Asianet Suvarna News Asianet Suvarna News

ಮುಹಮ್ಮದ್‌ ಪೈಗಂಬರರ ಬೋಧನೆ ಇಸ್ಲಾಂಗೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪ

ಇಸ್ಲಾಂನ ಪರಮೋಚ್ಚ ಧರ್ಮಗುರು ಪ್ರವಾದಿ ಮುಹಮ್ಮದರ ಜನ್ಮದಿನವನ್ನು ಈದ್‌ ಮಿಲಾದ್‌ ಎಂದು ಆಚರಿಸಲಾಗುತ್ತದೆ.  6ನೇ ಶತಮಾನದಲ್ಲಿಯೇ ಉಚ್ಚ-ನಿಚ ಮನೋಭಾವದ ವಿರುದ್ಧ ಸಮರ ಸಾರಿದ್ದವರು ಪ್ರವಾದಿ ಮುಹಮ್ಮದ್‌.

Eid e Milad celebrates the birthday of the Prophet Muhammad hls
Author
Bengaluru, First Published Oct 19, 2021, 5:42 PM IST

ಪ್ರವಾದಿ ಮುಹಮ್ಮದ್‌ರ ಕುರಿತು ನಾಡಿನ ಖ್ಯಾತ ಸಾಹಿತಿ ಡಾ.ದೇ.ಜವರೇಗೌಡ ಈ ರೀತಿ ಬರೆಯುತ್ತಾರೆ. ಅರೇಬಿಯಾದ ಮರುಭೂಮಿಯಲ್ಲಿ ಆಧ್ಯಾತ್ಮಿಕ ಪ್ರವಾಹವನ್ನು ಹರಿಸಿ, ಧಾರ್ಮಿಕ ಬೀಜವನ್ನು ಬಿತ್ತಿ, ಉಚ್ಚ ಸಂಸ್ಕೃತಿಯ ಬೆಳಕನ್ನು ಪಡೆದು ಇಡೀ ಜಗತ್ತಿಗೆ ಹಂಚಿದ ಪುಣ್ಯಜೀವಿ ಮುಹಮ್ಮದರು.

‘ಲಾ ಇಲಾಹ ಇಲ್ಲಲ್ಲಾಹ್‌’ ಮಂತ್ರಜ್ಯೋತಿಯಿಂದ ಇಡೀ ವಿಶ್ವವನ್ನೇ ಬೆಳಗಿದ ಮಹಾತ್ಮರವರು. ಇತಿಹಾಸವನ್ನು ನಿರ್ಮಿಸಿದ ಈ ಭವ್ಯ ಮಾನವ ಈ ನೆಲದ ಮೇಲೆ ಹರಿದಾಡದಿದ್ದರೆ ಜಗತ್ತು ಅಜ್ಞಾನಾಂಧಕಾರದಲ್ಲಿ, ಮೌಢ್ಯ ಮಾಲಿನ್ಯಗಳ ಕೆಸರುಸುಬಿನಲ್ಲಿ, ಅನಾಗರಿಕತೆಯ ಬಸಿರಲ್ಲಿ ತೊಳಲಾಡುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ.

ಇಂತಹ ಸಹಸ್ರಾರು ದಾರ್ಶನಿಕರು ಪ್ರವಾದಿ ಮುಹಮ್ಮದ್‌ರ ಮಹಾನ್‌ ವ್ಯಕ್ತಿತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಜೀವನ ತೆರೆದ ಗ್ರಂಥ. ದೇಶ, ಭಾಷೆ, ವರ್ಗ, ವರ್ಣ, ಲಿಂಗ, ಜಾತಿ, ಮತ ಧರ್ಮಭೇದವಿಲ್ಲದೆ ಪ್ರತಿಯೊಬ್ಬ ಮಾನವನೂ ಆ ವ್ಯಕ್ತಿತ್ವದಿಂದ ಮಾರ್ಗದರ್ಶನ ಪಡೆಯಬಹುದು, ಆ ಮಾರ್ಗದರ್ಶನದಿಂದ ಒಂದು ಯಶಸ್ವಿ ಜೀವನವನ್ನು ನಡೆಸಬಹುದು.

ಪ್ರತಿಯೊಬ್ಬರೂ ಗೌರವಾರ್ಹರು

ಪ್ರವಾದಿ ಮುಹಮ್ಮದ್‌ರ ಸಮಗ್ರ ಬೋಧನೆಗಳ ಕೇಂದ್ರ ಬಿಂದು ‘ಮಾನವ’. ಇಲ್ಲಿ ಯಾವ ಮಾನವನೂ ಕೀಳಲ್ಲ, ನಿಕೃಷ್ಟನಲ್ಲ. ಬದಲಾಗಿ ಪ್ರತಿಯೊಬ್ಬನೂ ಶ್ರೇಷ್ಠನೇ. ‘ವಲಕದ್‌ ಕರ್ರಮ್‌ನಾ ಬನೀ ಆದಮ್‌’ (ನಾವು ಮಾನವ ಸಂತತಿಗೆ ಶ್ರೇಷ್ಠತೆಯನ್ನು ದಯಪಾಲಿಸಿದ್ದೇವೆ) ಎಂಬ ಕುರಾನ್‌ ವಚನದ ಆಶಯದಂತೆ ಅಂತಹ ಸಮಾಜವನ್ನು ಅವರು ಸ್ಥಾಪಿಸಿ ತೋರಿಸಿ ಕೊಟ್ಟರು.

ಆಧುನಿಕ ಜಗತ್ತು ಪ್ರಗತಿಯ ಉತ್ತುಂಗದಲ್ಲಿದ್ದರೂ ಇಂದಿಗೂ ಉಚ್ಚ-ನೀಚ, ಕರಿಯ-ಬಿಳಿಯ, ಸವರ್ಣೀಯ-ಅವರ್ಣೀಯ ಮುಂತಾದ ಮನೋಭಾವದಿಂದ ಮುಕ್ತವಾಗಿಲ್ಲ. ಪ್ರವಾದಿ ಮುಹಮ್ಮದ್‌ರು 6ನೇ ಶತಮಾನದಲ್ಲಿಯೇ ಈ ಮನೋಭಾವದ ವಿರುದ್ಧ ಸಮರ ಸಾರಿದರು. ತಮ್ಮ ಅಂತಿಮ ವಿದಾಯ ಭಾಷಣದಲ್ಲಿ ಇದನ್ನು ಸ್ಪಷ್ಟವಾಗಿ ಈ ರೀತಿಯಾಗಿ ಘೋಷಿಸಿದ್ದರು, ‘ಜನರೇ, ಅಲ್ಲಾಹನು ಈ ರೀತಿ ಹೇಳಿರುವನು: ಮಾನವರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು.

ನಾನು ನಿಮ್ಮನ್ನು ವಿವಿಧ ಕುಲ-ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಇಟ್ಟುಕೊಳ್ಳಲು. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನು. ಅರಬನಿಗೆ ಅರಬೇತರನ ಮೇಲೆ ಯಾವ ಶ್ರೇಷ್ಠತೆಯಿಲ್ಲ.

ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ, ಧರ್ಮನಿಷ್ಠೆ ಮತ್ತು ದೇವಭಕ್ತಿಯ ಹೊರತು’. ಮಾನವ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘೋಷಣೆ. ಅವರು ಕೇವಲ ಘೋಷಣೆಯನ್ನು ಮಾತ್ರ ಮಾಡಿದವರಲ್ಲ, ಬದಲಾಗಿ ಅಂತಹ ಒಂದು ಮಾದರಿ ಸಮಾಜವನ್ನು ನಿರ್ಮಿಸಿ ತೋರಿಸಿ ಕೊಟ್ಟರು. ಇದು ಪ್ರವಾದಿ ಮುಹಮ್ಮದ್‌ರ ಮಹತ್ವವನ್ನೂ ತೋರಿಸಿ ಕೊಡುತ್ತದೆ.

ಪ್ರತಿಯೊಬ್ಬನೂ ಹೊಣೆಗಾರ

ಪ್ರವಾದಿ ಮುಹಮ್ಮದ್‌ರು ಮಾನವನಿಗೆ ಕೇವಲ ಹಕ್ಕುಗಳನ್ನು ಮಾತ್ರ ಹೇಳಿಕೊಟ್ಟಿಲ್ಲ, ಬದಲಾಗಿ ಮಾನವನ ಕರ್ತವ್ಯಗಳನ್ನೂ ನೆನಪಿಸಿದ್ದರು. ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ. ತನ್ನ ಜವಾಬ್ದಾರಿಕೆಯ ಕುರಿತು ಪ್ರತಿಯೊಬ್ಬನೂ ಪ್ರಶ್ನಿಸಲ್ಪಡುತ್ತಾನೆ. ಸಮಾಜದಲ್ಲಿ ಓರ್ವ ವ್ಯಕ್ತಿ ತನ್ನ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ವಿವಿಧ ರಂಗಗಳಲ್ಲಿ ತನ್ನ ಪಾತ್ರವನ್ನು ವಹಿಸುತ್ತಾನೆ. ಒಂದು ವೇಳೆ ಆತನು ತನ್ನ ಜವಾಬ್ದಾರಿಯನ್ನು ಅರಿತು ನಿರ್ವಹಿಸುತ್ತಾನೆಂದಾದರೆ, ಖಂಡಿತವಾಗಿ ಆತನೂ ಯಶಸ್ವಿಯಾಗುತ್ತಾನೆ ಮತ್ತು ಅವನಿಂದಾಗಿ ಒಂದು ಮಾದರಿ/ಯಶಸ್ವಿ ಸಮಾಜ ನಿರ್ಮಾಣವಾಗುತ್ತದೆ.

ಜೀವನಕ್ಕೆ ಮಾದರಿ

ಪ್ರವಾದಿ ಮುಹಮ್ಮದ್‌ರು ಕೇವಲ ಧರ್ಮ ಬೋಧಕರಲ್ಲ. ಅವರು ಯಾವುದೇ ಧರ್ಮದ ಸ್ಥಾಪಕರೂ ಅಲ್ಲ. ಅವರಿಗಿಂತ ಮುಂಚೆ ಬಂದಂತಹ ಎಲ್ಲಾ ಪ್ರವಾದಿಗಳ ಸಂದೇಶವನ್ನೇ ಅವರು ಬೋಧಿಸಿದರು. ಜೀವನದ ಎಲ್ಲಾ ರಂಗಗಳಿಗೂ ಬೇಕಾದ ಮಾರ್ಗದರ್ಶನವನ್ನು ಹಾಗೂ ನೇತೃತ್ವವನ್ನೂ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಪ್ರೊ

ಕೆ.ಎಸ್‌.ರಾಮಕೃಷ್ಣ ರಾವ್‌ ತಮ್ಮ ಕೃತಿಯೊಂದರಲ್ಲಿ ಈ ರೀತಿಯಾಗಿ ಬರೆಯುತ್ತಾರೆ, ಮುಹಮ್ಮದ್‌ರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಗ್ರಹಿಸಲು ಕಷ್ಟಸಾಧ್ಯ. ಅದರ ಒಂದು ಸಣ್ಣ ಅಂಶವನ್ನಷ್ಟೇ ಗ್ರಹಿಸಲು ನನಗೆ ಸಾಧ್ಯವಾಗಿದೆ. ಎಂತಹ ಹೃದಯಂಗಮ ಬಹುಮುಖ ಪ್ರತಿಭೆ! ಎಂತಹ ಅನುಪಮ ರಂಗಗಳು! ಮುಹಮ್ಮದ್‌ ಎಂಬ ಪ್ರವಾದಿ, ಮುಹಮ್ಮದ್‌ ಎಂಬ ಆಡಳಿತಗಾರ, ಮುಹಮ್ಮದ್‌ ಎಂಬ ವ್ಯಾಪಾರಿ, ಮುಹಮ್ಮದ್‌ ಎಂಬ ಉಪದೇಶಕ, ಮುಹಮ್ಮದ್‌ ಎಂಬ ತತ್ವಜ್ಞಾನಿ, ಮುಹಮ್ಮದ್‌ ಎಂಬ ರಾಜಕಾರಣಿ, ಮುಹಮ್ಮದ್‌ ಎಂಬ ವಾಗ್ಮಿ, ಮುಹಮ್ಮದ್‌ ಎಂಬ ಸುಧಾರಕ, ಮುಹಮ್ಮದ್‌ ಎಂಬ ಅನಾಥ ಸಂರಕ್ಷಕ, ಮುಹಮ್ಮದ್‌ ಎಂಬ ಗುಲಾಮ ವಿಮೋಚಕ, ಮುಹಮ್ಮದ್‌ ಎಂಬ ಸ್ತ್ರೀ ವಿಮೋಚಕ, ಮುಹಮ್ಮದ್‌ ಎಂಬ ಕಾನೂನು ತಜ್ಞ, ಮುಹಮ್ಮದ್‌ ಎಂಬ ನ್ಯಾಯಾಧೀಶ, ಮುಹಮ್ಮದ್‌ ಎಂಬ ಪುಣ್ಯಾತ್ಮ, ಉಜ್ವಲವಾದ ಈ ಎಲ್ಲ ರೂಪಗಳಲ್ಲಿ ಮಾನವ ಜೀವನದ ಎಲ್ಲ ರಂಗಗಳಲ್ಲಿ ಅವರೋರ್ವ ಹೀರೋ ಆಗಿದ್ದರು.

ಜಗತ್ತು ಅನೇಕ ಧಾರ್ಮಿಕ ನಾಯಕರನ್ನು, ತತ್ವಜ್ಞಾನಿಗಳನ್ನು, ದಾರ್ಶನಿಕರನ್ನು ಕಂಡಿದೆ. ಆದರೆ ಪ್ರವಾದಿ ಮುಹಮ್ಮದ್‌ರ ಜೀವನವು ಇವರೆಲ್ಲರಿಗಿಂತ ವಿಭಿನ್ನವಾಗಿದೆ. ಜೀವನದ ಸಮಗ್ರ ಕ್ಷೇತ್ರಗಳಿಗೂ, ಮಾನವ ಜೀವನದ ಪ್ರತಿಯೊಂದು ರಂಗಕ್ಕೂ ಅವರ ಜೀವನ ಮಾರ್ಗದರ್ಶಿಯಾಗಿದೆ. ಪ್ರತಿಯೊಬ್ಬ ಜನಸಾಮಾನ್ಯನೂ ಅವರ ಜೀವನದಿಂದ ಮಾರ್ಗದರ್ಶನ ಪಡೆಯಬಹುದು. ಅದು ಕೆಲವೇ ಜನವಿಭಾಗ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವರ ಸಂದೇಶವು ಸಾರ್ವಕಾಲಿಕ, ಸಾರ್ವತ್ರಿಕ, ಪ್ರಾಯೋಗಿಕ, ನೈಸರ್ಗಿಕ ಮತ್ತು ಸಮಗ್ರವಾಗಿದೆ.

ಪ್ರವಾದಿಯ ಜೀವನ ಹೇಗಿತ್ತು?

ಪ್ರವಾದಿ ಮುಹಮ್ಮದರು ಎಲ್ಲರಂತೆ ಒಬ್ಬ ಮನುಷ್ಯ. 40ನೇ ವಯಸ್ಸಿನಲ್ಲಿ ಸೃಷ್ಟಿಕರ್ತನಾದ ದೇವನ ವತಿಯಿಂದ ಅವರಿಗೆ ‘ಪ್ರವಾದಿತ್ವ’ ಲಭಿಸುತ್ತದೆ. ಅವರು ದೇವನ ಅಂತಿಮ ಪ್ರವಾದಿಯಾಗಿದ್ದಾರೆ. ಪವಿತ್ರ ಕುರಾನ್‌ನಿಂದ ಮತ್ತು ಸ್ವತಃ ಅವರ ವಚನಗಳಿಂದ ಅವರು ಸಮಸ್ತ ಲೋಕದವರಿಗಾಗಿ ಕಳುಹಿಸಲ್ಪಟ್ಟವರೆಂದು ತಿಳಿದು ಬರುತ್ತದೆ.

ಅರೇಬಿಯಾದ ಮೆಕ್ಕಾ ಪಟ್ಟಣದಲ್ಲಿ ಜನಿಸಿದ ಅವರು ಕೇವಲ ಅರಬ್ಬರಿಗೆ ಸೀಮಿತವಾದವರಲ್ಲ. ಅವರ ಸಂದೇಶ ಸಕಲ ಮಾನವಕುಲಕ್ಕಾಗಿದೆ. ತಮ್ಮ 63ನೇ ವಯಸ್ಸಿನಲ್ಲಿ ಈ ಲೋಕಕ್ಕೆ ವಿದಾಯ ಕೋರಿದ ಅವರು ಇಂದಿಗೆ ಸುಮಾರು 1450 ವರ್ಷಗಳು ಸಂದರೂ ಅವರ ಬೋಧನೆಗಳು ಸಂಪೂರ್ಣವಾಗಿ ಈಗಲೂ ಸುರಕ್ಷಿತವಾಗಿದೆ.

ಮಾನವ ಹೃದಯಗಳಿಗೆ ಶಾಂತಿ-ಸಮಾಧಾನವನ್ನು ನೀಡುವ ಅವರ ಸಂದೇಶಗಳ ಒಟ್ಟು ಸಾರಾಂಶ ಇಷ್ಟೆ: ಇಡೀ ವಿಶ್ವಕ್ಕೆ ಓರ್ವ ಸೃಷ್ಟಿಕರ್ತನಾದ ದೇವನಿದ್ದಾನೆ. ನಾವೆಲ್ಲರೂ ಆ ದೇವನ ಸೃಷ್ಟಿಗಳು, ದಾಸರು. ಎಲ್ಲರೂ ಆ ದೇವನ ದಾಸ್ಯ-ಆರಾಧನೆಗಾಗಿ ಮಾತ್ರ ಸೃಷ್ಟಿಸಲ್ಪಟ್ಟವರು. ನನ್ನ ಜೀವನದ ಪ್ರತಿಯೊಂದು ಕೃತ್ಯವನ್ನು/ ಕರ್ಮವನ್ನು ದೇವನು ವೀಕ್ಷಿಸುತ್ತಿದ್ದಾನೆ. ಆತನ ವೀಕ್ಷಣೆಯಿಂದ ನಮ್ಮ ಯಾವ ಕೃತ್ಯವೂ ಮರೆಯಾಗಿಲ್ಲ. ನಾವೆಲ್ಲರೂ ಆ ದೇವನ ಮುಂದೆ ಒಂದು ದಿನ ಹಾಜರಾಗಬೇಕಿದೆ. ಈ ಲೋಕದಲ್ಲಿ ಮಾಡಿದ ಪ್ರತಿಯೊಂದು ಕರ್ಮದ ಲೆಕ್ಕಾಚಾರವನ್ನು ನೀಡಬೇಕಾಗಿದೆ.

ಈ ಚಿಂತನೆ ಕೇವಲ ಕನಸಲ್ಲ. ಇದು ಅತ್ಯಂತ ನೈಸರ್ಗಿಕ ಹಾಗೂ ಪ್ರಾಯೋಗಿಕವಾಗಿದೆ. ಬನ್ನಿ! ಆ ಮಹಾನ್‌ ವ್ಯಕ್ತಿತ್ವದ ಜೀವನದ ಪುಟಗಳ ಮೇಲೊಂದು ಕಣ್ಣಾಡಿಸೋಣ.

- ಮುಹಮ್ಮದ್‌ ನವಾಝ್‌, ಬೆಂಗಳೂರು

Follow Us:
Download App:
  • android
  • ios