ಅಯೋಧ್ಯೆ[ಮಾ.04]: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾಮಗಾರಿಯನ್ನು ನಿರ್ಮಾಣ ಕ್ಷೇತ್ರದ ಹೆಸರಾಂತ ಕಂಪನಿ ‘ಲಾರ್ಸನ್‌ ಆ್ಯಂಡ್‌ ಟೂಬ್ರೊ’ ನಿರ್ಮಿಸಲಿದೆ ಎಂದು ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಹಾಗೂ ಶ್ರೀ ರಾಮತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘10 ವರ್ಷದ ಹಿಂದೆ ಅಂದಿನ ವಿಎಚ್‌ಪಿ ನಾಯಕ ಅಶೋಕ್‌ ಸಿಂಘಲ್‌ ಅವರ ಮುಂದೆ ಮಂದಿರ ನಿರ್ಮಿಸಿಕೊಡುವ ಪ್ರಸ್ತಾಪವನ್ನು ಎಲ್‌ ಆ್ಯಂಡ್‌ ಟಿ ಇರಿಸಿತ್ತು. ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ಬಳಿಕ ಪುನಃ ಆ ಪ್ರಸ್ತಾಪವನ್ನು ಎಲ್‌ ಆ್ಯಂಡ್‌ ಟಿ ಇರಿಸಿದೆ. ಮಂದಿರ ನಿರ್ಮಿಸಿಕೊಡುವಷ್ಟುಮೂಲಸೌಕರ್ಯವು ಕಂಪನಿ ಬಳಿ ಇದೆ’ ಎಂದು ಹೇಳಿದರು. ಇದೇ ವೇಳೆ ಮಂದಿರದ ವಿನ್ಯಾಸ ಮತ್ತು ನಿರ್ಮಾಣವನ್ನು ಯಾವುದೇ ಶುಲ್ಕ ಪಡೆಯದೆಯೇ ನಿರ್ಮಿಸಿಕೊಡುವ ಆಫರ್‌ ಅನ್ನೂ ಎಲ್‌ ಆ್ಯಂಡ್‌ ಟಿ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

‘ಗಟ್ಟಿಮುಟ್ಟಾಗಿ ಮಂದಿರ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ನಡೆಯಬೇಕು. ಮಣ್ಣನ್ನು ಪರೀಕ್ಷೆಗಾಗಿ ಐಐಟಿ-ರೂರ್ಕಿಗೆ ಶೀಘ್ರ ಕಳಿಸಿಕೊಡಲಾಗುವುದು. ಮಂದಿರ ನಿರ್ಮಾಣ ಮುಗಿದರೂ ಒಳಗೆ ಕೆತ್ತನೆ ಕೆಲಸಗಳು ಬಾಕಿ ಇದ್ದರೆ ಮುಗಿಸಲಾಗುವುದು’ ಎಂದರು.