ನವದೆಹಲಿ[ಮಾ.14]: ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಭೂ ಕಂಟಕವೊಂದು ಎದುರಾಗಿದೆ. 2014ರಲ್ಲಿ ದಾಖಲಾಗಿ, 2018ರಲ್ಲಿ ಕೈಬಿಡಲಾಗಿದ್ದ ಭೂ ದಾಖಲೆಗಳ ಫೋರ್ಜರಿ ಪ್ರಕರಣದ ತನಿಖೆಯನ್ನು ಮಧ್ಯಪ್ರದೇಶ ಸರ್ಕಾರ ಮರು ಆರಂಭಿಸಲು ಮುಂದಾಗಿದೆ. ಆದರೆ ಇದನ್ನು ರಾಜಕೀಯ ದ್ವೇಷದ ಕ್ರಮ ಎಂದು ಸಿಂಧಿಯಾ ಆಪ್ತರು ಟೀಕಿಸಿದ್ದು, ಇದಕ್ಕೆ ಕಾನೂನು ರೀತ್ಯ ತಕ್ಕ ಉತ್ತರ ನೀಡುವುದಾಗಿ ಗುಡುಗಿದ್ದಾರೆ.

2009ರಲ್ಲಿ ಮೂಲದಾಖಲೆಯಲ್ಲಿದ್ದ ಅಂಶಗಳನ್ನು ತಿರುಚಿ ಜಾಗವೊಂದನ್ನು ಸಿಂಧಿಯಾ ಹಾಗೂ ಅವರ ಕುಟುಂಬ ಮಾರಾಟ ಮಾಡಿದೆ ಎಂದು 2014ರಲ್ಲಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಸುರೇಂದ್ರ ಶ್ರೀವಾಸ್ತವ ಎಂಬುವರು ದೂರು ನೀಡಿದ್ದರು. ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ 2018ರಲ್ಲಿ ಈ ಪ್ರಕರಣವನ್ನು ಕೈಬಿಡಲಾಗಿತ್ತು. ಈ ನಡುವೆ ಬುಧವಾರ ಸಿಂಧಿಯಾ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮರುದಿನವಾದ ಗುರುವಾರ ಸುರೇಂದ್ರ ಅವರು ತಮ್ಮ ಬಳಿ ಹೊಸ ಸಾಕ್ಷ್ಯಗಳಿವೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಅದರ ಪರಿಶೀಲನೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಧಿಯಾ ಬಿಜೆಪಿ ಸೇರ್ಪಡೆ ಮರುದಿನವೇ ಈ ಪ್ರಕರಣದ ಮರುತನಿಖೆಗೆ ಸರ್ಕಾರ ಒಲವು ತೋರಿರುವುದು ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.