ತಿರುವನಂತಪುರ(ಅ.28): ಬಹುಬೇಗನೆ ಬೆಳೆ ಹಾಳಾಗುವುದರಿಂದ ನಷ್ಟಕ್ಕೆ ಸಿಲುಕುವ ತರಕಾರಿ ಬೆಳೆಗಾರರ ಹಿತರಕ್ಷಣೆ ಉದ್ದೇಶದಿಂದ ತರಕಾರಿಗೂ ಕೇರಳದಲ್ಲಿ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ತನ್ಮೂಲಕ ಇಂತಹ ನಿರ್ಧಾರ ಕೈಗೊಂಡ ದೇಶದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.

ಮಂಗಳವಾರ ಈ ಘೋಷಣೆ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘16 ತರಕಾರಿಗಳನ್ನು ಕನಿಷ್ಠ ಬೆಲೆ ಪದ್ಧತಿ ಅಡಿ ತರಲಾಗಿದೆ. ನವೆಂಬರ್‌ 1ರಿಂದಲೇ ಇದು ಜಾರಿಗೆ ಬರಲಿದೆ. ದಶಕಗಳಿಂದ ರೈತರು ಸೂಕ್ತ ಬೆಲೆ ದೊರಕದೇ ವಂಚಿತರಾಗುತ್ತಿದ್ದರು. ದೇಶದಲ್ಲೇ ಮೊದಲ ಬಾರಿಗೆ ತರಕಾರಿಗೂ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ರೈತರಿಗೆ ಇದು ನೆರವಾಗಲಿದೆ’ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಕೆಲವೊಂದು ಬೆಳೆಗಳ ಬೆಲೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ವ್ಯವಸ್ಥೆ ದೇಶದಲ್ಲಿ ಇದೆ. ಭತ್ತ, ಗೋದಿ ಸೇರಿ ವಿವಿಧ ಆಹಾರಧಾನ್ಯಗಳಿಗೆ ಈ ರೀತಿಯ ಸೌಲಭ್ಯ ಇದೆ. ಆದರೆ ತರಕಾರಿಗೆ ಇಲ್ಲ.

ಏನಿದು ಯೋಜನೆ?

ಬೆಳೆಗಳಿಗೆ ನೀಡುವ ‘ಕನಿಷ್ಠ ಬೆಂಬಲ ಬೆಲೆ’ ರೀತಿ 16 ತರಕಾರಿಗಳಿಗೆ ಸರ್ಕಾರ ಕನಿಷ್ಠ ಬೆಲೆ ನಿಗದಿಪಡಿಸಿದೆ. ಒಂದು ವೇಳೆ ಕನಿಷ್ಠ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಆದರೆ, ಸರ್ಕಾರವೇ ಕನಿಷ್ಠ ಬೆಲೆ ನೀಡಿ ತರಕಾರಿ ಖರೀದಿಸಲಿದೆ. ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತದೆ.

ವೆಚ್ಚಕ್ಕಿಂತ 20% ಅಧಿಕ ಮೊತ್ತ

ತರಕಾರಿ ಬೆಳೆದ ವೆಚ್ಚಕ್ಕಿಂತ ಶೇ.20ರಷ್ಟುಹೆಚ್ಚುವರಿಯಾಗಿ ಗುಣಮಟ್ಟಆಧರಿಸಿ ಕನಿಷ್ಠ ದರ ನಿಗದಿಪಡಿಸಲಾಗಿದೆ. ಕಾಲಕಾಲಕ್ಕೆ ದರ ಪರಿಷ್ಕರಣೆ ಆಗಲಿದೆ. ಗರಿಷ್ಠ 15 ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆವ ರೈತರಿಗೆ ಯೋಜನೆ ಅನ್ವಯ. ಯೋಜನೆಯ ಲಾಭ ಪಡೆಯಲು ಬೆಳೆಗಾರರು ಕೃಷಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಥವಾ ಕೃಷಿ ಇಲಾಖೆ ಆ್ಯಪ್‌ ಮೂಲಕ ನ.1ರಿಂದ ಹೆಸರು ಹಾಗೂ ತರಕಾರಿ ಬೆಳೆಯ ಪ್ರದೇಶ, ತರಕಾರಿ ಹೆಸರು, ಇತರ ವಿವರ ನೋಂದಣಿ ಮಾಡಬೇಕು.

ಕನಿಷ್ಠ ಬೆಲೆ ಎಷ್ಟು? 

ಮರಗೆಣಸು 12 ರು., ಬಾಳೆಹಣ್ಣು 30 ರು., ವಯನಾಡು ಬಾಳೆಹಣ್ಣು 24 ರು., ಪೈನಾಪಲ್‌ 15 ರು., ಬೂದುಕುಂಬಳ 9 ರು., ಸೌತೆಕಾಯಿ 8 ರು., ಹಾಗಲಕಾಯಿ 30 ರು., ಸೋರೇಕಾಯಿ 16 ರು., ಟೊಮೆಟೋ 8 ರು., ಹುರುಳಿಕಾಯಿ 34 ರು., ಬೆಂಡೆಕಾಯಿ 20 ರು., ಎಲೆಕೋಸು 11 ರು., ಗಜ್ಜರಿ 21 ರು., ಆಲೂಗಡ್ಡೆ 28 ರು., ಬೀಟ್‌ರೂಟ್‌ 21 ರು., ಬೆಳ್ಳುಳ್ಳಿ 139 ರು.