ಕೇರಳದ ಹಿನ್ನೀರಿನಲ್ಲಿ ಬೆಳೆಯುವ 'ಒತಲಂಗ' (Cerbera odollam) ಮರದ ಹಣ್ಣುಗಳು ನೋಡಲು ಮಾವಿನಕಾಯಿಯಂತೆ ಆಕರ್ಷಕವಾಗಿದ್ದರೂ, ಅವು ಅತ್ಯಂತ ವಿಷಕಾರಿಯಾಗಿವೆ. ಈ ಹಣ್ಣಿನಲ್ಲಿರುವ ಸೆರ್ಬೆರಿನ್ ಎಂಬ ಅಂಶವು ನೇರವಾಗಿ ಹೃದಯದ ಕಾರ್ಯವನ್ನು ನಿಲ್ಲಿಸಿ ಸಾವಿಗೆ ಕಾರಣವಾಗುತ್ತದೆ.

ಕೇರಳದ ಹಿನ್ನೀರಿನ ಪ್ರದೇಶದ ಸುತ್ತಮುತ್ತಲಲ್ಲಿ ಕಾಣಸಿಗುವ ಈ ಮರ, ಗಿಡದ ತುಂಬಾ ಹಸಿರೆಲೆ, ಬಿಳಿ ಹೂಗಳು ಮರದ ಸೌಂದರ್ಯ ಎಂಥವರನ್ನು ಆಕರ್ಷಿಸುತ್ತೆ. ಮರದ ಕೆಳಗೆ ಒಮ್ಮೆ ಕೂಡೋಣ ಅನಿಸುತ್ತೆ. ಮರದ ಕೆಳಗೆ ಕುಳಿತ ತಲೆ ಎತ್ತಿನೋಡಿದ್ರೆ ಮಾವಿನಕಾಯಿಯಂತೆ ಕಾಣುವ ಹಸಿರು ಬಣ್ಣದ ಹಣ್ಣುಗಳು ಗಿಡದ ತುಂಬಾ ಕಾಣುತ್ತವೆ. ನೋಡೋಕೆ ಮಾವಿನ ಕಾಯಿಯಂತೆ ಕಾಣುವ ಈ ಹಣ್ಣು ಎಂಬುದು ಹಣ್ಣಲ್ಲ! ಪ್ರಾಣಕ್ಕೆ ಕುತ್ತು ತರಬಲ್ಲ ವಿಷ! ಅಪ್ಪಿ ತಪ್ಪಿ ರುಚಿ ನೋಡುವ ಆಸೆಯಾಗಿ ತಿಂದಿರೋ ಕತೆ ಮುಗಿದಂತೆ ಲೆಕ್ಕ! ಏಕೆಂದರೆ ಈ ಹಸಿರು ಅದೆಷ್ಟು ವಿಷಕಾರಿಯಾಗಿದೆ ಎಂದರೆ ಹಣ್ಣು ತಿನ್ನುತ್ತಿದ್ದಂತೆ ಹೃದಯದ ಕಾರ್ಯವೇ ನಿಂತು ಹೋಗುತ್ತದೆ.

ಹೌದು ಕೇರಳದ ಈ ನಿಗೂಢ, ವಿಷಕಾರಿ ಮರದ ವಿಷಯಕ್ಕೆ ಸಂಬಂಧಿಸಿದಂತೆ ಸಾವುಗಳು ತನಿಖಾಧಿಕಾರಿಗಳಿಗೆ ಸವಾಲಾಗಿ ಪರಿಣಾಮಿಸಿದೆ. ಸಾವಿಗೆ ಕಾರಣವಾದ ವಿಷವನ್ನು ಪತ್ತೆಹಚ್ಚುವುದು.

ಒತಲಂಗ ಮರದ ಬಗ್ಗೆ ಇನ್ನೊಂದು ಬೆಚ್ಚಿಬಿಳಿಸುವ ಸಂಗತಿ!

ಕೇರಳಿಗರು ಸಾಮಾನ್ಯವಾಗಿ ಈ ಮರವನ್ನು ‘ಒತಲಂಗ’ (Othalanga) ಅಂತಾ ಕರೀತಾರೆ. ಆದರೆ ಈ ಮರದ ವೈಜ್ಞಾನಿಕ ಹೆಸರು ಬೇರೆಯಿದೆ. ಈ ವಿಷಾಕಾರಿ ಮರದ ಹೆಸರು Cerbera odollam ಎಂದು. ಈ ಮರದಿಂದಾಗಿ, ಹಣ್ಣು ಸೇವನೆಯಿಂದ ಹಲವು ಸಾವುಗಳು ಕೇರಳದಲ್ಲಿ ಸಂಭವಿಸಿವೆ. ಹೀಗಾಗಿ ಈ ಮರಕ್ಕೆ 'ಸಾವಿನ ಮರ' ಆತ್ಮ೧ತ್ಯೆಯ ಮರ ಎಂಬ ಭಯಾನಕ ಹೆಸರು ಬಂದಿದೆ. ಈ ಮರದ ಬಗ್ಗೆ ಇನ್ನೊಂದು ಬೆಚ್ಚಿಬಿಳಿಸುವ ಸಂಗತಿ ಎಂದರ ಅದರ ವಿಷಕಾರಿ ಗುಣ ಮಾತ್ರವಲ್ಲದೆ ಈ ವಿಷ ಪ್ರಯೋಗದಿಂದ ಸಂಭವಿಸಿದ ಸಾವುಗಳಿಗೆ ಈವರೆಗೆ ಕಾರಣವನ್ನು ಪತ್ತೆಹಚ್ಚಲು ವೈದ್ಯರಿಗಾಗಲಿ, ವಿಧಿವಿಜ್ಞಾನ ತಜ್ಞರಿಗಾಗಲಿ ಸಾಧ್ಯವಾಗದಂತಾಗಿದೆ ಎಂದರೆ ಅದರಲ್ಲಿ ವಿಷ ಹೇಗಿರಬಹುದು ಎಂಬುದು ಊಹಿಸಬಹುದು.

2004ರಲ್ಲಿ ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಈ ಒತಲಂಗ ಮರವು ಅಪೋಸೈನೇಸೀ (Apocynaceae) ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲೇ ಹಲವು ಅತ್ಯಂತ ವಿಷಕಾರಿ ಸಸ್ಯಗಳಿವೆ. ಯವಾನ್ ಗೈಲಾರ್ಡ್, ಅನಂತಶಂಕರನ್ ಕೃಷ್ಣಮೂರ್ತಿ ಮತ್ತು ಫ್ಯಾಬಿಯನ್ ಬೆವಲೋಟ್ ನಡೆಸಿದ ಅಧ್ಯಯನದ ನಡೆಸಿದ್ದಾರೆ. ಅವರ ಪ್ರಕಾರ ಹೇಳುವುದಾದರೆ ಈ ಮರದ ಬೀಜಗಳಲ್ಲಿ ಸೆರ್ಬೆರಿನ್ (Cerberin) ಎಂಬ ವಿಷಕಾರಿ ಅಂಶವಿದೆ. ಇದು ಹೃದಯದ ಸಾಮಾನ್ಯ ಎಲೆಕ್ಟ್ರಾನಿಕ್ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಸಾಮರ್ಥ್ಯ ಹೊಂದಿದೆಯೆಂದು ಹೇಳುತ್ತಾರೆ. ಹೀಗಾಗಿ ಈ ವಿಷದ ಪರಿಣಾಮ ಗಂಭೀರವಾಗಿರಬಹುದು. ಹೀಗಾಗಿ ಇದರ ಸೇವನೆಯಿಂದಾಗಿ ಹೃದಯ ಬಡಿತದಲ್ಲಿ ಅಪಾಯಕಾರಿ ಏರುಪೇರು ಉಂಟಾಗಬಹುದು. ಕೆಲವೊಮ್ಮೆ ಹೃದಯ ಸ್ತಂಭನಕ್ಕೂ ಕಾರಣವಾಗಬಹುದು.

ಈ ವಿಷಕಾರಿ ಮರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ!

2015ರ ಸೆಪ್ಟೆಂಬರ್‌ನಲ್ಲಿ ದಿ ಕಾರವಾನ್ ಒಂದು ವರದಿ ಪ್ರಕಟಿಸಿತ್ತು. ಅದರ ಪ್ರಕಾರ ಈ ಹಣ್ಣನ್ನು ‘ಸೀ ಮಾವು’ (Sea Mango) ಎಂದೂ ಕರೆಯಲಾಗುತ್ತದೆ. ನೋಡಲು ಸಾಮಾನ್ಯ ಹಣ್ಣಿನಂತೆ ಕಾಣುವುದರಿಂದ ಇದರ ಅಪಾಯವನ್ನು ಪತ್ತೆ ಹಚ್ಚೋಕೆ ಸಾಧ್ಯವೇ ಆಗಲ್ಲ. ಅದರಲ್ಲೂ ಈ ಹಣ್ಣಿನ ಒಳಗಿನ ಬೀಜ ಅತ್ಯಂತ ವಿಷಕಾರಿ. ಗೊತ್ತಿಲ್ಲದೆ ತಿಂದರೆ ಸಾವು ಖಚಿತ! ಇನ್ನೊಂದು ಶಾಕ್ ಆಗೋ ಸಂಗತಿ ಎಂದರೆ ಈ ಮರ ದೂರದ ಕಾಡುಗಳಲ್ಲಿ ಮಾತ್ರ ಬೆಳೆಯುವುದಲ್ಲ, ಕೇರಳದ ಕರಾವಳಿ ಪ್ರದೇಶಗಳಲ್ಲಿ ಜನವಸತಿ ಪ್ರದೇಶ, ಕೆರೆ, ಹಳ್ಳಕೊಳ್ಳಗಳಲ್ಲೇ ಬೆಳೆಯುತ್ತೆ. ಸ್ಥಳೀಯವಾಗಿ ಕಂಡುಬರುವ ಈ ಮರದ ವಿಷಕಾರಿ ಗುಣ ಸ್ಥಳೀಯರಿಗೆ ಮಾತ್ರ ಗೊತ್ತಿರುತ್ತೆ. ಕೇರಳ ಪ್ರವಾಸ ಹೋದವರು, ಪ್ರವಾಸಿಗರು ಅಪ್ಪಿತಪ್ಪಿ ಈ ಮರದಲ್ಲಿ ಹಣ್ಣು ಮಾವಿನಹಣ್ಣಿನಂತೆ ಸಿಹಿ ಇರುವುದೋ ಎಂದು ತಿಂದರೆ ಏನು ಗತಿ? ಹೀಗಾಗಿ ಮರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ನೂರಾರು ಸಾವುಗಳಿಗಿದೆ ಈ ಒತಲಂಗ ಮರದ ಲಿಂಕ್!

2004ರಲ್ಲಿ ಪ್ರಕಟವಾದ ಒಂದು ಅಧ್ಯಯನವು ಈ ಮರದ ವಿಷಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳನ್ನು ಹಿಂದಿನ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ವಿಧಿವಿಜ್ಞಾನ ತಜ್ಞರು ಎದುರಿಸುತ್ತಿದ್ದ ಸವಾಲುಗಳ ಬಗ್ಗೆಯೂ ಗಮನ ಸೆಳೆಯಲಾಗಿತ್ತು. ಸಂಶೋಧಕರ ಪ್ರಕಾರ, 1989ರಿಂದ 1999ರ ಅವಧಿಯಲ್ಲಿ ಕೇರಳದಲ್ಲಿ ಒತಲಂಗದ ವಿಷದಿಂದ 537 ಸಾವುಗಳು ಸಂಭವಿಸಿದ್ದವು ಎಂದು ದಾಖಲಿಸಲಾಗಿದೆ. ಆ ಅವಧಿಯಲ್ಲಿ ರಾಜ್ಯದಲ್ಲಿ ವರದಿಯಾದ ಸಸ್ಯಜನ್ಯ ವಿಷಪ್ರಯೋಗದ ಪ್ರಕರಣಗಳಲ್ಲಿ ಈ ಮರದ ಪಾತ್ರವೂ ಹೆಚ್ಚಿತ್ತು ಎಂದು ಅಧ್ಯಯನ ತಿಳಿಸಿತ್ತು. ಆದರೆ, ಇವು ಹಿಂದಿನ ವರ್ಷಗಳ ಅಂಕಿ-ಅಂಶಗಳಾಗಿವೆ. ಇವುಗಳನ್ನು ಈಗಿನ ವಾರ್ಷಿಕ ಸಾವಿನ ಸಂಖ್ಯೆಯೆಂದು ಪರಿಗಣಿಸಬಾರದು. ಆದರೂ ಆ ಅವಧಿಯಲ್ಲಿ ಈ ವಿಷದ ಸಮಸ್ಯೆ ಎಷ್ಟು ಗಂಭೀರವಾಗಿತ್ತು ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ.

ಈ ಸಸ್ಯದ ಬಗ್ಗೆ ವೈದ್ಯರು, ರಾಸಾಯನಿಕ ವಿಶ್ಲೇಷಕರು ಮತ್ತು ವಿಧಿವಿಜ್ಞಾನ ವಿಷಶಾಸ್ತ್ರ ತಜ್ಞರು ಸಾಕಷ್ಟು ಗಮನ ಹರಿಸಿಲ್ಲ ಎಂದು ಅಧ್ಯಯನದ ಲೇಖಕರು ಕಳವಳ ವ್ಯಕ್ತಪಡಿಸಿದ್ದರು. ಕೆಲವು ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ವಿಷ ನೀಡಿರುವ ಅನುಮಾನಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದರು. ಆದರೆ ಅನುಮಾನ ವ್ಯಕ್ತವಾದ ಪ್ರಕರಣಗಳೆಲ್ಲವೂ ಕೊಲೆಯೆಂದು ದೃಢಪಟ್ಟಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಅಂತಿಮವಾಗಿ ಖಚಿತಪಡಿಸಲು ಸಾಧ್ಯವಾಗಿರಲಿಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಧ್ಯಯನವು ಮರದ ವಿಷಕ್ಕೆ ಸಂಬಂಧಿಸಿದ ಸಾವುಗಳನ್ನು ದಾಖಲಿಸಿತ್ತು. ಹೆಚ್ಚುವರಿಯಾಗಿ ಉದ್ದೇಶಪೂರ್ವಕ ವಿಷಪ್ರಯೋಗ ನಡೆದಿರಬಹುದು ಎಂಬ ಅನುಮಾನಗಳನ್ನು ದೃಢಪಟ್ಟ ಸತ್ಯಗಳೆಂದು ಪರಿಗಣಿಸಲು ಸಾಧ್ಯವಿಲ್ಲ.

ಸಾವಿನ ಹಿಂದಿನ ಕಾರಣ ಪತ್ತೆಹಚ್ಚುವುದೇ ದೊಡ್ಡ ಸವಾಲು!

ಒತಲಂಗ ಮರದ ಬಗ್ಗೆ ಆತಂಕ ಹೆಚ್ಚಾಗಲು ಮತ್ತೊಂದು ಕಾರಣವಿದೆ. ಅದೇನೆಂದರೆ ಈ ಮರದಲ್ಲಿರುವ ವಿಷವನ್ನು ಪತ್ತೆಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. 2015ರ ಮೇ ತಿಂಗಳಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ವರದಿಯು Cerbera odollam ಮರದ ವಿಷಪ್ರಯೋಗವನ್ನು ಗುರುತಿಸುವಲ್ಲಿನ ತೊಂದರೆಗಳ ಬಗ್ಗೆ ವಿವರಿಸಿತ್ತು. ಆ ವರದಿಯ ಪ್ರಕಾರ ಹೇಳೋದಾದ್ರೆ ಆ ಸಮಯದಲ್ಲಿ ಬಳಕೆಯಲ್ಲಿದ್ದ ಸಾಮಾನ್ಯ ಮರಣೋತ್ತರ ಪರೀಕ್ಷೆಗಳಲ್ಲಿ ಸೆರ್ಬೆರಿನ್ ವಿಷ ಪತ್ತೆಯಾಗದೇ ಉಳಿಯುವ ಸಾಧ್ಯತೆಯಿತ್ತು. 2004ರ ಅಧ್ಯಯನದಲ್ಲಿಯೂ ಸೂಕ್ತ ವಿಶ್ಲೇಷಣೆಯ ಕೊರತೆಯಿಂದ ತನಿಖೆಗೆ ತೊಂದರೆಯಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದರು. ಆದರೆ ಈ ವಿಷವು ಯಾವುದೇ ಪುರಾವೆಯನ್ನೂ ಬಿಡುವುದಿಲ್ಲ ಎಂದರ್ಥವಲ್ಲ. ವಿಷಪ್ರಯೋಗದ ಅನುಮಾನವೇ ತನಿಖಾಧಿಕಾರಿಗಳಿಗೆ ಬರದಿದ್ದರೆ ಅಥವಾ ಸೂಕ್ತ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸದಿದ್ದರೆ ಸಾವಿಗೆ ಬೇರೆ ಕಾರಣವಿದೆ ಎಂದು ಆರಂಭದಲ್ಲಿ ಭಾವಿಸುವ ಸಾಧ್ಯತೆ ಇರುತ್ತದೆ.

ಉದಾಹರಣೆಗೆ ಈ ವಿಷಕಾರಿ ಮರದ ಹಣ್ಣು ತಿಂದೋ ಅಥವಾ ಇದನ್ನ ಬೆರೆಸಿ ತಿನ್ನಿಸಿದ್ದರಿಂದ ಹೃದಯಾಘಾತ ಸಂಭವಿಸಿದರೆ ಸಾಮಾನ್ಯವಾಗಿ ಜನ ಇದನ್ನು ಹೃದಯಾಘಾತ ಎಂದೇ ಪರಗಣಿಸುವ ಸಾಧ್ಯತೆ ಹೆಚ್ಚಿತ್ತು. ಈ ರೀತಿ ಅದೆಷ್ಟು ಪ್ರಕರಣ ನಡೆದಿರಬಹುದೋ ಏನೋ. ಹೃದಯದ ಮೇಲೆ ಪರಿಣಾಮ ಬೀರುವ ಕೆಲವು ವಿಷಗಳಿಂದ ಉಂಟಾಗುವ ಲಕ್ಷಣಗಳು ಇತರ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಲಕ್ಷಣಗಳನ್ನೂ ಹೋಲಬಹುದು. ಹೀಗಾಗಿ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ವ್ಯಕ್ತಿಯ ವೈದ್ಯಕೀಯ ಹಿನ್ನೆಲೆ, ಘಟನೆಯ ಸಂದರ್ಭ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಸೂಕ್ತ ವಿಷಶಾಸ್ತ್ರ ಪರೀಕ್ಷೆಗಳ ಫಲಿತಾಂಶಗಳನ್ನು ಒಟ್ಟಾಗಿ ಪರಿಶೀಲಿಸಬೇಕಾಗುತ್ತದೆ.

ಇಂದಿಗೂ ಈ ವಿಷಕಾರಿ ಮರದ ವಿಚಾರ ಚರ್ಚೆಯಲ್ಲಿದೆ. ವೈದ್ಯಕೀಯ ಅಧ್ಯಯನಗಳಲ್ಲಿನ ನಂತರದ ವಿಮರ್ಶೆಯೊಂದರ ಪ್ರಕಾರ ಒತಲಂಗದ ವಿಷವನ್ನು ಪತ್ತೆಹಚ್ಚುವಲ್ಲಿ ಕೆಲವು ನಿರ್ದಿಷ್ಟ ಸವಾಲುಗಳಿವೆ. ಸೆರ್ಬೆರಿನ್ ವಿಷಪ್ರಯೋಗವನ್ನು ಸಾಮಾನ್ಯವಾಗಿ ಬಳಸುವ ಡಿಗಾಕ್ಸಿನ್ ಪರೀಕ್ಷೆಯಿಂದ ಖಚಿತವಾಗಿ ಪತ್ತೆಹಚ್ಚಲು ಸಾಧ್ಯವಿಲ್ಲ. ಡಿಗಾಕ್ಸಿನ್ ಕೂಡ ಹೃದಯದ ಮೇಲೆ ಪರಿಣಾಮ ಬೀರುವ ಒಂದು ರಾಸಾಯನಿಕ ಅಂಶವಾದರೂ ಅದನ್ನು ಪತ್ತೆಹಚ್ಚಲು ರೂಪಿಸಿರುವ ಪರೀಕ್ಷೆಯು ಸೆರ್ಬೆರಿನ್ ವಿಷವನ್ನೂ ಪತ್ತೆಹಚ್ಚುತ್ತದೆ ಎಂದು ಹೇಳಲಾಗದು. ಇದರರ್ಥ ಈ ವಿಷವನ್ನು ಎಂದಿಗೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದಲ್ಲ. ವಿಷಪ್ರಯೋಗದ ಬಗ್ಗೆ ಸರಿಯಾದ ಅನುಮಾನ ಮೂಡುವುದು ಮತ್ತು ಅದಕ್ಕೆ ಸೂಕ್ತವಾದ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸುವುದು ಬಹಳ ಮುಖ್ಯ.

2015ರ ಮೇ ತಿಂಗಳಲ್ಲಿ ವಿಷ ಪ್ರಯೋಗದ ಒಂದು ಬೆಚ್ಚಿಬಿಳಿಸುವ ಘಟನೆ ನಡೆಯಿತು. ಆಲಪ್ಪುಳದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ನಡೆದಿದ್ದ ಈ ವಿಷಪ್ರಯೋಗದಿಂದ ನಾಲ್ವರು ಹದಿಹರೆಯದ ಕ್ರೀಡಾಪಟುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಒಬ್ಬರು ಮೃತಪಟ್ಟಿದ್ದರು ಎಂದು ದಿ ಕಾರವಾನ್ ವರದಿ ತಿಳಿಸಿತ್ತು. ಇಷ್ಟೊಂದು ಅಪಾಯಕಾರಿಯಾಗಿರುವ ಈ ವಿಷಮರ ಅಥವಾ ಸಾವಿನ ಮರಕ್ಕೆ ಕೇರಳ ಪರಿಸರ ವ್ಯವಸ್ತೆಯಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಕೇರಳದ ಪರಿಸರ ವ್ಯವಸ್ಥೆಯಲ್ಲೂ ಈ ಮರಕ್ಕೆ ಸ್ಥಾನವಿದೆ 'ಒತಲಂಗ' ಮರವು ವಿಷಕಾರಿ ಎಂಬ ಕಾರಣಕ್ಕೆ ಅದನ್ನು ಕೇವಲ ಅಪಾಯಕಾರಿ ಸಸ್ಯವೆಂದು ನೋಡುವುದು ಸರಿಯಲ್ಲ. ಈ ಮರವು ಕೇರಳದ ಕರಾವಳಿ ಪರಿಸರದ ಒಂದು ಭಾಗವಾಗಿದೆ.

ಇಲ್ಲಿ ಒಂದು ಪ್ರಮುಖ ವಿರೋಧಾಭಾಸವಿದೆ. ಒಂದೆಡೆ ಈ ಮರದ ವಿಷವು ಮಾರಣಾಂತಿಕವಾಗಬಹುದು. ಮತ್ತೊಂದೆಡೆ, ಈ ಮರವು ತನ್ನ ನೈಸರ್ಗಿಕ ಪರಿಸರ ವ್ಯವಸ್ಥೆಯ ಭಾಗವಾಗಿದೆ. ವಿಷಕಾರಿ ಗುಣವಿದೆ ಎಂಬ ಒಂದೇ ಕಾರಣಕ್ಕೆ ಇಡೀ ಮರವು ಪರಿಸರಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಲಾಗದು. ಹೀಗಾಗಿ ಈ ಸಸ್ಯದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಅದರ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ವಿಷಪ್ರಯೋಗದ ಅನುಮಾನವಿರುವ ಪ್ರಕರಣಗಳಲ್ಲಿ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಸೂಕ್ತ ವ್ಯವಸ್ಥೆಗಳನ್ನು ಹೊಂದಿರುವುದು ಮುಖ್ಯವಾಗಿದೆ.

ಕೇರಳದ ಜಲಮೂಲಗಳ ಪಕ್ಕದಲ್ಲಿ ಇಂದಿಗೂ ಒತಲಂಗ ಮರಗಳು ಬೆಳೆಯುತ್ತಿವೆ. ಅದರ ಹಣ್ಣುಗಳು ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾನ್ಯ ಹಣ್ಣುಗಳಂತೆಯೇ ಕಾಣಿಸುತ್ತವೆ. ಆದರೆ, ಅದರೊಳಗೆ ಅಡಗಿರುವ ವಿಷಕಾರಿ ಅಂಶವು ಗಂಭೀರ ಅಪಾಯವನ್ನುಂಟುಮಾಡಬಲ್ಲದು. ಹೊರನೋಟಕ್ಕೆ ಸಾಮಾನ್ಯವಾಗಿ ಕಾಣುವ ಪ್ರತಿಯೊಂದೂ ಸುರಕ್ಷಿತವಾಗಿರುವುದಿಲ್ಲ ಎಂಬುದನ್ನು ಈ ಮರ ನೆನಪಿಸುತ್ತದೆ. ಕೆಲವೊಮ್ಮೆ ಸಾವಿನ ನಿಜವಾದ ಕಾರಣವನ್ನು ಪತ್ತೆಹಚ್ಚಲು, ಸರಿಯಾದ ಪ್ರಶ್ನೆಗಳನ್ನು ಕೇಳುವುದರಿಂದಲೇ ತನಿಖೆ ಆರಂಭವಾಗಬೇಕಾಗುತ್ತದೆ.