* ಕೇರಳದ ಪಾದ್ರಿ ಜೋಸೆಫ್‌ ಹೇಳಿಕೆಯಿಂದ ತೀವ್ರ ವಿವಾದ* ಕ್ರೈಸ್ತ ಯುವತಿಯರ ಮೇಲೆ ಲವ್‌, ಡ್ರಗ್ಸ್‌ ಜಿಹಾದ್‌* ಹೇಳಿಕೆ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆ* ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರ

ತಿರುವನಂತಪುರ(ಸೆ.13): ಕೇರಳದ ಕ್ರೈಸ್ತ ಪಾದ್ರಿ ಜೋಸೆಫ್‌ ಕಲ್ಲರಂಗಟ್‌ ಅವರು ನೀಡಿದ ‘ಲವ್‌ ಜಿಹಾದ್‌’ ಹಾಗೂ ‘ಮಾದಕ ವಸ್ತು ಜಿಹಾದ್‌’ ಹೇಳಿಕೆ ಈಗ ಕೇರಳ ರಾಜಕೀಯದಲ್ಲಿ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಗುರುವಾರ ಸಭೆಯೊಂದರಲ್ಲಿ ಮಾತನಾಡಿದ್ದ ಜೋಸೆಫ್‌ ಅವರು, ‘ಕ್ರೈಸ್ತ ಯುವತಿಯರನ್ನು ಲವ್‌ ಜಿಹಾದ್‌ ಹಾಗೂ ಡ್ರಗ್ಸ್‌ ಜಿಹಾದ್‌ ಖೆಡ್ಡಾಗೆ ಕೆಡವಲಾಗುತ್ತಿದೆ. ಎಲ್ಲ ತೋಳ್ಬಲ ಶಕ್ತಿ ನಡೆಯುವುದಿಲ್ಲವೋ ಅಲ್ಲಿ ಇದರ ಪ್ರಯತ್ನ ನಡೆಸಿ, ಇತರ ಧರ್ಮದ ಯುವ ಸಮುದಾಯಗಳನ್ನು ತೀವ್ರವಾದಿಗಳು ಹಾಳು ಮಾಡುತ್ತಿದ್ದಾರೆ’ ಎಂದು ಹೇಳಿದ್ದರು.

ಈ ಹೇಳಿಕೆ ಒಂದು ಧರ್ಮವನ್ನು ಉದ್ದೇಶಿಸಿ ನೀಡಿದ್ದಾಗಿದೆ ಎಂದು ಕೇರಳದ ಮುಸ್ಲಿಂ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಇದು ವಾಕ್ಸಮರಕ್ಕೆ ಕಾರಣವಾಗಿದೆ.

ಜೋಸೆಫ್‌ ಅವರ ಹೇಳಿಕೆಯ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ, ‘ಸತ್ಯ ಹೇಳಿದ ಜೋಸೆಫ್‌ರನ್ನು ಕಾಂಗ್ರೆಸ್‌ ಹಾಗೂ ಸಿಪಿಎಂ ಟಾರ್ಗೆಟ್‌ ಮಾಡುತ್ತಿವೆ. ಡ್ರಗ್ಸ್‌ ಜಿಹಾದ್‌ ಹಾಗೂ ಲವ್‌ ಜಿಹಾದ್‌ ತಡೆಗೆ ಕೇಂದ್ರವೇ ಕಾನೂನು ರೂಪಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.