Asianet Suvarna News Asianet Suvarna News

ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌: ಕೇರಳ ದೇಶದಲ್ಲೇ ನಂ.1!

ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌: ಕೇರಳ ದೇಶದಲ್ಲೇ ನಂ.1| ಈ ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಪೂರ್ಣ ಡಿಜಿಟಲೀಕರಣ| ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆ| 

Kerala becomes first state to have completely digital hi tech classrooms in all public schools says CM pod
Author
Bangalore, First Published Oct 14, 2020, 7:22 AM IST
  • Facebook
  • Twitter
  • Whatsapp

ತಿರುವನಂತಪುರ:(ಅ.14): ದೇಶದ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬಗ್ಗೆ ಚರ್ಚೆಯಾಗುತ್ತಿದ್ದರೆ ಕೇರಳದಲ್ಲಿ ಸದ್ದಿಲ್ಲದೆ ಶೈಕ್ಷಣಿಕ ಕ್ರಾಂತಿಯೇ ನಡೆದುಹೋಗಿದೆ. ಸಾಕ್ಷರತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ‘ದೇವರ ನಾಡು’ ಕೇರಳ ಸಾರ್ವಜನಿಕ ಶಿಕ್ಷಣ ವಲಯವನ್ನೇ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ತನ್ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಎಂಬ ಐತಿಹಾಸಿಕ ಮೈಲುಗಲ್ಲೊಂದನ್ನು ನೆಟ್ಟಿದೆ. ಅಲ್ಲದೆ ದೇಶದ ಇತರ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಿದೆ.

ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಂಪ್ಯೂಟರ್‌, ಪ್ರೊಜೆಕ್ಟರ್‌ ಒಳಗೊಂಡ ಸ್ಮಾರ್ಟ್‌ ಕ್ಲಾಸ್‌ರೂಂ ತೆರೆಯುವುದೇ ಈ ಡಿಜಿಟಲೀಕರಣ ಯೋಜನೆಯ ಸಾರ. ಮಹಾನಗರಗಳ ದುಬಾರಿ ಖಾಸಗಿ ಶಾಲೆಗಳಲ್ಲಿರುವ ಈ ಹೈಟೆಕ್‌ ಸೌಲಭ್ಯವನ್ನು ಕೇರಳ ಸರ್ಕಾರ ರಾಜ್ಯದ ಮೂಲೆಮೂಲೆಯ ಸರ್ಕಾರಿ ಶಾಲೆಗಳಿಗೂ ಒದಗಿಸಿದೆ. 4752 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ 8ರಿಂದ 12ನೇ ತರಗತಿವರೆಗಿನ 45 ಸಾವಿರ ತರಗತಿಗಳನ್ನು ಡಿಜಿಟಲ್‌ ತರಗತಿಗಳಾಗಿ ಪರಿವರ್ತಿಸಲಾಗಿದೆ. 11275 ಪ್ರಾಥಮಿಕ ಹಾಗೂ ಉನ್ನತ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಹೈಟೆಕ್‌ ಕಂಪ್ಯೂಟರ್‌ ಲ್ಯಾಬ್‌ಗಳನ್ನು ತೆರೆಯಲಾಗಿದೆ.

ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕಳೆದ 5 ವರ್ಷಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಗೆಗಿನ ಜನರ ಭಾವನೆ ಕೂಡ ಬದಲಾಗಿದೆ. ನಮ್ಮ ಉದ್ದೇಶ ಏನೆಂದರೆ, ನಮ್ಮ ಶಾಲೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳಿಸುವುದು. ನಮ್ಮ ಹಳ್ಳಿಯಲ್ಲಿರುವ ಶಾಲೆ ಕೂಡ ವಿಶ್ವದ ಯಾವುದೇ ಮೂಲೆಯಲ್ಲಿರುವ ಅತ್ಯುತ್ತಮ ಶಾಲೆಯಂತಿರಬೇಕು ಎಂಬುದಾಗಿದೆ ಎಂದು ತಿಳಿಸಿದರು.

ಏನಿದು ಯೋಜನೆ?:

ದೇಶದ ಹಲವು ರಾಜ್ಯಗಳಲ್ಲಿರುವ ಸಮಸ್ಯೆಯೇ ಕೇರಳಕ್ಕೂ ಎದುರಾಗಿತ್ತು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಕಳೆದುಹೋಗಿತ್ತು. ಸರ್ಕಾರಿ ಶಾಲೆಗಳನ್ನು ಮುಚ್ಚುವ ಕುರಿತು ಚರ್ಚೆಗಳೂ ಆರಂಭವಾಗಿದ್ದವು. 2016ರಲ್ಲಿ ಅಧಿಕಾರಕ್ಕೆ ಬಂದ ಎಡರಂಗ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಪುನರುಜ್ಜೀವನಕ್ಕೆ ಮುಂದಾಯಿತು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳುವ ಮೂಲಕ ವಿಶ್ವದ ವಿವಿಧೆಡೆಯ ವಿದ್ಯಾರ್ಥಿಗಳಿಗೆ ಕೇರಳ ವಿದ್ಯಾರ್ಥಿಗಳು ಪೈಪೋಟಿ ನೀಡುವಂತೆ ಮಾಡಲು ಮುಂದಾಯಿತು. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಪುನರುಜ್ಜೀವನ ಅಭಿಯಾನ ಆರಂಭಿಸಿತು.

ಎಲ್ಲ ತರಗತಿಗಳನ್ನು ಅಂತಾರಾಷ್ಟ್ರೀಯ ದರ್ಜೆಗೆ ಉನ್ನತೀಕರಿಸುವ ಹಾಗೂ ಹೈಟೆಕ್‌ ಐಟಿ ಲ್ಯಾಬ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿತು. ಈ ಜವಾಬ್ದಾರಿಯನ್ನು ‘ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ಟೆಕ್ನಾಲಜಿ ಫಾರ್‌ ಎಜುಕೇಷನ್‌ (ಕೈಟ್‌) ಸಂಸ್ಥೆಗೆ ಒಪ್ಪಿಸಲಾಯಿತು. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯಿಂದ ಅನುದಾನ ಕೊಡಿಸಲಾಯಿತು.

ಇದರ ಫಲವಾಗಿ ಸದ್ಯ 8ರಿಂದ 12ನೇ ತರಗತಿವರೆಗಿನ 42 ಸಾವಿರ ತರಗತಿಗಳಲ್ಲಿ ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌, ಸ್ಕ್ರೀನ್‌ ಅಳವಡಿಸಲಾಗಿದೆ. ಅದನ್ನು ಶಾಲೆಗಳಲ್ಲಿನ ಸ್ಟುಡಿಯೋ ಜತೆ ನೆಟ್‌ವರ್ಕ್ ಮಾಡಲಾಗಿದೆ. ಪ್ರಾಥಮಿಕ, ಉನ್ನತ ಪ್ರಾಥಮಿಕ ತರಗತಿಗಳಲ್ಲಿ ಕನಿಷ್ಠ ಒಂದಾದರೂ ಕಂಪ್ಯೂಟರ್‌ ಲ್ಯಾಬ್‌ ಇರುವಂತೆ ನೋಡಿಕೊಳ್ಳಲಾಗಿದೆ.

ಏನೇನು ಸೌಕರ್ಯ ಇದೆ?

16030 ಸಾರ್ವಜನಿಕ ಶಾಲೆಗಳಲ್ಲಿ 1,19,055 ಲ್ಯಾಪ್‌ಟಾಪ್‌, 69,944 ಮಲ್ಟಿಮೀಡಿಯಾ ಪ್ರೊಜೆಕ್ಟರ್‌, 23,098 ಪ್ರೊಜೆಕ್ಟರ್‌ ಸ್ಕ್ರೀನ್ಸ್‌, 4545 ಎಲ್‌ಇಡಿ ಟೀವಿ, 4578 ಡಿಎಸ್‌ಎಲ್‌ಆರ್‌ ಕ್ಯಾಮೆರಾ, 4720 ಫುಲ್‌ ಎಚ್‌ಡಿ ವೆಬ್‌ ಕ್ಯಾಮೆರಾ, 4611 ಮಲ್ಟಿಫಂಕ್ಷನ್‌ ಪ್ರಿಂಟರ್‌ ಒದಗಿಸಲಾಗಿದೆ. 12678 ಶಾಲೆಗಳಿಗೆ ಹೈಸ್ಪೀಡ್‌ ಬ್ರಾಡ್‌ ಬ್ಯಾಂಡ್‌ ಇಂಟರ್ನೆಟ್‌ ಸಂಪರ್ಕವನ್ನು ನೀಡಲಾಗಿದೆ.

ಕೆಟ್ಟು ಹೋದರೆ?

ಸ್ಮಾರ್ಟ್‌ ಕ್ಲಾಸ್‌ ರೂಂಗಳು ಐದು ವರ್ಷಗಳ ವಾರಂಟಿ ಹಾಗೂ ವಿಮೆ ಹೊಂದಿರುತ್ತವೆ. ತಾಂತ್ರಿಕ ಸಮಸ್ಯೆಗಳು ಎದುರಾದಾಗ ನಿವಾರಿಸಲು ವೆಬ್‌ಪೋರ್ಟಲ್‌, ಕಾಲ್‌ಸೆಂಟರ್‌ ಕೂಡ ತೆರೆಯಲಾಗಿದೆ. 1,83,440 ಶಿಕ್ಷಕರಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.

ಏನಿದು ಸ್ಮಾರ್ಟ್‌ಕ್ಲಾಸ್‌?

ಸರ್ಕಾರಿ ಹಾಗೂ ಸರ್ಕಾರದಿಂದ ಅನುದಾನಿತ ಶಾಲೆಗಳಲ್ಲಿ ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಒಳಗೊಂಡ ವ್ಯವಸ್ಥೆ ಅಳವಡಿಸಿ ಪಾಠ ನಡೆಸುವುದೇ ಸ್ಮಾರ್ಟ್‌ ಕ್ಲಾಸ್‌.

Follow Us:
Download App:
  • android
  • ios