ಕೇರಳ ಬಾಂಬ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಇತ್ತ ಸ್ಫೋಟದಿಂದ ಗಾಯಗೊಂಡಿರುವ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಪೈಕಿ ಶೇಕಡಾ 95 ರಷ್ಟು ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಎರ್ನಾಕುಲಂ(ಅ.30) ಕಳಮಶೇರಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳು ಚುರುಕುಗೊಳಿಸಿದೆ. ಶರಣಾಗಿರುವ ಶಂಕಿತನ ವಿಚಾರಣೆಯೂ ನಡೆಯುತ್ತಿದೆ. ಇತ್ತ ಸ್ಫೋಟದಿಂದ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರಿದಿದೆ. ಈಗಾಗಲೇ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಇದೀಗ ಸಾವಿನ ಸಂಖ್ಯೆ ಮೂರಕ್ಕೇರಿದೆ. ಶೇಕಡಾ 95 ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಎರ್ನಾಕುಲಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ನೆರವು ನೀಡಲಾಗಿತ್ತು. ಬಾಲಕಿಯನ್ನು ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ. ಆದರೆ ಬಾಲಕಿ ಬದುಕುಳಿಯಲಿಲ್ಲ ಎಂದು ಆಸ್ಪತ್ರೆ ಮೆಡಿಕಲ್ ಸೂಪರಿಡೆಂಟ್ ಡಾ. ಗಣೇಶ್ ಮೋಹನ್ ಹೇಳಿದ್ದಾರೆ.

ಭಾನುವಾರ ಸ್ಫೋಟ ನಡೆದ ಕೆಲ ಹೊತ್ತಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.ಇದೀಗ ಬಾಲಕಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಖಚಿತಪಡಿಸಿದೆ. ಕಳಮಶೇರಿ ಬಾಂಬ್ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಈ ನಾಲ್ವರ ಪೈಕಿ ಮೂವರಿಗೆ ವೆಂಟಿಲೇಟರ್ ನೆರವು ನೀಡಲಾಗಿದೆ.

ಕೇರಳದಲ್ಲಿ ಸರಣಿ ಸ್ಫೋಟದ ಬೆನ್ನಲ್ಲೇ ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದಾರೆ. ಕೇಂದ್ರದ ತನಿಖಾ ತಂಡಗಳು ಕೇರಳಕ್ಕೆ ಧಾವಿಸಿ ವಿಚಾರಣೆ ನಡೆಸುತ್ತಿದೆ. ಇಂದು ಸರ್ವ ಪಕ್ಷ ಸಭೆ ನಡೆಸಿದ ಪಿಣರಾಯಿ ವಿಜಯನ್, ನಿಸ್ಪಕ್ಷಪಾತ ತನಿಖೆ ನಡೆಸುವದಾಗಿ ಭರವಸೆ ನೀಡಿದ್ದಾರೆ.

ಕಲಮಶ್ಶೇರಿ ಸ್ಫೋಟ ಸಂಭವಿಸುವ ಕೆಲವು ಕ್ಷಣ ಮೊದಲು ನೀಲಿ ಬಣ್ಣದ ಕಾರೊಂದು ಹೊರ ಬಂದಿದ್ದು, ಇದಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಬಾಂಬ್‌ ಇಟ್ಟವನು ಈ ಕಾರಿನಲ್ಲಿ ತಪ್ಪಿಸಿಕೊಂಡಿರಬಹುದು ಎಂಬ ಅನುಮಾನದ ಶೋಧ ನಡೆಸಲಾಗುತ್ತಿದೆ. ಅಲ್ಲದೇ ಕೇರಳದಲ್ಲಿ 24 ತಾಸು ಪೊಲೀಸರು ಗಸ್ತು ನಡೆಸುವಂತೆ ಆದೇಶಿಸಲಾಗಿದ್ದು, ಎಲ್ಲ ರೈಲು, ಬಸ್ಸು, ವಿಮಾನ ನಿಲ್ದಾಣ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲು ಸೂಚಿಸಲಾಗಿದೆ.

ಕೇರಳ ಸ್ಫೋಟದ ಹೊಣೆಹೊತ್ತು ಪೊಲೀಸರಿಗೆ ಶರಣಾದ ಶಂಕಿತ, ಪ್ರಕರಣಕ್ಕೆ ಟ್ವಿಸ್ಟ್!

ಜೆಹೋವಾಸ್‌ ವಿಟ್ನೆಸಿಸ್‌ ಸಮುದಾಯದ ಸಭೆಯಲ್ಲಿ ಸ್ಫೋಟ ಸಂಭವಿಸಿತ್ತು. ಭಾನುವಾರ ಬೆಳಗ್ಗೆ 9.40ಕ್ಕೆ ಬಾಂಬ್‌ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದರು. ಇದೀಗ 12 ವರ್ಷದ ಬಾಲಕಿ ಸೇರಿ ಸಾವಿನ ಸಂಖ್ಯೆ ಮೂರಕ್ಕೇರಿದೆ.