ಕೇರಳದಲ್ಲಿ ಪ್ರೀತಿಸಿದ ಯುವಕ ಮತ್ತು ಆತನ ಕುಟುಂಬದಿಂದ ಮತಾಂತರದ ಒತ್ತಾಯಕ್ಕೆ ಒಳಗಾದ 23 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ.
ಕೇರಳ: ಪ್ರೀತಿಸಿದ ಯುವಕ ಹಾಗೂ ಆತನ ಮನೆಯವರಿಂದ ಮತಾಂತರಕ್ಕೆ ಒಳಗಾಗುವಂತೆ ತೀವ್ರವಾದ ಕಿರುಕುಳದಿಂದ ನೊಂದು 23 ವರ್ಷದ ಯುವತಿಯೊಬ್ಬಳು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂನ ಕ್ರಿಶ್ಚಿಯನ್ ಸಮುದಾಯದ 23 ವರ್ಷದ ಯುವತಿ ಸೋನಾ ಎಲ್ದೋಸ್ ಸಾವಿಗೆ ಶರಣಾದ ಯುವತಿ. ಈಕೆ ಕೇರಳದ ಎರ್ನಾಕುಲಂನಲ್ಲಿ ಟಿಟಿಸಿ ಟೀಚರ್ ಟ್ರೈನಿಂಗ್ ತರಬೇತಿ ಪಡೆಯುತ್ತಿದ್ದರು. ಈಕೆ ರಮೀಜ್ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆತನ ಮನೆಯವರು ಹಾಗೂ ಆತ ಮದುವೆಗೂ ಮೊದಲೂ ಧಾರ್ಮಿಕವಾಗಿ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೋನಾಗೆ ಒತ್ತಾಯಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ನೊಂದು ಸೋನಾ ಸಾವಿಗೆ ಶರಣಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೋನಾ ಎಲ್ದೋಸ್ ಪ್ರಿಯಕರ ರಮೀಜ್ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರನಿಂದ ಮತಾಂತರಕ್ಕೆ ಒತ್ತಾಯ
ರಮೀಜ್ ಮೊಹಮ್ಮದ್‌ನನ್ನು ಪ್ರೀತಿಸುತ್ತಿದ್ದ ಸೋನಾ ಎಲ್ದೊಸ್, ಆತ ಮತಾಂತರ ಮಾಡಿಕೊಳ್ಳದೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ತನ್ನ ಮನೆ ಬಿಟ್ಟು ಹೋದ ಆಕೆ ರಮೀಜ್ ಮೊಹಮ್ಮದ್‌ನ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಆಕೆ ಮನೆಬಿಟ್ಟು ಹೋದ ನಂತರ ಪ್ರಿಯಕರನ ಮನಸ್ಸು ಬದಲಾಗಿದೆ. ಆತ ಹಾಗೂ ಆತನ ಮನೆಯವರು ಆಕೆಗೆ ಮದುವೆಗೂ ಮೊದಲು ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ಇದರಿಂದ ಖಿನ್ನತೆಗೊಳಗಾದ ಆಕೆ ಆಗಸ್ಟ್ 9 ರಂದುಕರುಕಡಂನಲ್ಲಿರುವ ತನ್ನ ನಿವಾಸದಲ್ಲಿ ಸಾಯಲು ಯತ್ನಿಸಿದ್ದಾಳೆ. ಆದರೆ ಮನೆಯವರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
ಹಿಂದೊಮ್ಮೆ ಮತಾಂತರವಾಗಲು ಒಪ್ಪಿದ್ದಳು ಸೋನಾ
ಸಾವಿಗೂ ಮೊದಲು ಆಕೆ ಡೆತ್‌ನೋಟ್ ಬರೆದಿಟ್ಟಿದ್ದು, ಕಾನೂನುಬದ್ಧವಾಗಿ ಮದುವೆಯಾಗಲು ರಮೀಜ್ ಮತ್ತುಆತನ ಕುಟುಂಬದವರು ತನ್ನನ್ನು ಧಾರ್ಮಿಕ ಮತಾಂತರಕ್ಕೆ ಒಳಗಾಗುವಂತೆ ಕಿರುಕುಳ ನೀಡುತ್ತಿದ್ದರು ಎಂದು ಬರೆದಿದ್ದಾಳೆ. ಜೊತೆಗೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಡೆತ್‌ನೋಟ್‌ನಲ್ಲಿ ಆಕೆ ಬರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಸೋನಾ ಅವರ ಕುಟುಂಬದ ಪ್ರಕಾರ, ಸೋನಾ ಆರಂಭದಲ್ಲಿ ಧಾರ್ಮಿಕವಾಗಿ ಮತಾಂತರಗೊಂಡು ರಮೀಜ್‌ನನ್ನುಮದುವೆಯಾಗಲು ಸಿದ್ಧರಿದ್ದರು. ಆದರೆ ಆರೋಪಿ ಮೊಹಮ್ಮದ್ ರಮೀಜ್ ಆಕೆಗೆ ಮೋಸ ಮಾಡಿದ್ದ. ಆತ ಇನ್ನೊಬ್ಬ ಮಹಿಳೆಯೊಂದಿಗೆ ಸೋನಾಗೆ ಸಿಕ್ಕಿಬಿದ್ದ ನಂತರ ಸೋನಾ ಆತನಿಗಾಗಿ ಧಾರ್ಮಿಕ ಮತಾಂತರವಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಳು. ಸೋನಾಗೆ ವಾಸ್ತವ ಅರಿವಾಗುವ ಮೊದಲು ಕಾಲ ಮಿಂಚಿದ್ದು, ಸೋನಾ ಸಾವಿಗೆ ಶರಣಾಗಿ ಕಾಲನ ಕೈ ಸೇರಿದ್ದಾಳೆ.
ಪ್ರೇಯಸಿ ಮನೆಗೆ ಬಂದ ನಂತರ ಮನಸ್ಸು ಬದಲಿಸಿದ ಪ್ರಿಯಕರ
ರಮೀಜ್ ಮೊಹಮ್ಮದ್ ತನ್ನ ಕುಟುಂಬದೊಂದಿಗೆ ನಮ್ಮ ಮನೆಗೆ ಮದುವೆ ನಿಶ್ಚಯಿಸಲು ಬಂದಿದ್ದರು. ಮಗಳ ಧರ್ಮ ಪರಿವರ್ತನೆಯ ಅವರ ಷರತ್ತಿಗೆ ನಾವು ಒಪ್ಪಿಕೊಂಡಿದ್ದೆವು. ಆದರೆ ನಂತರ ಸೋನಾ ಅದನ್ನು ನಿರಾಕರಿಸಿದಳು. ನಂತರ ರಮೀಜ್ ಅವಳನ್ನು ಮತಾಂತರಿಸದೆ ಮದುವೆಯಾಗಲು ಒಪ್ಪಿಕೊಂಡಿದ್ದ ಮತ್ತು ಅವಳು ಕಳೆದ ತಿಂಗಳು ನಮ್ಮ ಮನೆಯಿಂದ ಹೊರಟುಹೋದಳು. ಆದರೆ ಸೋನಾ ಮನೆಗೆ ತಲುಪಿದ ನಂತರ, ಅವನು ಮತ್ತೆ ಅವಳನ್ನು ಮತಾಂತರಕ್ಕೆ ಬಲವಂತಪಡಿಸಿದ್ದ ಮತ್ತು ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ ದೈಹಿಕವಾಗಿ ಕಿರುಕುಳ ನೀಡಿದ್ದ ಎಂದು ಸೋನಾಳ ಸಹೋದರ ಬಾಸಿಲ್ ಹೇಳಿದ್ದಾರೆ. ಆಕೆ ಅನುಭವಿಸಿದ ಕಿರುಕುಳದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಕೋತಮಂಗಲಂ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು ಎಂದು ಎಫ್‌ಐಆರ್ ದಾಖಲಿಸಿದ್ದರೂ, ಆರೋಪಗಳನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕೋತಮಂಗಲಂ ಪೊಲೀಸ್ ಇನ್ಸ್‌ಪೆಕ್ಟರ್ ಬಿಜೋಯ್ ಪಿಟಿ, ಎಫ್‌ಐಆರ್‌ನಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ರಮೀಜ್ ಅವರ ಬಂಧನವನ್ನು ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ಹೇಳಿದರು.
