Asianet Suvarna News Asianet Suvarna News

ಕೇರಳ ಸರ್ಕಾರದಿಂದ ಗಡಿ ಕ್ಯಾತೆ: ನಿರ್ಬಂಧ ಹೇರದಿದ್ದರೂ ಮೋದಿಗೆ ದೂರು!

ಕೇರಳ ಸರ್ಕಾರದಿಂದ ಗಡಿ ಕ್ಯಾತೆ| ಕರ್ನಾಟಕ ನಿರ್ಬಂಧ ಹೇರದಿದ್ದರೂ ಗಡಿಯಲ್ಲಿ ನಿರ್ಬಂಧವಿದೆ ಎಂದು ಮೋದಿಗೆ ದೂರು| ಅಂತಾರಾಜ್ಯ ಪ್ರಯಾಣಿಕರಿಗೆ ತಡೆಯೊಡ್ಡಿಲ್ಲ, ಒಡ್ಡುವುದೂ ಇಲ್ಲ: ಡಾ| ಕೆ. ಸುಧಾಕರ್‌

Kerala CM writes to PM Modi urges intervention over border restrictions with Karnataka pod
Author
Bangalore, First Published Feb 24, 2021, 7:37 AM IST

ಬೆಂಗಳೂರು(ಫೆ.24): ರಾಜ್ಯ ಸರ್ಕಾರವು ಕೇರಳ ಹಾಗೂ ಕರ್ನಾಟಕ ನಡುವೆ ಅಂತರ್‌ರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ. ಹೀಗಿದ್ದರೂ ಇಂತಹದೊಂದು ನಿರ್ಬಂಧ ಹೇರಿದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕ್ಯಾತೆ ತೆಗೆದಿದ್ದಾರೆ.

ತನ್ನ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೇರಳ ಸಂಪೂರ್ಣ ವಿಫಲವಾಗಿದೆ. ಈ ಮೂಲಕ ಇಡೀ ದೇಶಕ್ಕೆ ಕೊರೋನಾ ಎರಡನೇ ಅಲೆ ಭೀತಿ ಸೃಷ್ಟಿಸಿದೆ. ಹೀಗಿದ್ದರೂ ವಿಜಯನ್‌, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕರ್ನಾಟಕದ ವಿರುದ್ಧ ಸುಳ್ಳು ಅಪವಾದ ಹೊರಿಸಲು ಯತ್ನಿಸಿದ್ದಾರೆ. ಇದು ರಾಜ್ಯದ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ನಿಗಾ ವಹಿಸಬೇಕು ಎಂದು ಫೆ.13 ರಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿತ್ತು. ಅದರಂತೆ ಫೆ.16 ರಂದು ಕೇರಳದಿಂದ ರಾಜ್ಯಕ್ಕೆ ಬರುವವರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ತರಬೇಕು ಎಂದು ಸರ್ಕಾರ ಸೂಚಿಸಿತ್ತು. ಈ ಮುನ್ನೆಚ್ಚರಿಕಾ ಕ್ರಮವನ್ನೇ ಕಡ್ಡಾಯ ನಿರ್ಬಂಧದಂತೆ ಬಿಂಬಿಸಲು ಕೇರಳ ಸರ್ಕಾರ ಯತ್ನಿಸುತ್ತಿದೆ.

ನಿರ್ಬಂಧ ವಿಧಿಸಿಲ್ಲ- ಡಾ.ಕೆ. ಸುಧಾಕರ್‌

ಈ ಬಗ್ಗೆ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ‘ಕರ್ನಾಟಕ ಮತ್ತು ಕೇರಳ ನಡುವೆ ಅಂತರರಾಜ್ಯ ಪ್ರಯಾಣವನ್ನು ನಿಷೇಧ ಮಾಡಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು 72 ಗಂಟೆಗಳಿಗಿಂತ ಹಳೆಯದಲ್ಲದ ವರದಿ ತರುವಂತೆ ಸೂಚಿಸಿದ್ದೇವೆ. ಅಷ್ಟೇ ಹೊರತು ನಾವು ಅಂತರ್‌ರಾಜ್ಯ ಪ್ರಯಾಣ ನಿಷೇಧಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ‘ಕೇರಳ, ಮಹಾರಾಷ್ಟ್ರ ಅಥವಾ ಇನ್ಯಾವುದೇ ರಾಜ್ಯದ ಪ್ರಯಾಣಿಕರನ್ನು ನಾವು ನಿರ್ಬಂಧಿಸಿಲ್ಲ. ಅಂತರ ರಾಜ್ಯ ಪ್ರಯಾಣಿಕರಿಗೆ ಯಾವುದೇ ತಡೆ ಒಡ್ಡಲಾಗಿಲ್ಲ, ಒಡ್ಡುವುದಿಲ್ಲ. ಅನ್ಯ ರಾಜ್ಯಗಳು ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಬಾರದು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios