ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಹೊಡೆದ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ, ಕೇರಳ ಸ್ಥಳೀಯ ಸಂಸ್ಥೆಯ ಚುನಾವಣೆ ಬಳಿಕ ಈ ಘಟನೆ ನಡದಿದೆ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಎಲ್‌ಡಿಎಫ್ ಸ್ಥಳೀಯ ಮುಖಂಡ ಮುಖಭಂಗ ಅನುಭವಿಸಿದ್ದಾರೆ.
ಪಟಣಂತಿಟ್ಟ (ಡಿ.13) ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತಿಹಾಸ ರಚನೆಯಾಗಿದೆ. ಆಡಳಿತರೂಡ ಎಲ್‌ಡಿಎಫ್ (ಕಮ್ಯೂನಿಸ್ಟ್) ನೆಲಕ್ಕಚ್ಚಿದೆ. ಯೂಡಿಎಫ್(ಕಾಂಗ್ರೆಸ್) ಭರ್ಜರಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ ಇದೇ ಮೊದಲ ಬಾರಿಗೆ ತಿರುವಂತಪುರಂ ಕಾರ್ಪೋರೇಶನ್ ಬಿಜೆಪಿ ಪಾಲಾಗಿದೆ. ಹಲವು ವಾರ್ಡ್‌ಗಳಲ್ಲಿ ಬೆಜೆಪಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. ಇದರ ನಡುವೆ ಮತ್ತೊಂದು ವಿಶೇಷ ಘಟನೆ ನಡೆದಿದೆ. ಪಟಣಂತಿಟ್ಟ ಎಲ್‌ಡಿಎಫ್ ಸ್ಥಳೀಯ ಮುಖಂಡ ಗೆಳೆಯರ ಜೊತೆ ನಾವು ಗೆದ್ದೇ ಗೆಲ್ಲುತ್ತೇವೆ. ಗೆಲ್ಲಲಿದ್ದರೆ ಮೀಸೆ ಬೋಳಿಸುತ್ತೇನೆ ಎಂದು ಗೆಲುವಿನ ಆತ್ಮವಿಶ್ವಾಸದಲ್ಲಿ ಹೇಳಿದ್ದರು. ಆದರೆ ಪಟಣಂತಿಟ್ಟದಲ್ಲಿ ಎಲ್‌ಡಿಎಫ್ ಸೋಲು ಕಂಡಿದೆ. ಗೆಳೆಯರ, ಕಾರ್ಯಕರ್ತರ ಮುಂದೆ ಮಾಡಿದ್ದ ಶಪಥ ಈಡೇರಿಸುವ ಒತ್ತಾಯ ತೀವ್ರಗೊಳ್ಳುತ್ತಿದ್ದಂತೆ ಮುಖಂಡ ತನ್ನ ಮೀಸೆ ಬೋಳಿಸಿದ ಘಟನೆ ನಡೆದಿದೆ.
ಮೀಸೆ ಬೋಳಿಸಿದ ಬಾಬು ವರ್ಗೀಸ್
ಪಟಣಂತಿಟ್ಟ ಮುನ್ಸಿಪಾಲಿಟಿಯಲ್ಲಿ ಈ ಬಾರಿಯೂ ಎಲ್‌ಡಿಎಫ್ ಗೆಲುವು ಸಾಧಿಸಲಿದೆ ಎಂದು ಎಲ್‌ಡಿಎಫ್ ಸ್ಥಳೀಯ ಮುಖಂಡ ಭಾರಿ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. ಪ್ರಚಾರದ ವೇಳೆಯೂ ಜನರಲ್ಲಿ ನಿಮ್ಮ ಮತ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಹಾಕಿ ವ್ಯರ್ಥ ಮಾಡಬೇಡಿ, ಕಾರಣ ಈ ಬಾರಿಯೂ ಎಲ್‌ಡಿಎಫ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಎಲ್‌ಡಿಎಫ್ ಆಡಳಿತ, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ, ನಮ್ಮ ಸರ್ವೆ, ಆಂತರಿಕ ವರದಿ ಎಲ್ಲವೂ ಎಲ್‌ಡಿಎಫ್ ಗೆಲುವನ್ನೇ ಸಾರಿ ಹೇಳುತ್ತಿದೆ ಎಂದಿದ್ದರು. ಇದೇ ಜೋಶ್‌ನಲ್ಲಿ ಆಪ್ತರ ಬಳಗದ ಜೊತೆಗೂ ಬೆಟ್ ಮಾಡಿ ಹೇಳಿದ್ದರು. ಆದರೆ ಗೆಳೆಯರು, ಆಪ್ತರು ಈ ಬಾರಿ ಎಲ್‌ಡಿಎಫ್ ಸೋಲು ಕಾಣಲಿದೆ ಎಂದು ಕಿಚಾಯಿಸಿದ್ದಾರೆ. ಇಷ್ಟಕ್ಕೆ ರೊಚ್ಚಿಗೆದ್ದ ಬಾಬು ವರ್ಗೀಸ್ ಸೋತರೆ ಮೀಸೆ ಬೋಳಿಸುತ್ತೇನೆ ಎಂದು ಹಲವು ಬಾರಿ ಪುನರುಚ್ಚರಿಸಿದ್ದರು.
ಮಾತು ಉಳಿಸಿಕೊಂಡ ಬಾಬು ವರ್ಗೀಸ್
ಇಂದು ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಟಣಂತಿಟ್ಟದಲ್ಲಿ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಪಟಣಂತಿಟ್ಟ ಮಾತ್ರವಲ್ಲ ಬಹುತೇಕ ಕಡೆ ಎಲ್‌ಡಿಎಫ್‌ಗೆ ಸೋಲಾಗಿದೆ. ಈ ಸೋಲಿನ ಬೆನ್ನಲ್ಲೇ ಬಾಬು ವರ್ಗೀಸ್ ಬಳಿ ಆಪ್ತರು, ಗೆಳೆಯರು ಬೆಟ್ ಮಾಡಿ ಹೇಳಿದ್ದ ಮಾತು ಉಳಿಸಿಕೊಳ್ಳುವಂತೆ ಸೂಚಿಸಿದ್ದಾರೆ. ವ್ಯಾಟ್ಸಾಪ್ ಗ್ರೂಪ್‌ಗಳಲ್ಲೂ ಮುಖಂಡನ ಬೆಟ್ ಕುರಿತು ಭಾರಿ ಚರ್ಚೆಯಾಗಿದೆ. ಇದರ ಬೆನ್ನಲ್ಲೇ ಬಾಬು ವರ್ಗೀಸ್ ಮೀಸೆ ಬೋಳಿಸಿ ಮಾತು ಉಳಿಸಿಕೊಂಡಿದ್ದಾರೆ.
ಬಾಬು ವರ್ಗೀಸ್ ವಿಡಿಯೋ ವೈರಲ್
ಬಾಬು ವರ್ಗೀಸ್ ಮೀಸೆ ಬೋಳಿಸುವ ವಿಡಿಯೋವನ್ನು ಹಲವರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಚುನಾವಣೆಗೆ ಮೊದಲು ಹೇಳಿದ ಭರವಸೆಯನ್ನು ಶೇಕಡಾ 100ರಷ್ಟು ಈಡೇರಿಸಿದ ಭಾರತದ ರಾಜಕೀಯ ಇತಿಹಾಸದ ಎಕೈಕ ನಾಯಕ ಎಂದು ವ್ಯಂಗ್ಯವಾಡಿದ್ದಾರೆ.


