Asianet Suvarna News Asianet Suvarna News

'ರಾಕಿ ಭಾಯ್‌' ಟಚ್‌ ಮಾಡಿದ ಕಾಂಗ್ರೆಸ್‌ಗೆ ಶಾಕ್‌, ಟ್ವಿಟರ್‌ ಖಾತೆ ಬ್ಲಾಕ್‌ಗೆ ಕೋರ್ಟ್‌ ಆದೇಶ!

ರಾಕಿ ಭಾಯ್‌ನ ಟಚ್‌ ಮಾಡಿದ್ರೆ ಅಧೀರ, ಗರುಡ ಮಾತ್ರವಲ್ಲ ರಿಯಲ್‌ ಲೈಫ್‌ ಅಲ್ಲಿ ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಯಾತ್ರೆಗೂ ಕಂಟಕವಾಗಿದೆ. ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಹಾಡನ್ನು ಬಳಕೆ ಮಾಡಿಕೊಂಡಿದ್ದ ಕಾರಣಕ್ಕೆ ಬೆಂಗಳೂರು ಕೋರ್ಟ್‌ ಪಕ್ಷದ ಟ್ವಿಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಆದೇಶ ನೀಡಿದೆ.
 

KGF Chapter 2 copyright violation Twitter asked to block handles of Congress and Bharat Jodo Yatra san
Author
First Published Nov 7, 2022, 8:28 PM IST

ಬೆಂಗಳೂರು (ನ.7): ದೇಶದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಬ್ಲಾಕ್‌ಬಸ್ಟರ್‌ ಚಿತ್ರ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷ ಹಾಗೂ ಭಾರತ್‌ ಜೋಡೋ ಯಾತ್ರೆಯ ಮೇಲೆ ಬೆಂಗಳೂರು ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ. ಎಂಆರ್‌ಟಿ ಮ್ಯೂಸಿಕ್‌ ಮಾಲೀಕತ್ವದ ಹಕ್ಕುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಭಾರತ್‌ ಜೋಡೋ ಯಾತ್ರೆಯ ಟ್ವಿಟರ್‌ ಹ್ಯಾಂಡಲ್‌ಅನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಕೋರ್ಟ್‌ ಸೋಮವಾರ ಆದೇಶ ನೀಡಿದೆ. ತನ್ನ ಅನುಮತಿಯಿಲ್ಲದೆ, ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ಪಕ್ಷ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಹಾಡುಗಳನ್ನು ಬಳಸಿಕೊಂಡಿದೆ. ಇದು ನನ್ನ ಶಾಸನಬದ್ಧ ಹಕ್ಕುಸ್ವಾಮ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್‌ ದೂರು ನೀಡಿತ್ತು. ಬಳಿಕ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌ ಹಾಗೂ ಸುಪ್ರಿಯಾ ಶಿರ್ನಾಟೆ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿತ್ತು.


ಧ್ವನಿ ದಾಖಲೆಗಳ ಆಪಾದಿತ ಅಕ್ರಮ ಬಳಕೆಯನ್ನು ಪ್ರೋತ್ಸಾಹಿಸಿದರೆ, ದೂರುದಾರರಾಗಿರುವ ಎಂಆರ್‌ಟಿ ಮ್ಯೂಸಿಕ್‌ಗೆ ದೊಡ್ಡ ನಷ್ಟವನ್ನು ಅನುಭವಿಸುತ್ತಾನೆ ಮತ್ತು ಇದು ಕಳ್ಳತನವನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಲು ಕಾರಣವಾಗುತ್ತದೆ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಕೋರ್ಟ್‌ ಹೇಳಿದೆ.

"ಎಂಆರ್‌ಟಿ ಮ್ಯೂಸಿಕ್‌, ನಿರ್ದಿಷ್ಟವಾಗಿ ಅಕ್ರಮವಾಗಿರುವ ಪ್ರತಿ ಅಂಶಗಳನ್ನು ಒಳಗೊಂಡಿರುವ ಸಿಡಿ ತೋರಿಸಿದ್ದಾರೆ. ಅಕ್ರಮವಾಗಿ ಮೂಲ ಆವೃತ್ತಿಯ ಹಾಡನ್ನು ತಮ್ಮದೇ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ಸರಿಪಡಿಸಲೇ ಇದ್ದಲ್ಲಿ, ಮುಂದೆ ಇದು ಪೈರಸಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಕಾರಣವಾಗುತ್ತದೆ, ”ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಯಲ್ಲಿ ಇವೆಲ್ಲವನ್ನೂ ಪರಿಗಣಿಸಿದ ನ್ಯಾಯಾಲಯವು ತಡೆಯಾಜ್ಞೆಯ ಆದೇಶದ ಮೂಲಕ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಕೆಜಿಎಫ್‌ ಚಾಪ್ಟರ್‌-2 ಹಾಡಿನ ಮಾಲೀಕತ್ವದ ಹಕ್ಕುಸ್ವಾಮ್ಯದ ಕೆಲಸವನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಎಂದು ಆದೇಶ ನೀಡಿದೆ. ಅದರೊಂದಿಗೆ  ಟ್ವಿಟರ್‌ಗೆ ತನ್ನ ಪ್ಲಾಟ್‌ಫಾರ್ಮ್‌ನಿಂದ ಮೂರು ಲಿಂಕ್‌ಗಳನ್ನು ತೆಗೆದುಹಾಕುವಂತೆ ಅದು ನಿರ್ದೇಶಿಸಿದೆ ಮತ್ತು ಐಎನ್‌ಸಿ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಹ್ಯಾಂಡಲ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಆದೇಶ ನೀಡಿದೆ.

ಕೆಜಿಎಫ್‌ ಮ್ಯೂಸಿಕ್‌ ಬಳಕೆ: ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌

ಎಂಆರ್‌ಟಿ ಪರ ವಕೀಲರು ಕಾಂಗ್ರೆಸ್‌ ಪಕ್ಷ ತಮ್ಮ ಸಂಗೀತವನ್ನು ಕಾನೂನುಬಾಹಿರವಾಗಿ ಬಳಸುತ್ತಿರುವುದರಿಂದ ಮತ್ತು ಅವರ ಹಕ್ಕುಗಳನ್ನು ಉಲ್ಲಂಘಿಸುವುದರಿಂದ, ಕಾಂಗ್ರೆಸ್‌ ಪಕ್ಷದ ಟ್ವಿಟರ್ ಖಾತೆ ಮತ್ತು ಭಾರತ್ ಜೋಡೋ ಯಾತ್ರಾ ಟ್ವಿಟರ್, ಇನ್ಸ್‌ಟಾಗ್ರಾಮ್‌, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಖಾತೆಗಳಲ್ಲಿ ಉಲ್ಲಂಘನೆಯ ವಸ್ತುಗಳನ್ನು ಸಂರಕ್ಷಿಸಲು ಮತ್ತು ಎಲೆಕ್ಟ್ರಾನಿಕ್ ಆಡಿಟ್ ಅನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸುವುದು ಅಗತ್ಯವಾಗಿದೆ ಎಂದು ವಾದಿಸಿದರು.  ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ, ಆಯುಕ್ತರನ್ನು ನೇಮಿಸದಿದ್ದರೆ ತಡೆಯಾಜ್ಞೆ ನೀಡುವ ಉದ್ದೇಶ ಸೋಲುತ್ತದೆ ಎಂದು ಹೇಳಿದೆ. ಹಾಗಾಗಿ,  ಕಾಂಗ್ರೆಸ್‌ ಪಕ್ಷದ ಖಾತೆಗಳಿಗೆ ಭೇಟಿ ನೀಡಲು, ಎಲೆಕ್ಟ್ರಾನಿಕ್ ಲೆಕ್ಕಪರಿಶೋಧನೆ ನಡೆಸಲು ಮತ್ತು ಅದರ ಇಂಥ ವಿಡಿಯೋ ತಯಾರಿಸಲು ಲಭ್ಯವಿರುವ ಉಲ್ಲಂಘನೆ ವಸ್ತುಗಳನ್ನು ಸಂರಕ್ಷಿಸಲು ಸ್ಥಳೀಯ ಕಮಿಷನರ್ ಆಗಿ ತನ್ನ ಕಂಪ್ಯೂಟರ್ ವಿಭಾಗದ ನಿರ್ವಾಹಕರನ್ನು ನೇಮಿಸಿತು.

ಬಾಲಿವುಡ್‌ ನಟಿ ಆಲಿಯಾ ಭಟ್‌ ಅಕ್ಕನ ಜತೆಗೆ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ..!

ಕೆಜಿಎಫ್‌ ಚಿತ್ರದ ಹಿಂದಿ ಆವೃತ್ತಿ ಸೇರಿದಂತೆ ಹಲವು ಭಾಷೆಗಳ ಮ್ಯೂಸಿಕ್‌ ಹಕ್ಕುಗಳನ್ನು ಎಂಆರ್‌ಟಿ ಮ್ಯೂಸಿಕ್‌ ಹೊಂದಿದೆ. ಈ ಕಂಪನಿಯ ಮುಖ್ಯಸ್ಥ ಎಂ.ನವೀನ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ಮತ್ತು ಪ್ರಚಾರ ಉಸ್ತುವಾರಿಯೂ ಆದ ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಸೋಶಿಯಲ್‌ ಮಿಡಿಯಾ ಹಾಗೂ ಡಿಜಿಟೆಲ್‌ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿತ್ತು.ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಎಂಆರ್‌ಟಿಸಿ ಮ್ಯೂಸಿಕ್‌ ಕಂಪನಿಯು ಕೆಜಿಎಫ್‌ ಸಿನಿಮಾದ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋ ಹಾಗೂ ಮ್ಯೂಸಿಕ್‌ ಹಕ್ಕು ಹೊಂದಿದೆ. 

 

Follow Us:
Download App:
  • android
  • ios