ಟಿಟಿಡಿ ಕೇಳಿದ ದರಕ್ಕೆ ಕೆಎಂಎಫ್ ತುಪ್ಪ ನೀಡಲಾಗದು: ಭೀಮಾ ನಾಯಕ್
ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್‌ನಿಂದ ದೂರ ಉಳಿದಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ.
ಬೆಂಗಳೂರು (ಆ.01): ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್‌ನಿಂದ ದೂರ ಉಳಿದಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಿಗೆ 14 ಲಕ್ಷ ಕೆಜಿ ತುಪ್ಪ ನಂದಿನಿಯಿಂದ ಸರಬರಾಜು ಆಗುತ್ತಿತ್ತು. ಈ ಹಿಂದೆ ರಿಯಾಯಿತಿ ದರದಲ್ಲಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಹೋಗುತ್ತಿತ್ತು. ಆದರೆ, ಈಗ ಕೆಎಂಎಫ್ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತುಪ್ಪದ ದರವನ್ನು ಏರಿಸಿದೆ. ದರ ಗೊಂದಲದಿಂದ ಕೆಎಂಎಫ್ ಟೆಂಡರ್‌ನಲ್ಲಿ ಭಾಗಹಿಸಿಲ್ಲ ಎಂದು ತಿಳಿಸಿದರು.
2005ರಿಂದ ಟಿಟಿಡಿಗೆ ತುಪ್ಪ ಸರಬರಾಜು ಮಾಡುತ್ತಿದ್ದೆವು. ಹಲವು ವರ್ಷ ಹಳೆಯ ದರದಲ್ಲೇ ನಂದಿನಿ ತುಪ್ಪವನ್ನು ಟಿಟಿಡಿಗೆ ಕಳುಹಿಸಿಕೊಟ್ಟಿದ್ದೇವೆ. 2021 ಹಾಗೂ 2022ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ತುಪ್ಪವನ್ನು ಸರಬರಾಜು ಮಾಡಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ಟಿಟಿಡಿ ಆಡಳಿತ ಮಂಡಳಿ ಟೆಂಡರ್ ಕರೆಯುತ್ತಾರೆ. ಸ್ಪರ್ಧಾತ್ಮಕ ದರಲ್ಲಿ ನಂದಿನಿ ತುಪ್ಪವನ್ನು ಕೊಡಲು ಸಾಧ್ಯವಿಲ್ಲ. ನಮ್ಮ ದರಕ್ಕೆ ಬಂದರೆ ಈಗಲೂ ಕೂಡ ತುಪ್ಪ ಕೊಡುವುದಿಲ್ಲ ಎಂದು ನಾವು ಹೇಳುವುದಿಲ್ಲ ಎಂದರು.
ಆಗಸ್ಟ್ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್
ಹೊರ ದೇಶದಲ್ಲೂ ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಇದೆ. ಗ್ರಾಹಕರು ನಂದಿನಿ ತುಪ್ಪ ಸೇರಿದಂತೆ ಉತ್ಪನ್ನಗಳ ಬಗ್ಗೆ ವಿಶ್ವಾಸವಿಟ್ಟಿದ್ದಾರೆ ಎಂದ ಅವರು, ಟಿಟಿಡಿಗೆ ಹಲವು ಕಂಪನಿಗಳು ತುಪ್ಪ ಸರಬರಾಜು ಮಾಡುತ್ತವೆ. ನಾವು ಹಲವು ವರ್ಷಗಳಿಂದ ಟಿಟಿಡಿಗೆ ಟ್ಯಾಂಕರ್ ಮೂಲಕ ತುಪ್ಪ ಸರಬರಾಜು ಮಾಡುತ್ತೇವೆ. ಆದರೆ, ಅಲ್ಲಿನ ಆಡಳಿತ ಮಂಡಳಿ ವಾರಗಟ್ಟಲೆ ಟ್ಯಾಂಕರ್‌ಗಳನ್ನು ಅಲ್ಲಿಯೇ ನಿಲ್ಲಿಸಿಕೊಳ್ಳುತ್ತಾರೆ. ಇದರಿಂದ ನಮಗೆ ಸಾಕಷ್ಟುಸಮಸ್ಯೆಗಳಾಗಿವೆ. ಟಿಟಿಡಿ ಆಡಳಿತ ಮಂಡಳಿ ನಮ್ಮ ದರಕ್ಕೆ ಒಪ್ಪಿದರೆ ಮಾತ್ರ ತುಪ್ಪ ಸರಬರಾಜು ಮಾಡುತ್ತೇವೆ ಇಲ್ಲದಿದ್ದರೆ ಕೊಡಲ್ಲ. ತಿರುಪತಿ ದೇವಸ್ಥಾನದಲ್ಲಿ ನಂದಿನಿ ತುಪ್ಪದಿಂದ ಲಡ್ಡು ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅವರು ಕೇಳುವ ಬೆಲೆಗೆ ತುಪ್ಪ ಕೊಡುವ ಪ್ರಶ್ನೆಯೇ ಇಲ್ಲ. ಅವರು ಕೇಳುವುದಕ್ಕಿಂತ ಹೆಚ್ಚು ತುಪ್ಪ ಕೊಡುತ್ತೇವೆ. ಆದರೆ ಅವರು ನಮ್ಮ ಎಂಆರ್‌ಪಿ ದರದಲ್ಲಿ ತೆಗೆದುಕೊಂಡು ಮಾತ್ರ ಎಂದು ಹೇಳಿದರು.
ರಾಜಕೀಯ ಬೇಡ: ನಂದಿನಿ ವಿಚಾರದಲ್ಲಿ ರಾಜಕೀಯ ಬೇಡ. ಸಿ.ಟಿ.ರವಿ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಮೊದಲು ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಯೋಚನೆ ಮಾಡಲಿ. ಅದನ್ನು ಬಿಟ್ಟು ಹಾಲು, ಮೊಸರು, ತುಪ್ಪ ಅನ್ನುವುದು ಬೇಡ. ಕಳೆದ ವರ್ಷ ಹಸುಗಳಿಗೆ ರೋಗ ಬಂದಿತ್ತು. ಹಾಲಿನ ಉತ್ಪಾದನೆ ಕಡಿಮೆ ಆಗಿತ್ತು. ಆವಾಗ ಈ ಪ್ರಶ್ನೆಗಳು ಯಾಕೆ ಬರಲಿಲ್ಲ. ರೈತರಿಗೆ 3 ರು.ಹೆಚ್ಚುವರಿಯಾಗಿ ಕೊಟ್ಟಿದ್ದು ಬಿಜೆಪಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ದಯವಿಟ್ಟು ಕೆಎಂಎಫ್ ವಿಚಾರವಾಗಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದರು.
ನಗರಸಭೆಯ ಭ್ರಷ್ಟಾಚಾರ ಕ್ಲೀನ್ ಮಾಡುವೆ: ಶಾಸಕ ಪ್ರದೀಪ್ ಈಶ್ವರ್
ಮಾಜಿ ಶಾಸಕ ಸಿಟಿ ರವಿ ಅವರು, ಟ್ವೀಟ್ ಮಾಡಿ, ನಂದಿನಿಯು ಟಿಟಿಡಿಗೆ ಹಿಂದಿನ ದರದಲ್ಲಿ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹಾಗಾಗಿ ನಂದಿನಿ ಇನ್ನು ಮುಂದೆ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪವನ್ನು ಪೂರೈಸುವುದಿಲ್ಲ. ಕಾಂಗ್ರೆಸ್ ತನ್ನ ಅಜೆಂಡಾವನ್ನು ಅನುಸರಿಸಲು ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಹವಣಿಸುತ್ತಿದೆ ಟೀಕಿಸಿದ್ದರು.