ಚಿನ್ನ ಸ್ಮಗ್ಲಿಂಗ್‌ನಲ್ಲಿ ಕೇರಳದ ಸಿಎಂ ಭಾಗಿ, ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ!

ಚಿನ್ನ ಸ್ಮಗ್ಲಿಂಗ್‌ನಲ್ಲಿ ಸಿಎಂ ಪಿಣರಾಯಿ ಭಾಗಿ ಆರೋಪ| ಚುನಾವಣೆಗೆ ಮುನ್ನ ಕೇರಳದಲ್ಲಿ ಸಂಚಲನ| ಮುಖ್ಯ ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ| ವಿಧಾನಸಭೆ ಸ್ಪೀಕರ್‌, 3 ಮಂತ್ರಿಗಳೂ ಭಾಗಿ

Kerala CM Pinarayi involved in gold smuggling case Customs cites accused Swapna in HC pod

ತಿರುವನಂತಪುರ(ಮಾ.06): ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವಿಧಾನಸಭಾ ಅಧ್ಯಕ್ಷ ಪಿ. ಶ್ರೀರಾಮಕೃಷ್ಣನ್‌ ಹಾಗೂ ಮೂವರು ಸಚಿವರು ಭಾಗಿಯಾಗಿದ್ದಾರೆ ಎಂದು ಪ್ರಕರಣದ ಮುಖ್ಯ ಆರೋಪಿ ಸ್ವಪ್ನಾ ಸುರೇಶ್‌ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ.

ಕೇರಳ ಹೈಕೋರ್ಟ್‌ಗೆ ಸುಂಕ ಇಲಾಖೆ ಆಯುಕ್ತ ಸುಮಿತ್‌ ಕುಮಾರ್‌ ಹೇಳಿಕೆಯೊಂದನ್ನು ಸಲ್ಲಿಸಿದ್ದು, ಅದರಲ್ಲಿ ಸ್ವಪ್ನಾ ಈ ಹೇಳಿಕೆಗಳನ್ನು ವಿಚಾರಣೆ ವೇಳೆ ನೀಡಿದ್ದಾಳೆ ಎಂದು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳ ಇರುವಾಗ ಸ್ವಪ್ನಾ ನೀಡಿದ ಈ ಹೇಳಿಕೆ ರಾಜಕೀಯ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.

‘ವಿಜಯನ್‌ಗೆ ಹಾಗೂ ಚಿನ್ನ ಕಳ್ಳಸಾಗಣೆ ನಡೆಯುತ್ತಿದ್ದ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ದೇಶದ ಕಾನ್ಸುಲ್‌ ಜನರಲ್‌ಗೂ ಸಂಪರ್ಕವಿತ್ತು. ಇವರ ನಡುವೆ ಅಕ್ರಮ ವ್ಯವಹಾರ ನಡೆಯುತ್ತಿತ್ತು. ಪಿಣರಾಯಿ, ಅವರ ಪ್ರಧಾನ ಕಾರ್ಯದರ್ಶಿ ಹಾಗೂ ಅವರ ಆಪ್ತ ಸಿಬ್ಬಂದಿಯ ಪರಿಚಯ ನನಗೆ ಚೆನ್ನಾಗಿ ಇತ್ತು. ಮುಖ್ಯಮಂತ್ರಿ ಹಾಗೂ ಸ್ಪೀಕರ್‌ ಸೂಚನೆಯ ಮೇರೆಗೆ ವಿದೇಶೀ ಕರೆನ್ಸಿಯ ಅಕ್ರಮ ಕಳ್ಳಸಾಗಣೆ ಕಾನ್ಸುಲೇಟ್‌ ಸಹಾಯದಿಂದ ನಡೆದಿತ್ತು. ಮೂವರು ಸಚಿವರೂ ಇದರಲ್ಲಿ ಭಾಗಿಯಾಗಿದ್ದರು’ ಎಂದು ಸ್ವಪ್ನಾ ತಿಳಿಸಿದ್ದಾಳೆ ಎಂದು ಆಯುಕ್ತರ ವರದಿಯಲ್ಲಿದೆ.

‘ಮಧ್ಯಪ್ರಾಚ್ಯದ ವ್ಯಕ್ತಿಗಳಿಗೂ ಕೇರಳದ ಈ ‘ಗಣ್ಯರ’ ಮಧ್ಯೆಯೂ ನಡೆದ ವ್ಯವಹಾರಕ್ಕೆ ನಾನು ಸಾಕ್ಷಿಯಾಗಿದ್ದೆ. ಏಕೆಂದರೆ ನನಗೆ ಅರೇಬಿಕ್‌ ಭಾಷೆ ಗೊತ್ತಿದ್ದ ಕಾರಣಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುವಂತೆ ಒತ್ತಡ ಹಾಕಲಾಗುತ್ತಿತ್ತು. ಇಷ್ಟುಮಾತ್ರವಲ್ಲ ಇನ್ನೂ ಕೆಲವು ‘ದೊಡ್ಡ ವ್ಯಕ್ತಿಗಳು’ ಅನೇಕ ಡೀಲ್‌ಗಳ ಮೂಲಕ ಲಂಚ ಸ್ವೀಕರಿಸುತ್ತಿದ್ದರು’ ಎಂದೂ ಸ್ವಪ್ನಾ ಸುರೇಶ್‌ ತಿಳಿಸಿದ್ದಾಳೆ.

ಕೇರಳದ ಯುಎಇ ಕಾನ್ಸುಲ್‌ ಜನರಲ್‌ ಕಚೇರಿಗೆ ಬರುತ್ತಿದ್ದ ಡಿಪ್ಲೋಮೆಟಿಕ್‌ ಸರಕಿನಲ್ಲಿ ಚಿನ್ನ ಸಾಗಿಸುವ ದಂಧೆ ಇದಾಗಿದ್ದು, 167 ಕೇಜಿ ಚಿನ್ನ ಕಳ್ಳಸಾಗಣೆ ನಡೆಸಲಾಗಿತ್ತು ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸ್ವಪ್ನಾ ಸೇರಿ 15 ಮಂದಿ ಬಂಧಿತರಾಗಿದ್ದರು. ಡಿಪ್ಲೋಮೆಟಿಕ್‌ ಸರಕಿಗೆ ತಪಾಸಣಾ ವಿನಾಯಿತಿ ಇರುವ ಕಾರಣ ಆ ಸರಕಿನ ಮೂಲಕ ಕಳ್ಳಸಾಗಣೆ ನಡೆಸಲಾಗುತ್ತದೆ ಎಂದು ದೂರಲಾಗಿತ್ತು.

ಜಾಮೀನು ತಡೆಗೆ ನಕಾರ:

ಈ ನಡುವೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳದ ಸಸ್ಪೆಂಡ್‌ ಆದ ಐಎಎಸ್‌ ಅಧಿಕಾರಿ ಪಿ. ಶಿವಶಂಕರ ಅವರಿಗೆ ನೀಡಲಾಗಿದ್ದ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

167 ಕೇಜಿ ಚಿನ್ನ ಸಾಗಣೆ

- ಯುಎಇಯಿಂದ ಕೇರಳಕ್ಕೆ 167 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಿ ತರಿಸಿದ ಬೃಹತ್‌ ಹಗರಣ

- ಕೇರಳ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಸಿದ್ದ ಕೇಸಲ್ಲಿ ಸುಂಕ ಇಲಾಖೆಯಿಂದ ಹೈಕೋರ್‌್ಟಗೆ ಹೇಳಿಕೆ ಸಲ್ಲಿಕೆ

- ಮುಖ್ಯ ಆರೋಪಿ ಸ್ವಪ್ನಾ ಸುರೇಶ್‌ ನೀಡಿರುವ ಹೇಳಿಕೆ ಕೋರ್‌್ಟಗೆ ಸಲ್ಲಿಸಿದ ಸುಂಕ ಇಲಾಖೆ

- ಸ್ವತಃ ವಿಜಯನ್‌ ಹಾಗೂ ಯುಎಇ ಕಾನ್ಸುಲೇಟ್‌ ನಡುವೆಯೇ ಅಕ್ರಮ ವ್ಯವಹಾರ ನಡೆಯುತ್ತಿತ್ತು: ಸ್ವಪ್ನಾ

- ನನಗೆ ಅರೇಬಿಕ್‌ ಭಾಷೆ ಗೊತ್ತಿದ್ದುದರಿಂದ ಮಧ್ಯವರ್ತಿಯಾಗಿ ಕೆಲಸ ಮಾಡಲು ನನ್ನನ್ನು ಬಳಸಿಕೊಳ್ಳಲಾಯ್ತು

- ಕೇರಳದ ಯುಎಇ ಕಾನ್ಸುಲೇಟ್‌ಗೆ ಬರುವ ಡಿಪ್ಲೊಮ್ಯಾಟಿಕ್‌ ಸರಕಿನಲ್ಲಿ ಚಿನ್ನ ಸ್ಮಗ್ಲಿಂಗ್‌ ಮಾಡಿ ತರಿಸುತ್ತಿದ್ದರು

ಸಿಎಂ ಸೂಚನೆ ಮೇಲೇ ಸ್ಮಗ್ಲಿಂಗ್‌!

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, 3 ಸಚಿವರು, ವಿಧಾನಸಭೆ ಸ್ಪೀಕರ್‌ಗೆ ಕಳ್ಳಸಾಗಣೆ ನಂಟಿದೆ. ಇವರೆಲ್ಲರಿಗೆ ಯುಎಇ ಕಾನ್ಸುಲ್‌ ಜನರಲ್‌ ಜೊತೆ ನೇರ ಸಂಪರ್ಕವಿತ್ತು. ಸಿಎಂ, ಸ್ಪೀಕರ್‌ ಸೂಚನೆ ಅನ್ವಯವೇ ಹಲವು ಬಾರಿ ಕಳ್ಳಸಾಗಣೆ ನಡೆದಿದೆ ಎಂದು ಸ್ವಪ್ನಾ ಸುರೇಶ್‌ ಹೇಳಿದ್ದಾಳೆ.

 

Latest Videos
Follow Us:
Download App:
  • android
  • ios