5 ರಾಜ್ಯಗಳಲ್ಲಿ 18 ಮೇಲ್ಪಟ್ಟವರಿಗೆ ಉಚಿತ ಲಸಿಕೆ!
5 ರಾಜ್ಯಗಳಲ್ಲಿ 18 ಮೇಲ್ಪಟ್ಟವರಿಗೆ ಉಚಿತ ಲಸಿಕೆ| ಬಿಹಾರ, ಕೇರಳ, ಛತ್ತೀಸ್‌ಗಢ, ಮ.ಪ್ರ., ಉ.ಪ್ರ. ಅಸ್ಸಾಂ ಘೋಷಣೆ
ನವದೆಹಲಿ(ಏ.22): ಕೇಂದ್ರ ಸರ್ಕಾರವು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ದೊಡ್ಡ ಘೋಷಣೆ ಮಾಡಿದ ಬೆನ್ನಲ್ಲೇ, 5 ರಾಜ್ಯಗಳು ಈ ವಯೋಮಾನದವರಿಗೆ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿವೆ.
ಕೇರಳ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿವೆ.
‘45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿತ್ತು. ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ಹೊರಿಸಿದೆ. ಹೀಗಾಗಿ ಕೇಂದ್ರ ಅನುಸರಿಸಿದ ಉಚಿತ ಲಸಿಕೆ ಕ್ರಮವನ್ನೇ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ ಕೂಡ ಮುಂದುವರಿಸಲಿದೆ’ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಇದೇ ರೀತಿ, ರಾಜ್ಯ ಸರ್ಕಾರಗಳೇ ಲಸಿಕೆ ವೆಚ್ಚ ಭರಿಸಲಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಘೋಷಿಸಿದ್ದಾರೆ.