ಗುಜರಾತಲ್ಲಿ ಬರಲಿದೆ ಏರ್‌ಬಸ್‌ ಸಿ295 ವಿಮಾನ ಉತ್ಪಾದನಾ ಘಟಕ, ಯುರೋಪ್‌ನಿಂದ ಆಚೆ ಉತ್ಪಾದನೆ ಇದೇ ಮೊದಲು, ಅ.30ರಂದು ಪ್ರಧಾನಿ ಮೋದಿ ಶಂಕು

ನವದೆಹಲಿ(ಅ.28):  ಏರ್‌ಬಸ್‌ ಸಿ295 ಸಾರಿಗೆ ವಿಮಾನದ ಉತ್ಪಾದನಾ ಘಟಕ ಗುಜರಾತ್‌ನ ವಡೋದರಾದಲ್ಲಿ ಸ್ಥಾಪನೆಯಾಗಲಿದೆ. ಯುರೋಪ್‌ನಿಂದಾಚೆ ಇದೇ ಮೊದಲ ಬಾರಿ ಇದರ ಉತ್ಪಾದನಾ ಘಟಕ ಆರಂಭವಾಗಲಿದ್ದು, ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಗೆ ಪೂರಕವಾಗಿ ಕಾರಾರ‍ಯರಂಭಿಸಲಿದೆ. ‘ಅ.30ರಂದು ಉತ್ಪಾದನಾ ಘಟಕದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಲಿದ್ದಾರೆ. ಯುರೋಪಿನಿಂದ ಹೊರಗೆ ಮೊಟ್ಟಮೊದಲ ಬಾರಿ ಸಿ295 ವಿಮಾನ ಉತ್ಪಾದನಾ ಘಟಕ ಆರಂಭವಾಗುತ್ತಿರುವುದು ಇದೇ ಮೊದಲು’ ಎಂದು ರಕ್ಷಣಾ ಕಾರ್ಯದರ್ಶಿ ಅಜಯ ಕುಮಾರ್‌ ಗುರುವಾರ ಹೇಳಿದ್ದಾರೆ.

ದೇಶದಲ್ಲೇ ಸೇನಾ ವಿಮಾನ ಉತ್ಪಾದನೆ:

ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಭಾರತ ಸ್ಪೇನ್‌ ಮೂಲದ ಏರ್‌ಬಸ್‌ ಡಿಫೆನ್ಸ್‌ ಹಾಗೂ ಸ್ಪೇಸ್‌ ಕಂಪನಿ ಜತೆ 21,000 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ವಾಯುಪಡೆಯ ಹಳೆಯ ಆವ್ರೋ-748 ವಿಮಾನಗಳನ್ನು 56 ಅತ್ಯಾಧುನಿಕ ಸಿ-295 ಸಾರಿಗೆ ವಿಮಾನದೊಂದಿಗೆ ಬದಲಾಯಿಸಲು ದೇಶದಲ್ಲೇ ಮಿಲಿಟರಿ ವಿಮಾನದ ಉತ್ಪಾದನಾ ಘಟಕ ಆರಂಭಕ್ಕಾಗಿ ವಿದೇಶಿ ಖಾಸಗಿ ಕಂಪನಿಯೊಂದಿಗೆ ಮಾಡಿಕೊಂಡ ಮೊದಲ ಒಪ್ಪಂದ ಇದಾಗಿದೆ.

MiG-29K ಬದಲು ವಾಯುಪಡೆ ಸೇರಿಕೊಳ್ಳಲಿದೆ ಆತ್ಮನಿರ್ಭರ್ ಟ್ವಿನ್ ಎಂಜಿನ್ ಡೆಕ್ ಬೇಸ್ ಫೈಟರ್ ಜೆಟ್!

ಈ ಒಪ್ಪಂದದ ಪ್ರಕಾರ ಮೊದಲ 16 ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಾಗಿರುವ ಸ್ಥಿತಿಯಲ್ಲಿ ಸ್ಪೇನ್‌ನ ಸೆವೆಲ್ಲೆಯಿಂದ ಏರ್‌ಬಸ್‌ 4 ವರ್ಷಗಳ ಅವಧಿಯಲ್ಲಿ ಪೂರೈಸಲಿದೆ. ಉಳಿದ 40 ವಿಮಾನಗಳನ್ನು ಭಾರತದಲ್ಲೇ ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್‌ ಅವರೊಂದಿಗೆ ಸೇರಿ ಉತ್ಪಾದನೆ ಮಾಡಲಾಗುವುದು. 2026ರಲ್ಲಿ ಮೊದಲ ಭಾರತೀಯ ನಿರ್ಮಿತ ಸಿ295 ವಿಮಾನ ಹಾರಾಟ ನಡೆಸುವ ನಿರೀಕ್ಷೆಯಿದೆ. ಈ ಮಹತ್ವಪೂರ್ಣ ಒಪ್ಪಂದಕ್ಕೆ ಕಳೆದ ವಾರವೇ ‘ಡೈರೆಕ್ಟೋರೆಟ್‌ ಜನರಲ್‌ ಆಫ್‌ ಏರೋನಾಟಿಕ್‌ ಕ್ವಾಲಿಟಿ ಅಶ್ಯುರೆನ್ಸ್‌ ’ ನಿಯಂತ್ರಕ ಅನುಮೋದನೆಯನ್ನು ನೀಡಿತ್ತು.