ನವದೆಹಲಿ(ಮಾ.22): ದೇಶದ ಜನರು ಕೊರೋನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು ಹಾಗೂ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದೇ ಹೋದರೆ ಕೊರೋನಾದ 2ನೇ ಅಲೆಯನ್ನು ನಿಯಂತ್ರಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆ ಮುಖ್ಯಸ್ಥ ಡಾ

ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಜನರು ಕೊರೋನಾ ಮಾರ್ಗಸೂಚಿಗಳನ್ನು ಮರೆತಿದ್ದಾರೆ. ವಿವಿಧೆಡೆ ಮಾಸ್ಕ್‌ ಧರಿಸದೇ ಜನಜಂಗುಳಿ ಸೇರಿರುತ್ತದೆ. ಇವರೇ ಸೂಪರ್‌ ಸೆ್ೊ್ರಡರ್‌ಗಳಾಗಿರುತ್ತಾರೆ. ಒಂದು ವೇಳೆ ಮಾಸ್ಕ್‌ ಧಾರಣೆ, ಸೋಂಕಿತರ ಸಂಪರ್ಕ ಪತ್ತೆಯಂತ ಮೂಲಭೂತ ಕೆಲಸಗಳನ್ನು ಮಾಡದೇ ಹೋದರೆ ಕೊರೋನಾ ಪ್ರಕರಣಗಳು ಇನ್ನಷ್ಟುಹೆಚ್ಚಲಿವೆ’ ಎಂದು ಎಚ್ಚರಿಸಿದರು.

‘ಸದ್ಯ ದೇಶದಲ್ಲಿ ಮತ್ತೆ ಸೋಂಕು ಏರಿಕೆಯಾಗುತ್ತಿರುವುದಕ್ಕೆ ಜನರು ಈ ಸಾಂಕ್ರಾಮಿಕ ರೋಗ ಹರಡುವುದು ನಿಂತಿದೆ ಎಂದು ಭಾವಿಸಿರುವುದೂ ಒಂದು ಕಾರಣ. ಹೀಗಾಗಿ ಅವರು ಕೊರೋನಾದಿಂದ ರಕ್ಷಣೆ ಪಡೆಯುವ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ರೂಪಾಂತರಿ ಕೊರೋನಾ ವೈರಸ್‌ಗಳು ಕೂಡ ಸೋಂಕು ಹರಡಿಸುತ್ತಿವೆ. ಸೋಂಕಿತರ ಸಂಪರ್ಕಿತರ ಪತ್ತೆಯಲ್ಲೂ ಎಡವಲಾಗುತ್ತಿದೆ. ಆದರೆ, ಮುಖ್ಯ ಕಾರಣ ಜನರ ನಿರ್ಲಕ್ಷ್ಯವೇ ಆಗಿದೆ. ನಾವು ಈಗಲೂ ಅನಗತ್ಯ ಪ್ರಯಾಣವನ್ನು ಕೆಲ ಕಾಲ ಮುಂದೂಡಬೇಕಿದೆ. ಜೊತೆಗೆ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕಿದೆ’ ಎಂದೂ ಗುಲೇರಿಯಾ ಹೇಳಿದರು.