮೆ!
ದೆಹಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಅವರು ಆಂಗ್ಲ ಪತ್ರಿಕೆಯೊಂದರ ಜತೆ ಮಾತನಾಡಿ, ಉನ್ನತ ನಾಯಕತ್ವದ ಬಗ್ಗೆ ಎದ್ದು ಕಾಣುವ ಮೌನವಿದೆ. ಪಕ್ಷದಲ್ಲಿ ಜಡತ್ವವಿದೆ. ಹೀಗಾಗಿ ರಾಜ್ಯಸಭೆಯಲ್ಲಿರುವವರು, ಮಾಜಿ ಮುಖ್ಯಮಂತ್ರಿಗಳು, ಹಾಲಿ ಮುಖ್ಯಮಂತ್ರಿಗಳಾಗಿರುವಂತಹ ಹಿರಿಯರು ಮುಂದೆ ಬರಬೇಕು. ಪಕ್ಷಕ್ಕಾಗಿ ಒಂದು ಹೆಜ್ಜೆ ಇಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಅಭಿಪ್ರಾಯವನ್ನು ಬೆಂಬಲಿಸಿರುವ ಶಶಿ ತರೂರ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಾಯಕತ್ವಕ್ಕೆ ಚುನಾವಣೆ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು ಎಂದು ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಕಳೆದ ಆಗಸ್ಟ್‌ನಲ್ಲಿ ಮತ್ತೆ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಅವರು ನಿವೃತ್ತಿ ಬಯಸುತ್ತಿದ್ದಾರೆ ಎನ್ನಲಾಗಿದೆ. ಆ ಹುದ್ದೆಗೆ ರಾಹುಲ್ ಅವರನ್ನು ಮತ್ತೆ ಕರೆತರಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಅವರು ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ.
ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ