ಕೇರಳ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಮೃತರ ಸಂಖ್ಯೆ 4ಕ್ಕೆ ಏರಿಕೆ
ಕೇರಳದ ಕಲಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇದರಿಂದ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ.
ಕೊಚ್ಚಿ: ಕೇರಳದ ಕಲಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇದರಿಂದ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಅಕ್ಟೋಬರ್ 29 ರಂದು ಕೇರಳದ ಕಲಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 62 ವರ್ಷದ ಮೊಲ್ಲಿ ಜಾಯ್ ಮ್ಯಾಥೀವ್ ಎಂಬುವವರು ಗಾಯಗೊಂಡಿದ್ದರು, ಕಮಲಶೇರಿ ನಿವಾಸಿಯಾದ ಅವರನ್ನು ಕೂಡಲೇ ಇತರ ಗಾಯಾಳುಗಳೊಂದಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಇವರ ದೇಹದ ಶೇಕಡಾ 80 ರಷ್ಟು ಬಾಂಬ್ ಸ್ಫೋಟದಿಂದ ಸುಟ್ಟು ಹೋಗಿತ್ತು. ಜೆಹೋವಾಸ್ ವಿಟ್ನೆಸಿಸ್ ಸಮುದಾಯ (Jehovah’s Witnesses) ಆಯೋಜಿಸಿದ್ದ 2000 ಸಾವಿರಕ್ಕೂ ಹೆಚ್ಚು ಜನ ಸೇರಿದ್ದ ಈ ಸಭೆಯಲ್ಲಿ ಎಲ್‌ಇಡಿ ಸ್ಫೋಟ ಸಂಭವಿಸಿತ್ತು. ಈ ಮಹಿಳೆಯ ಸಾವಿಗೆ ಜೆಹೋವಾಸ್ ವಿಟ್ನೆಸಿಸ್ ಸಮುದಾಯ ಸಂತಾಪ ವ್ಯಕ್ತಪಡಿಸಿದೆ. ನಮ್ಮ ಪ್ರೀತಿಯ ಅಂಟಿಯೊಬ್ಬರು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಬಹಳ ದುಖಃದಿಂದ ವಿಚಾರ ತಿಳಿಸುತ್ತಿದ್ದೇವೆ. ಅವರ ಕುಟುಂಬ ಹಾಗೂ ಸ್ನೇಹಿತರ ದುಖದಲ್ಲಿ ನಾವಿದ್ದೇವೆ ಎಂದು ಹೇಳಿಕೆಯೊಂದರಲ್ಲಿ ಜೆಹೋವಾಸ್ ವಿಟ್ನೆಸಿಸ್ ಸಮುದಾಯ ಹೇಳಿದೆ.
ಕೇರಳದ ಸಮಾವೇಶದಲ್ಲಿ ಬಾಂಬ್ ಬ್ಲಾಸ್ಟ್: ಯಾವುದಿದು ಜೆಹೊವ್ಹಾಸ್ ವಿಟ್ನೆಸ್ಸೆಸ್ ಸಮುದಾಯ?
ಎರ್ನಾಕುಲಂನ ಮೆಡಿಕಲ್ ಕಾಲೇಜು ಸೆಂಟರ್‌ನಲ್ಲಿ ಮೊಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರಿಗೆ ನಿನ್ನೆ ಹೃದಯಾಘಾತವಾಗಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಕ್ರಿಶ್ಚಿಯನ್ ಸಂಘಟನೆಯ ವಕ್ತಾರ ಟಿ.ಎ ಶ್ರೀಕುಮಾರ್ ಹೇಳಿದ್ದಾರೆ. ಈ ದುರಂತದಲ್ಲಿ ಇನ್ನು ಗಾಯಗೊಂಡ ಇನ್ನೂ ಮೂವರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೂ ನಗರದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಈ ದುರಂತದಲ್ಲಿ ಇದುವರೆಗೆ ಲಿಯೋನಾ ಪೌಲೋಸ್ (55), ಕುಮಾರಿ ಪುಷ್ಪನ್ (53) ಮತ್ತು ಕೆಪಿ ಲಿಬಿನಾ (12) ಎಂಬುವವರು ಮೃತಪಟ್ಟಿದ್ದಾರೆ. ಲಿಬಿನಾ ಅವರ ತಾಯಿ ಮತ್ತು ಹಿರಿಯ ಸಹೋದರರು ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಂಬ್ ಸ್ಫೋಟಿಸಿದ ಆರೋಪಿ ಡೊಮಿನಿಕ್ ಮಾರ್ಟಿನ್‌ನನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಅವನ ತನಿಖೆ ಮಾಡುತ್ತಿದ್ದಾರೆ.