ತಿರುವನಂತಪುರಂ(ಜೂ.06): ಕೊರೋನಾ ವೈರಸ್‌ ಪ್ರಕರಣಗಳು ಒಂದಂಕಿಗೆ ಇಳಿದಿದ್ದ ಕೇರಳದಲ್ಲಿ ಒಮ್ಮೆಲೆ ಕೊರೋನಾ ಸ್ಫೋಟಗೊಂಡಿದೆ. ಶುಕ್ರವಾರ 111 ಕೊರೋನಾ ವೈರಸ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,699ಕ್ಕೆ ಏರಿಕೆಯಾಗಿದೆ.

ಅಲ್ಲದೇ ಕೇರಳದಲ್ಲಿ ಕೊರೋನಾ ವೈರಸ್‌ನ ದೈನಂದಿನ ಏರಿಕೆ ಮೂರಂಕಿ ತಲುಪಿರುವುದು ಇದೇ ಮೊದಲು. ಮೇ 8ರಂದು ಕೇರಳದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 16ಕ್ಕೆ ಇಳಿಕೆ ಕಂಡಿತ್ತು. ಆದರೆ, ವಿದೇಶ ಮತ್ತು ಅನ್ಯರಾಜ್ಯಗಳಿಂದ ಕೇರಳಕ್ಕೆ ಆಗಮಿಸಿದವರಿಂದ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ.

ರಾಜ್ಯದಲ್ಲಿ ಏರುತ್ತಿರುವ ಕೊರೋನಾ ಕೇಸ್ ನಡುವೆ ಬಯಲಾಯ್ತು ಶಾಕಿಂಗ್ ಮಾಹಿತಿ!

ಜೂ.1ರಂದು 57 ಪ್ರಕರಣಗಳು ದಾಖಲಾಗಿದ್ದರೆ, ಜೂ.2ರಂದು 86, ಜೂ.3ರಂದು 94 ಪ್ರಕರಣಗಳು ದಾಖಲಾಗಿದ್ದವು.

ದೇಶದಲ್ಲಿ ಒಂದೇ ದಿನ ಹತ್ತು ಸಾವಿರ ಪ್ರಕರಣ

ದೇಶದಲ್ಲಿ ಶುಕ್ರವಾರ ಒಂದೇ ದಿನ 10649 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಸೋಂಕಿನಿಂದಾಗಿ 334 ಮಂದಿ ಅಸುನೀಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯ ಸೋಂಕು, ಸಾವು ವರದಿಯಾಗಿರುವುದು ಇದೇ ಮೊದಲು. ಹೀಗಾಗಿ ಕೊರೋನಾ ತನ್ನ ಗರಿಷ್ಠ ಮಟ್ಟದತ್ತ ಭಾರತದಲ್ಲಿ ದಾಪುಗಲಿಡುತ್ತಿದೆಯಾ ಎಂಬ ಅನುಮಾನ ಮೂಡತೊಡಗಿದೆ.