Asianet Suvarna News Asianet Suvarna News

ಸಾಲ ಮಾಡಲು ಹೊರಟ ವ್ಯಕ್ತಿಗೆ 12 ಕೋಟಿ ಲಾಟರಿ!

ಸಾಲ ಮಾಡಲು ಹೊರಟ ವ್ಯಕ್ತಿಗೆ 12 ಕೋಟಿ ಲಾಟ್ರಿ!| ಕೇರಳದ ಬಡ ಕೂಲಿ ಕಾರ್ಮಿಕನಿಗೆ ಒಲಿದ ಅದೃಷ್ಟ| ಭಾರೀ ಸಾಲ ಮಾಡಿದ್ದ ರಾಜನ್‌ ಈಗ ಕೋಟ್ಯಧಿಪತಿ| ಕಳೆದ ವರ್ಷವಷ್ಟೇ ಮಗಳ ಮದುವೆ ಮಾಡಿದ್ದ ರಾಜನ್| ಇದರಿಂದಾಗಿ 7 ಲಕ್ಷ ಸಾಲ ಹಾಗೂ ಅದರ ಬಡ್ಡಿಯ ಹೊರೆ| ಅದನ್ನು ತೀರಿಸಲು ಬ್ಯಾಂಕ್‌ಗೆ ಹೋಗಿ ಮತ್ತೆ ಸಾಲಕ್ಕೆ ಯತ್ನ| ಆಗಲ್ಲವೆಂದ ಬ್ಯಾಂಕ್‌, ಬೇಸರದಲ್ಲಿ 300ರ ಲಾಟರಿ ಖರೀದಿ| ಇದಕ್ಕೆ ಹೊಡೀತು 12 ಕೋಟಿ ಜಾಕ್‌ಪಾಟ್‌. ಕೈಗೆ 7-8 ಕೋಟಿ

Kerala Man Buys Lottery Ticket On Way To Get A Loan Wins Rs 12 Crore
Author
Bangalore, First Published Feb 13, 2020, 7:59 AM IST

ತಿರುವನಂತಪುರಂ[ಫೆ.13]: ಈ ಹಿಂದಿನ 7 ಲಕ್ಷ ರು. ಸಾಲ ಮತ್ತು ಅದರ ಬಡ್ಡಿ ತೀರಿಸಲು ಇನ್ನೊಮ್ಮೆ ಸಾಲ ಸಿಗಬಹುದೇ ಎಂದು ವಿಚಾರಿಸಲು ಬ್ಯಾಂಕ್‌ಗೆ ಹೋಗಿದ್ದ ವ್ಯಕ್ತಿಯೊಬ್ಬನಿಗೆ ಭರ್ಜರಿ 12 ಕೋಟಿ ರು. ಲಾಟರಿ ಹೊಡೆದ ಅಚ್ಚರಿಯ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬ ಎಂಬಲ್ಲಿ ನಡೆದಿದೆ. ಭಾನುವಾರದವರೆಗೂ ಲಕ್ಷಗಟ್ಟಲೆ ಸಾಲ ಮತ್ತು ಸಮಸ್ಯೆಯ ಮೂಟೆಯನ್ನೇ ಹೊತ್ತಿದ್ದ ಬಡ ಕೂಲಿ ಕಾರ್ಮಿಕ ರಾಜನ್‌, ಸೋಮವಾರ ಬೆಳಗ್ಗೆ ವೇಳೆಗೆ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾನೆ.

ದಿಢೀರ್‌ ಭಾಗ್ಯ:

ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುವ ರಾಜನ್‌ ಕಳೆದ ವರ್ಷ ದೊಡ್ಡ ಮಗಳ ಮದುವೆ ಮಾಡಿದ್ದ. ಬಳಿಕ ಆತನ ಮೇಲೆ ಸುಮಾರು 7 ಲಕ್ಷ ರು. ಭಾರೀ ಸಾಲದ ಹೊರೆ ಕೂತಿತ್ತು. ಈ ನಡುವೆ ಹಣ ಇಲ್ಲದೆ ಹೊಸದಾಗಿ ಕಟ್ಟಿದ್ದ ಮನೆ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿದ್ದ. ಮಗ ಕೂಡಾ ವಿದ್ಯಾಭ್ಯಾಸ ಬಿಟ್ಟು ಕುಟುಂಬ ಸಾಕುವ ಹೊಣೆ ಹೊತ್ತುಕೊಂಡಿದ್ದ.

ಲಾಟರಿಯಲ್ಲಿ 7 ಕೋಟಿ ರೂ. ಗೆದ್ದ ಕೇರಳದ 11 ತಿಂಗಳ ಮಗು!

ಸಾಲ ಮತ್ತು ಬಡ್ಡಿ ಹೊರೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮತ್ತೊಮ್ಮೆ ಬ್ಯಾಂಕ್‌ಗೆ ತೆರಳಿದ್ದ ರಾಜನ್‌, ಮತ್ತೊಮ್ಮೆ ಸಾಲ ಪಡೆಯುವ ಯತ್ನ ಮಾಡಿದ್ದ. ಹೊಸ ಸಾಲ ಪಡೆದು, ಹಳೆ ಸಾಲ ತೀರಿಸುವ ಯೋಜನೆ ಆತನದ್ದಾಗಿತ್ತು. ಆದರೆ ಬ್ಯಾಂಕ್‌ನವರು ಸಾಧ್ಯವೇ ಇಲ್ಲ ಎಂದಿದ್ದರು. ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದ ರಾಜನ್‌, ದಾರಿಯಲ್ಲಿ ತನ್ನ ಎಂದಿನ ಲಾಟರಿ ಕೊಳ್ಳುವ ಹವ್ಯಾಸದಂತೆ ಲಾಟರಿ ಟಿಕೆಟ್‌ ಖರೀದಿಸಿದ್ದ. ಅದು ಕೇರಳ ಸರ್ಕಾರ ಪ್ರತಿ ವರ್ಷ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ವೇಳೆ ನಡೆಸುವ ಬಂಪರ್‌ ಬಹುಮಾನದ ಲಾಟರಿ ಆಗಿತ್ತು. ಟಿಕೆಟ್‌ ದರವೂ ಭರ್ಜರಿ 300 ರುಪಾಯಿ ಇತ್ತು.

ಲಾಟರಿ ಹೊಡೆವ ಯಾವುದೇ ನಿರೀಕ್ಷೆ ಇದ್ದಿರದ ರಾಜನ್‌, ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಈ ನಡುವೆ ಕಳೆದ ಸೋಮವಾರ ಲಾಟರಿ ವಿಜೇತರ ಹೆಸರು ಪ್ರಕಟಗೊಂಡಿತ್ತು. ಆದರೆ ಮೊದಲ ದಿ ನ ಯಾರೂ ಕೂಡಾ ತಮಗೆ ಜಾಕ್‌ಪಾಟ್‌ ಹೊಡೆದಿದೆ ಎಂದು ಹೇಳಿರಲಿಲ್ಲ. ಹೀಗಾಗಿ ಆ ರಾಜ್ಯದಾದ್ಯಂತ ಕುತೂಹಲ ಇತ್ತು. ಈ ನಡುವೆ ಮಂಗಳವಾರ ಮಧ್ಯಾಹ್ನ ರಾಜನ್‌, ತಾನು ಟಿಕೆಟ್‌ ಖರೀದಿಸಿದ್ದ ಅಂಗಡಿಗೆ ತೆರಳಿ ನಂಬರ್‌ ಪರೀಕ್ಷಿಸಿದಾಗ ಆತನಿಗೆ ಆತನ ಕಣ್ಣನ್ನೇ ನಂಬಲಾಗಿರಲಿಲ್ಲ. ಕಾರಣ, ಆತ ಖರೀದಿಸಿದದ ‘ಎಸ್‌ಟಿ 269609’ ಸಂಖ್ಯೆಗೆ ಭರ್ಜರಿ 12 ಕೋಟಿ ರು. ಬಹುಮಾನ ಬಂದಿತ್ತು.

ಏನಿದು ಅದೃಷ್ಟ: ಮೊದಲು 6 ಕೋಟಿ ರೂ. ಲಾಟರಿ, ಬಳಿಕ ಹೊಲದಲ್ಲಿ ಸಿಕ್ತು ನಿಧಿ!

ಖುಷಿಯಿಂದಲೇ ಮನೆಗೆ ಬಂದ ರಾಜನ್‌, ಪತ್ನಿಗೆ ವಿಷಯ ತಿಳಿಸಿದರೆ ಆಕೆ ನಂಬಲೇ ಇಲ್ಲ. ಕೊನೆಗೆ ವಿಷಯ ತಿಳಿದು ಅಕ್ಕಪಕ್ಕದ ಮನೆಯವರು ಬಂದು ಶುಭಾಶಯ ಕೋರಿದ ಮೇಲೆಯೇ ಆಕೆ ಸುದ್ದಿ ನಂಬಿದ್ದಾಳೆ. ಹೀಗೆ ಬಡ ಕುಟುಂಬವೊಂದು ರಾತ್ರೋರಾತ್ರಿ ಕೋಟ್ಯಧಿಪತಿ ಕುಟುಂಬವಾಗಿ ಹೊರಹೊಮ್ಮಿದೆ.

12 ಕೋಟಿ ರು. ಪೈಕಿ ತೆರಿಗೆ ಮತ್ತು ಏಜೆಂಟ್‌ ಕಮಿಷನ್‌ ಕಳೆದು, ರಾಜನ್‌ಗೆ 7-8 ಕೋಟಿ ರು. ಹಣ ಸಿಗಲಿದೆ. ಇದರಲ್ಲಿ ಮೊದಲಿಗೆ ಸಾಲ ತೀರಿಸುವೆ, ಬಳಿಕ ಅರ್ಧವಾಗಿರುವ ಮನೆಯನ್ನು ಪೂರ್ಣಗೊಳಿಸುವೆ ಎಂದು ರಾಜನ್‌ ಹೇಳಿದ್ದಾನೆ.

ದುಬೈನಲ್ಲಿ ಕೆಲಸ ಸಿಗದೆ ಮರಳಿದವನಿಗೆ ಹೊಡೀತು 27 ಕೋಟಿ ರು.ಲಾಟರಿ!

Follow Us:
Download App:
  • android
  • ios