ತಿರುವನಂತಪುರಂ[ನ.30]: ಆರೋಪಿಗೆ ಜಾಮೀನು ನೀಡಿಲ್ಲವೆಂದು ಆಕ್ರೋಶಗೊಂಡ ವಕೀಲರ ಗುಂಪೊಂದು ಮಹಿಳಾ ನ್ಯಾಯಾಧೀಶರನ್ನು ಕೊಠಡಿಯೊಳಗೆ ಕೂಡಿಹಾಕಿ, ಅವರಿಗೆ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಸ್ಥಳೀಯ ಬಾರ್‌ ಅಸೋಸಿಯೇಷನ್‌ನ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ 12 ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ನ.27ರಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೊಬ್ಬನ ಜಾಮೀನು ಅರ್ಜಿ ವಿಚಾರಣೆ ಇತ್ತು. ಈ ವೇಳೆ ಮಹಿಳಾ ನ್ಯಾಯಾಧೀಶರಾದ ದೀಪಾ ಮೋಹನ್‌, ಆರೋಪಿಗೆ ಜಾಮೀನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ವಕೀಲರ ಗುಂಪು ಜಡ್ಜ್‌ ವಿಚಾರಣೆ ನಡೆಸುತ್ತಿದ್ದ ಕೋಣೆಯ ಬಾಗಿಲು ಹಾಕಿ ನೀವು ಹೇಗೆ ಹೊರಗೆ ಬರುತ್ತೀರೋ ನೋಡುತ್ತೀವಿ ಎಂದು ಬೆದರಿಕೆ ಹಾಕಿದೆ. ಜೊತೆಗೆ ನೀವು ಮಹಿಳೆಯಾಗಿದ್ದಕ್ಕೆ ಸುಮ್ಮನೆ ಬಿಟ್ಟಿದ್ದೇವೆ. ಇಲ್ಲದೇ ಹೋದಲ್ಲಿ ಕೊಠಡಿಯಿಂದ ಹೊರಗೆ ಎಳೆದು ಹೊಡೆದು ಹಾಕುತ್ತಿದ್ದೆವು ಎಂದೆಲ್ಲಾ ಬೆದರಿಕೆ ಹಾಕಿ ಅವಮಾನ ಮಾಡಿದ್ದಾರೆ.

ಘಟನೆ ಸಂಬಂಧ ನ್ಯಾಯಾಧೀಶರು ದೂರು ನೀಡಿದ್ದಾರೆ. ಜೊತೆಗೆ ಕೇರಳ ಹೈಕೋರ್ಟ್‌ ಕೂಡಾ ಮಧ್ಯಪ್ರವೇಶ ಮಾಡಿ, ಆರೋಪಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದೆ.