ತಿರುವನಂತಪುರಂ(ಮೇ.06): ದೇಶಾದ್ಯಂತ ಕೊರೋನಾ ಹಾವಳಿ ಮಿತಿ ಮೀರಿದೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಯತ್ನ ನಡೆಸುತ್ತಿದ್ದರೂ ಪ್ರಕರಣಗಳ ಸಂಖ್ಯೆ ಇಳಿಯುತ್ತಿಲ್ಲ. ಕೊರೋನಾ ಪ್ರಕರಣಗಳು ಏರುತ್ತಿರುವ ರಾಜ್ಯಗಳಲ್ಲಿ ನೆರೆಯ ಕೇರಳ ಕೂಡಾ ಒಂದು. ಸದ್ಯ ಇಲ್ಲಿ ಕೊರೋನಾ ನಿಯಂತ್ರಿಸುವ ಸಲುವಾಗಿ ಸಿಎಂ ಪಿಣರಾಯಿ ವಿಜಯನ್ ಮೇ. 8ರಿಂದ(ಬೆಳಿಗ್ಗೆ 6 ಗಂಟೆಯಿಂದ) ಮೇ 16ವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌ‌ನ್ ಘೋಷಿಸಿದ್ದಾರೆ.

"

ಇನ್ನು ಏರುತ್ತಿರುವ ಕೊರೋನಾ ಪ್ರಕರಣಗಳಿಂದ ರಾಜ್ಯದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಸೋಂಕು ಬಹಳ ಶೀಘ್ರವಾಗಿ ಹರಡುತ್ತಿದೆ. ಪಾಸಿಟಿವಿಟಿ ದರವೂ ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ರಾಜ್ಯಾದ್ಯಂತ ಕಠಿಣ ಕ್ರಮ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಸಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ.

ಬುಧವಾರದಂದು ಕೇರಳದಲ್ಲಿ ಒಟ್ಟು 1,63,321 ಕೊರೋನಾ ಸ್ಯಾಂಪಲ್ ಟೆಸ್ಟ್‌ ಮಾಡಲಾಗಿತ್ತು. ಇದರಲ್ಲಿ 41,953 ಮಂದಿಗೆ ಕೊರೋನಾ ದೃಢಪಟ್ಟಿತ್ತು.