ನವದೆಹಲಿ[ಮಾ.06]: ಚೀನಾದಿಂದ ಹುಟ್ಟಿಕೊಂಡ ಮಾರಕ ಕೊರೋನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಿದ್ದು, ಈವರೆಗೂ ಸುಮಾರು 31 ಮಂದಿಯಲ್ಲಿ ಈ ಸೋಂಕು ಕಮಡು ಬಂದಿದೆ. ಸದ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿವೆ. ಹೀಗಿರುವಾಗಲೇ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗೂ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಕೂಡಾ ಬಾಧಿಸಲಾರಂಭಿಸಿದೆ. ಸಾಮಾನ್ಯ ಜ್ವರ ಬಂದರೂ ಜನ ಭಯ ಬಿದ್ದು ಆಸ್ಪತ್ರೆಗೆ ಓಡಲಾರಂಭಿಸಿದ್ದಾರೆ. ಹಾಗಾದ್ರೆ ಸಾಮಾನ್ಯ ಜ್ವರ ಮತ್ತು ಕೊರೋನಾ ವೈರಸ್ ಸೋಂಕಿಗಿರುವ ವ್ಯತ್ಯಾಸವೇನು? ಗುರುತಿಸೋದು ಹೇಗೆ? ಇಲ್ಲಿದೆ ವಿವರ

ಕೊರೋನಾ ವೈರಸ್ ಲಕ್ಷಣಗಳ ಕುರಿತು ಸ್ಪಷ್ಟವಾಗಿ ಮಾಹಿತಿ ಇಲ್ಲದಿರುವುದರಿಂದ ಜನರು ಕಂಗಾಲಾಗಿದ್ದಾರೆ. ಹೀಗಿರುವಾಗ ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಪ್ರೊಫೆಸರ್ ಅನಿಲ್ ಗುರ್ಟೂ ಈ ಎರಡರ ನಡುವಿನ ವ್ಯತ್ಯಾಸವನ್ನು ಸಾಮಾನ್ಯ ಭಾಷೆಯಲ್ಲಿ ಅರ್ಥವಾಗುವಂತೆ ತಿಳಿಸಿದ್ದಾರೆ. ಕೊರೋನಾ ವೈರಸ್ ಸೋಂಕಿತರಲ್ಲಿ ಪ್ರಮುಖವಾಗಿ ಎರಡು ಲಕ್ಷಣಗಳಿವೆ. ಮೊದಲನೆಯದಗಿ 10 ದಿನಗಳಲ್ಲಿ 104 ಡಿಗ್ರಿ ಜ್ವರ ಬಂದಿರಬೇಕು, ಯಾಕೆಂದರೆ ಕೊರೋನಾ ವೈರಸ್ ಪ್ರಭಾವ 10 ದಿನದಲ್ಲಿ ಅಂತ್ಯವಾಗುತ್ತದೆ ಹಾಗೂ ಎರಡನೆಯದಾಗಿ ನಿರಂತರ ಕೆಮ್ಮು.

ಸಾಮಾನ್ಯ ಜ್ವರ ಬಂದರೆ ನೆಗಡಿ, ಶೀತ, ಮೂಗು ಕಟ್ಟಿಕೊಳ್ಳುವುದು, ಗಂಟಲಿನಲ್ಲಿ ಸಮಸ್ಯೆ ಹಾಗೂ ಜ್ವರ ಇರುತ್ತದೆ. ಆಧರೆ ಕೊರೋನಾ ವೈರಸ್ ಸೋಂಕಿತರಲ್ಲಿ ಶೀತ ಹಾಗೂ ಮೂಗು ಕಟ್ಟಿಕೊಳ್ಳುವ ಸಮಸ್ಯೆ ಇರುವುದಿಲ್ಲ. ಈ ವೈರಸ್ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ನಡೆಸುತ್ತದೆ. ಹೀಗಾಗಿ ಒಣ ಕೆಮ್ಮು ಬಾಧಿಸುತ್ತದೆ.

ಇನ್ನು ಕೊರೋನಾ ವೈರಸ್ ಸಂಬಂಧ ಭಯ ಹೆಚ್ಚುತ್ತಿರುವ ನಡುವೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಇದನ್ನು ನಿಯಂತ್ರಿಸಲು ಸರ್ಕಾರ ರೂಪಿಸಿರುವ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ. ಹೀಗಿರುವಾಗ ಪ್ರತಿಪಕ್ಷಗಳಿಂದ ಹಲವಾರು ಪ್ರಶ್ನೆಗಳೂ ಅವರೆಡೆ ದಾಳಿ ಮಾಡಿವೆ.