Asianet Suvarna News Asianet Suvarna News

ಒಂದೇ ಕುಟುಂಬದ 8 ಮಂದಿಗೆ ಶಾಪವಾದ ಪ್ರವಾಸಿ ಬೋಟ್‌: ಲೈಫ್‌ ಜಾಕೆಟ್‌ ಅಭಾವ, ಜನಸಂದಣಿಯಿಂದ 22 ಮಂದಿ ಬಲಿ?

ಮಕ್ಕಳ ಮೃತದೇಹಗಳನ್ನು ಆಸ್ಪತ್ರಗೆ ತನ್ನದೇ ಆಟೋದಲ್ಲಿ ಬಂದ ಬಳಿಕ ವ್ಯಕ್ತಿಗೆ ಇವು ತಂಗಿಯ ಮಕ್ಕಳು ಎಂಬುದು ತಿಳಿದಿದೆ. ಅಲ್ಲದೇ ತನ್ನ ತಂಗಿಯೂ ಸೇರಿ ಆಕೆಯ ಕುಟುಂಬದ 5 ಜನ ಹಾಗೂ 3 ಜನ ಸಂಬಂಧಿಕರು ಮೃತಪಟ್ಟಿದ್ದು ತಿಳಿದು ಹಮೀದ್‌ ಆಘಾತಕ್ಕೊಳಗಾಗಿದ್ದಾನೆ.

kerala boat tragedy 8 members of one family among 22 deceased ash
Author
First Published May 9, 2023, 9:02 AM IST

ಮಲಪ್ಪುರಂ (ಮೇ 9, 2023): ಭಾನುವಾರ ಕೇರಳದ ಮಲಪ್ಪುರಂನಲ್ಲಿ ನಡೆದ ಪ್ರವಾಸಿ ಹೌಸ್‌ಬೋಟ್‌ ದುರಂತದಲ್ಲಿ ತಾಯಿ ಹಾಗೂ ಮೂವರು ಪುಟ್ಟಮಕ್ಕಳು ಒಂದೇ ಬಾರಿ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಅಪರಿಚಿತ ಮಕ್ಕಳೆಂದು ಭಾವಿಸಿ ತಾನೇ ಆಸ್ಪತ್ರೆಗೆ ಸಾಗಿಸುತ್ತಿದ್ದ ಮೃತದೇಹಗಳು ತನ್ನ ಸ್ವಂತ ತಂಗಿಯ ಮಕ್ಕಳ ದೇಹಗಳು ಎಂಬುದು ಆಟೋ ಚಾಲಕನಿಗೆ ತಡವಾಗಿ ತಿಳಿದು ತೀವ್ರವಾಗಿ ಆಕ್ರಂದಿಸಿದ್ದಾನೆ. ಘಟನೆ ಬಗ್ಗೆ ತಿಳಿದು ಶಾಹುಲ್‌ ಹಮೀದ್‌ ಎಂಬ ಆಟೋ ಚಾಲಕ ಘಟನಾ ಸ್ಥಳಕ್ಕೆ ಆಗಮಿಸಿದ್ದಾನೆ. ಈ ವೇಳೆ ನೀರಿನಿಂದ ಹೊರತೆಗೆಯಲಾದ ಮಕ್ಕಳ ಮೃತದೇಹವನ್ನು ಆತನ ಆಟೋದಲ್ಲಿ ಇರಿಸಿ ಆಸ್ಪತ್ರೆಗೆ ಸಾಗಿಸುವಂತೆ ತಿಳಿಸಲಾಗಿದೆ.

ಮಕ್ಕಳ ಮೃತದೇಹಗಳನ್ನು ಆಸ್ಪತ್ರಗೆ ತನ್ನದೇ ಆಟೋದಲ್ಲಿ ಬಂದ ಬಳಿಕ ವ್ಯಕ್ತಿಗೆ ಇವು ತಂಗಿಯ ಮಕ್ಕಳು ಎಂಬುದು ತಿಳಿದಿದೆ. ಅಲ್ಲದೇ ತನ್ನ ತಂಗಿಯೂ ಸೇರಿ ಆಕೆಯ ಕುಟುಂಬದ 5 ಜನ ಹಾಗೂ 3 ಜನ ಸಂಬಂಧಿಕರು ಮೃತಪಟ್ಟಿದ್ದು ತಿಳಿದು ಹಮೀದ್‌ ಆಘಾತಕ್ಕೊಳಗಾಗಿದ್ದಾನೆ. ಘಟನೆಯಲ್ಲಿ ಇದೇ ರೀತಿಯಾಗಿ ಚೆಟ್ಟಿಪಾಡಿ ಗ್ರಾಮದ ತಾಯಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇದೇ ಕುಟುಂಬದ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ರಜಾ ದಿನವಾದ್ದರಿಂದ ಮಕ್ಕಳೊಟ್ಟಿಗೆ ಮನರಂಜನೆಗಾಗಿ ಬಂದ ಕುಟುಂಬಸ್ಥರು ಸಾಮೂಹಿಕವಾಗಿ ಮೃತಪಟ್ಟಿದ್ದು ಎಂತವರಿಗೂ ಕರುಳು ಹಿಂಡುವಂತಿದೆ.

ಇದನ್ನು ಓದಿ: ಕೇರಳದಲ್ಲಿ ಬೋಟ್‌ ಮಗುಚಿ 22 ಮಂದಿ ದುರ್ಮರಣ: ಭಾರತೀಯ ನೌಕಾಪಡೆಯಿಂದ ರಕ್ಷಣಾ ಕಾರ್ಯ; ಅಪ್ಡೇಟ್ಸ್‌ ಇಲ್ಲಿದೆ..

ಲೈಫ್‌ ಜಾಕೆಟ್‌ ಅಭಾವ, ಜನಸಂದಣಿಯಿಂದ ದುರಂತ?
ಕೇರಳದ ಮಲಪ್ಪುರಂನಲ್ಲಿ ಭಾನುವಾರ ಸಂಭವಿಸಿದ ಪ್ರವಾಸಿ ಬೋಟ್‌ ಮಗುಚಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ರಕ್ಷಿಸಲಾದ 8 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ತೂವಲ್‌ ತೀರಮ್‌ ಕಡಲತೀರದಲ್ಲಿ ಭಾನುವಾರ ಸಂಜೆ 7.30ಕ್ಕೆ ಸಂಭವಿಸಿದ ಬೋಟ್‌ ದುರಂತದಲ್ಲಿ ಮಡಿದವರಲ್ಲಿ ಐವರು ಮಕ್ಕಳು ಕೂಡ ಇದ್ದಾರೆ.
ಘಟನೆ ನಡೆದಾಗ ಬೋಟ್‌ನಲ್ಲಿ ಸುಮಾರು 40ರಿಂದ 50 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆಯಾದರೂ ಸ್ಪಷ್ಟವಾಗಿ ಪ್ರಯಾಣಿಕರ ಸಂಖ್ಯೆ ವರದಿಯಾಗಿಲ್ಲ. ಘಟನೆ ನಡೆದ ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಎನ್‌ಡಿಆರ್‌ಎಫ್‌ ಹಾಗೂ ಇತರ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಬೋಟ್‌ ಮಾಲೀಕರ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ವಿಪಕ್ಷ ನಾಯಕ ವಿ ಡಿ ಸತೀಶನ್‌ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಕೇರಳ ಸರ್ಕಾರ ಸೋಮವಾರದಂದು ಮೃತರಿಗೆ ಸಂತಾಪ ಸೂಚಿಸುವುದಕ್ಕಾಗಿ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದೆ.

ಇದನ್ನೂ ಓದಿ: ಕೇರಳ: ಹೌಸ್‌ಬೋಟ್‌ ಮಗುಚಿ 22 ಮಂದಿ ದುರ್ಮರಣ; ತಲೆಕೆಳಗಾದ ಡಬ್ಬಲ್‌ ಡೆಕ್ಕರ್‌ ಬೋಟ್‌

ಲೈಫ್‌ ಜಾಕೆಟ್‌ ಅಭಾವ, ನಿಯಮ ಉಲ್ಲಂಘನೆ:
ಸಂಜೆ 5 ಗಂಟೆ ಬಳಿಕ ಇಂಥ ಪ್ರವಾಸಿ ಬೋಟ್‌ಗಳ ಸಂಚಾರಕ್ಕೆ ನಿಷೇಧವಿದ್ದರೂ 2 ಅಂತಸ್ತು ಹೊಂದಿರುವ, ಕೇವಲ 2 ಬಾಗಿಲು ಹೊಂದಿರುವ ಬೋಟ್‌ ಕಾರ್ಯಾಚರಣೆ ನಡೆಸುತ್ತಿತ್ತು. ಸೂಕ್ತ ಪರವಾನಗಿ ಕೂಡ ಇರಲಿಲ್ಲ. ಬೋಟ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿದ್ದ ಕಾರಣ ಏಕಾಏಕಿ ಬೋಟ್‌ ಮಗುಚಿಕೊಂಡು ದುರ್ಘಟನೆ ಸಂಭವಿಸಿದೆ. ಅಲ್ಲದೆ, ಲೈಫ್‌ ಜಾಕೆಟ್‌ಗಳು ಕೂಡ ಇರಲಿಲ್ಲ ಎಂದು ತಿಳಿದುಬಂದಿದೆ.

ತನೂರು ಮತ್ತು ತಿರೂರುನಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ. ಈ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ವಿಪತ್ತು ನಿರ್ವಹಣಾ ಫಂಡ್‌ನಿಂದ 2 ಲಕ್ಷ ರೂ. ಗಳ ಪರಿಹಾರ ಘೋಷಿಸಿದ್ದಾರೆ. ಕೇರಳ ಸರ್ಕಾರ 10 ಲಕ್ಷ ರೂ. ಘೋಷಿಸಿದೆ.

Follow Us:
Download App:
  • android
  • ios