ಕಾಂಗ್ರೆಸ್ ಮುಖಂಡನ ನಡೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ರಚಿಸುವ ಮುನ್ನವೇ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಮಹಿಳಾ ಶಾಸಕಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಘಟನೆ ಹಾಗೂ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ತಿರುವನಂತಪುರಂ (ಮೇ.08) ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದೆ. ಸರ್ಕಾರ ರಚನೆ, ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆಗಳು, ಸ್ಪರ್ಧಗಳು ತೀವ್ರಗೊಳ್ಳುತ್ತಿದೆ. ಇದರ ನಡುವೆ ಕೇರಳ ಕಾಂಗ್ರೆಸ್ ಮುಖಂಡನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಮುಖ್ಯ ಕಚೇರಿಗೆ ಆಗಮಿಸಿದ ಮಹಿಳಾ ಶಾಸಕಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಮುಖಂಡನ ವಿಡಿಯೋ ಭಾರಿ ವೈರಲ್ ಆಗಿದೆ. ಬೇಡ ಬೇಡ ಎಂದು ಕೈಯಿಂದ ಕಾಂಗ್ರೆಸ್ ಮುಖಂಡನ ದೂರ ತಳ್ಳಿದರೂ ಸಿನಿಮಾ ಶೈಲಿಯಲ್ಲಿ ರೊಮ್ಯಾಂಟಿಕ್ ಆಗಿ ತಬ್ಬಿಕೊಳ್ಳಲು ಪ್ರಯತ್ನಿಸಿದ ಘಟನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ವಿಡಿಯೋದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಅವರು, ಹೊಸದಾಗಿ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಯತ್ನಿಸುವುದು ಕಾಣಿಸುತ್ತದೆ. ಆದರೆ, ಬಿಂದು ಕೃಷ್ಣ ಅವರು ಮುಜುಗರದಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿಯಲ್ಲಿ ಶಾಸಕರ ಸಭೆ ನಡೆಯುವಾಗ ಈ ಘಟನೆ ನಡೆದಿದೆ. ಕ್ಯಾಮೆರಾಗಳು, ಪತ್ರಕರ್ತರು ಮತ್ತು ಪಕ್ಷದ ನಾಯಕರ ಮುಂದೆಯೇ ನಡೆದ ಈ ಘಟನೆ, ಈಗ ರಾಜಕೀಯದಲ್ಲಿ ಘನತೆ, ಮಹಿಳಾ ಗೌರವ ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಕ್ಯಾಮೆರಾದಲ್ಲಿ ಸೆರೆಯಾಯ್ತು ಇಡೀ ಘಟನೆ

ವೈರಲ್ ಆಗಿರುವ ವಿಡಿಯೋದಲ್ಲಿ, ಕೊಲ್ಲಂನಿಂದ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಗೆಲುವಿನ ಸಂಭ್ರಮದೊಂದಿಗೆ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ. ಬಿಳಿ ಹಾಗೂ ಹಳದಿ ಸೀರೆ ಉಟ್ಟು ಬೆಂಬಲಿಗರತ್ತ ಕೈಬೀಸುತ್ತಾ ಆಗಮಿಸಿದ ಶಾಸಕಿಯನ್ನು ಕಾಂಗ್ರೆಸ್ ಹಿರಿಯ ನಾಯಕ ಚೆರಿಯನ್ ಪಿಲಿಪ್ ಬರಮಾಡಿಕೊಳ್ಳುವ ನೆಪದಲ್ಲಿ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿಂದು ಕೃಷ್ಣ ಶೇಕ್‌ಹ್ಯಾಂಡ್ ಮಾಡಲು ಕೈ ಮುಂದೆ ಚಾಚಿದರೆ, ಅದೇ ಕೈಗಳನ್ನು ಹಿಡಿದು ಎಳೆದು ತಬ್ಬಿಕೊಳ್ಳಲು ಪಿಲಿಪ್ ಪ್ರಯತ್ನಿಸಿದ್ದಾರೆ.

ಪಿಲಿಪ್ ಕೈಗಳನ್ನು ದೂರ ತಳ್ಳಿದರೂ ಕೆಲ ಸೆಕೆಂಡ್‌ಗಳ ಕಾಲ ಪಿಲಿಪ್ ಬಲವಾಗಿ ಶಾಸಕಿಯನ್ನು ಕೈಗಳನ್ನು ಹಿಡಿದು ಆಕೆಯನ್ನು ಎಳೆದು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದರ ನಡುವೆ ಕುತ್ತಿಗೆ ಕೈಹಾಕಿ ತಬ್ಬಿಕೊಂಡು ಬರ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಪಿಲಿಪ್ ಅವರ ಬಳಿ ಬೇಡ ಬೇಡ ಎಂದು ದೂರ ತಳ್ಳಿದರೂ ಪಿಲಿಪ್ ಮಾತ್ರ ಒಂದು ಬಾರಿ ತಬ್ಬಿಕೊಳ್ಳಲೇಬೇಕು ಎಂಬ ಹಠದಲ್ಲಿ ಈ ಕೃತ್ಯ ಮಾಡಿದಂತಿದೆ. ತಬ್ಬಿಕೊಳ್ಳುವ ಮೊದಲ ಪ್ರಯತ್ನ ವಿಫಲವಾದ ಬೆನ್ನಲ್ಲೇ ಪಿಲಿಪ್ ಎರಡನೇ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಬಿಂದು ಕೃಷ್ಣ ಕೈಮುಗಿದು ನಮಸ್ಕರಿಸಿ ಸಾಗಿದ್ದಾರೆ.

Scroll to load tweet…

ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ

ಈ ಘಟನೆಯ ವಿಡಿಯೋ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಹಿಳಾ ನಾಯಕಿಗೆ ಸ್ಪಷ್ಟವಾಗಿ ಮುಜುಗರವಾಗುತ್ತಿದ್ದರೂ, ಯಾಕೆ ಗೌರವಿಸಲಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲ ಬಳಕೆದಾರರು ಇದನ್ನು "ಅನುಚಿತ ವರ್ತನೆ" ಎಂದು ಕರೆದಿದ್ದು, ಕಾಂಗ್ರೆಸ್ ನಾಯಕತ್ವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಘಟನೆ ನಡೆಯುವಾಗ ಅಲ್ಲೇ ಇದ್ದು ನಗುತ್ತಿದ್ದ ನಾಯಕರು ಮತ್ತು ಪತ್ರಕರ್ತರ ಬಗ್ಗೆಯೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಒಬ್ಬ ಮಹಿಳೆ ಹಿಂದೆ ಸರಿಯುತ್ತಿರುವಾಗ, ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ತಕ್ಷಣ ನಿಲ್ಲಿಸಬೇಕು" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಇದನ್ನು "ಸಾರ್ವಜನಿಕ ವೇದಿಕೆಯಲ್ಲಿ ಮುಜುಗರ ಉಂಟುಮಾಡುವ ಘಟನೆ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮೇಲೆ ಒತ್ತಡ, ಇಬ್ಬರೂ ನಾಯಕರು ಮೌನ

ವಿವಾದ ದೊಡ್ಡದಾಗುತ್ತಿದ್ದರೂ, ಈ ಬಗ್ಗೆ ಚೆರಿಯನ್ ಫಿಲಿಪ್ ಅಥವಾ ಬಿಂದು ಕೃಷ್ಣ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕಾಂಗ್ರೆಸ್ ಪಕ್ಷ ಕೂಡ ಈ ವಿಷಯದ ಬಗ್ಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಸಾರ್ವಜನಿಕ ಜೀವನದಲ್ಲಿ ಹಿರಿಯ ಸ್ಥಾನದಲ್ಲಿದ್ದೇವೆ ಎಂಬ ಕಾರಣಕ್ಕೆ ಇನ್ನೊಬ್ಬರ ವೈಯಕ್ತಿಕ ಗಡಿಗಳನ್ನು ಮತ್ತು ಒಪ್ಪಿಗೆಯನ್ನು ಮೀರಿ ವರ್ತಿಸಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಈ ವೈರಲ್ ವಿಡಿಯೋ ಕೇವಲ ರಾಜಕೀಯ ವಿವಾದವನ್ನು ಸೃಷ್ಟಿಸಿಲ್ಲ, ಬದಲಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರ ಮುಜುಗರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ಕ್ಯಾಮೆರಾಗಳ ಮುಂದೆಯೂ ವೈಯಕ್ತಿಕ ಗಡಿಗಳನ್ನು ಗೌರವಿಸುವುದು ರಾಜಕೀಯ ಸಂಸ್ಕೃತಿಯ ಭಾಗವಾಗಬೇಕೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.