ಚಲಿಸುತ್ತಿರುವ ರೈಲಿನಲ್ಲಿ ಕುಸಿದು ಬಿದ್ದ ಮಿಡಲ್ ಬರ್ತ್, ಪ್ರಯಾಣಿಕನ ದಾರುಣ ಸಾವು!
Millennium Superfast Express ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಿಡಲ್ ಬರ್ತ್ ವಿಚಾರದಲ್ಲಿ ಈ ಹೆದರಿಕೆ ಒಂದು ಇದ್ದೇ ಇರುತ್ತದೆ. ಮಿಡಲ್ ಬರ್ತ್‌ನ ಲಾಕಿಂಗ್ ಸರಿಯಾಗಿ ಮಾಡದೇ ಇದ್ದಲ್ಲಿ ಅದು ಲೋವರ್ ಬರ್ತ್‌ನಲ್ಲಿ ಮಲಗಿರುವ ವ್ಯಕ್ತಿಯ ಮೇಲೆ ಸಲೀಸಾಗಿ ಬೀಳುವ ಅಪಾಯವಿರುತ್ತದೆ.
ನವದೆಹಲಿ (ಜೂ.27): ಚಲಿಸುತ್ತಿರುವ ರೈಲಿನ ಮಿಡಲ್ ಬರ್ತ್ ಸೀಟ್ ಮೈಮೇಲೆ ಕುಸಿದು ಬಿದ್ದ ಪರಿಣಾಮವಾಗಿ ಕೇರಳದ ಮರಂಚೇರಿಯ ವಡಮುಕ್ಕು ನಿವಾಸಿ 62 ವರ್ಷದ ವ್ಯಕ್ತಿ ಅಲಿ ಖಾನ್ ದಾರುಣ ಸಾವು ಕಂಡಿದ್ದಾರೆ. ಮಿಡ್ಲ್ ಬರ್ತ್ ಹಾಗೂ ಪ್ರಯಾಣಿಕ ತಮ್ಮ ಮೇಲೆ ಕುಸಿದು ಬಿದ್ದಿದ್ದರಿಂದ ಅಲಿ ಖಾನ್ ತೀವ್ರ ರೂಪದಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದಾರೆ ಎನ್ನಲಾಗಿದೆ. ಕಳೆದ ವಾರ ಖಾನ್ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯ ನಂತರ, ಅಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರನ್ನು ಹೈದರಾಬಾದ್‌ನ ಮಲ್ಟಿಸ್ಪೆಷಾಲಿಟಿಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತಾದರೂ, ತೀವ್ರ ರೂಪದಲ್ಲಿ ಗಾಯಗೊಂಡಿದ್ದ ಕಾರಣಕ್ಕೆ ಅವರು ಸಾವು ಕಂಡಿದ್ದಾರೆ. ಕಳೆದ ವಾರ ಜೂನ್ 15 ರಂದು ಅಲಿ ಖಾನ್ ಪ್ರಯಾಣ ಮಾಡುತ್ತಿದ್ದ ಮಿಲೇನಿಯಮ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು 12645 ಎರ್ನಾಕುಲಂ - ಎಚ್.ನಿಜಾಮುದ್ದೀನ್) ರೈಲು ತೆಲಂಗಾಣದ ವಾರಂಗಲ್ ತಲುಪುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಮಿಡ್ಲ್ ಬರ್ತ್‌ನಲ್ಲಿ ಮಲಗಿಕೊಂಡಿದ್ದ ಪ್ರಯಾಣಿಕ ಹಾಗೂ ಮಿಡ್ಲ್ ಬರ್ತ್ ಸೀಟ್ ಎರಡೂ ಕೂಡ ಲೋವರ್ ಬರ್ತ್‌ನಲ್ಲಿ ಮಲಗಿಕೊಂಡಿದ್ದ ಅಲಿ ಖಾನ್ ಮೇಲೆ ಕುಸಿದು ಬಿದ್ದಿತ್ತು.
ಭಾರೀ ಘಟನೆಯಿಂದಾಗಿ ಅಲಿ ಖಾನ್ ಅವರ ಕುತ್ತಿಗೆಗೆಗ ಭಾರೀ ಗಾಯವಾಗಿತ್ತು. ಅವರ ದೇಹದ ಮೂರು ಮೂಳೆಗಳು ಹಾಗೂ ಕೈಗಳು ಮುರಿದು ಹೋಗಿದ್ದವು ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ. ರೈಲ್ವೇ ಅಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ, ಅಲಿ ಖಾನ್ ಅವರನ್ನು ವಾರಂಗಲ್‌ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಆ ಬಳಿಕ ಉನ್ನತ ಚಿಕಿತ್ಸೆಗಾಗಿ ಹೈದರಾಬಾದ್‌ನ ಕಿಮ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಿದರು. ಶುಕ್ರವಾರ ಶಸ್ತ್ರಚಿಕಿತ್ಸೆಗೆ ಒಳಗಾದರೂ, ಚಿಕಿತ್ಸೆಗೆ ಸ್ಪಂದಿಸದ ಖಾನ್ ಸಾವನ್ನಪ್ಪಿದ್ದಾರೆ. ಮಂಗಳವಾರ ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಾತೃಭೂಮಿಯ ವರದಿ ಪ್ರಕಾರ ಖಾನ್ ಅವರ ಅಂತಿಮ ಸಂಸ್ಕಾರವು ಕುನ್ನತ್ ಜುಮಾ ಮಸೀದಿಯ ವಡಮುಕ್ಕುದಲ್ಲಿ ಬುಧವಾರ ನಡೆದಿದೆ.
ರೈಲಿನ ಮಿಡ್ಲ್ ಬರ್ತ್ ಕುಸಿದ್ದು ಹೇಗೆ ಎನ್ನುವ ಕಾರಣ ಇನ್ನೂ ಅಸ್ಪಷ್ಟವಾಗಿದೆ. ಭಾರತೀಯ ರೈಲ್ವೇ ಈ ಘಟನೆಯ ಬಗ್ಗೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದೆ. ತನಿಖೆಯ ಮೂಲಕ ಈ ಘಟನೆಗೆ ಕಾರಣವೇನು ಅನ್ನೋದನ್ನು ನಿರ್ಧಾರ ಮಾಡಲು ಹಾಗೂ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಮಾಡಬಹುದು ಎನ್ನಲಾಗಿತ್ತು. ಬುಧವಾರ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇಸ್, ಮಿಡ್ಲ್ ಬರ್ತ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ. ಅಲಿ ಖಾನ್‌ಗೆ S6 ಕೋಚ್‌ನಲ್ಲಿ (ಕೆಳಗಿನ ಬರ್ತ್) ಸೀಟ್ ಸಂಖ್ಯೆ 57 ಅನ್ನು ನಿಗದಿಪಡಿಸಲಾಗಿದೆ. ಮಧ್ಯದ ಬರ್ತ್‌ನಲ್ಲಿದ್ದ ಪ್ರಯಾಣಿಕನಿಗೆ ಥರ್ಡ್ ಎಸಿ ಕೋಚ್‌ಗೆ ಅಪ್‌ಗ್ರೇಡ್ ಮಾಡಲಾಗಿತ್ತು. ಮಿಡ್ಲ್ ಬರ್ತ್‌ಗೆ ಸರಿಯಾಗಿ ತಾಳ ಅಥವಾ ಲಾಕ್ ಹಾಕದಿರುವುದೇ ಈ ಘಟನೆಗೆ ಕಾರಣ ಎಂದು ಹೇಳಿಕೆ ತಿಳಿಸಿದೆ.
ಮಾಲ್‌ನಲ್ಲಿ ಆಟವಾಡುವ ರೈಲಿನಿಂದ ಕೆಳಗಡೆ ಬಿದ್ದು ಬಾಲಕ ಸಾವು : ಘಟನೆಯ ವೀಡಿಯೋ ವೈರಲ್
ಜೂನ್ 22 ರಂದು, ಚಂಡೀಗಢದ ನೆಕ್ಸಸ್ ಎಲಾಂಟೆ ಮಾಲ್‌ನಲ್ಲಿ ಆಟಿಕೆ ರೈಲು ಪಲ್ಟಿಯಾದ ಪರಿಣಾಮ 11 ವರ್ಷದ ಬಾಲಕ ಸಾವನ್ನಪ್ಪಿದ. ಸಾವಿನ ನಂತರ, ಆಟಿಕೆ ರೈಲಿನ ಚಾಲಕನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಅಪ್ಪಂದಿರ ದಿನಕ್ಕೆ ಪುತ್ರಿ ಜೊತೆ ಕಳೆಯಲು ಡ್ಯೂಟಿ ಬದಲಿಸಿದ ಅಧಿಕಾರಿ ರೈಲು ಅಪಘಾತದಲ್ಲಿ ಸಾವು!