Asianet Suvarna News Asianet Suvarna News

ಕರ್ನಾಟಕದ ನಕ್ಸಲ್‌ ನಾಯಕ ಕೃಷ್ಣಮೂರ್ತಿ ಕೇರಳದಲ್ಲಿ ಸೆರೆ!

* ಇಬ್ಬರೂ ಚಿಕ್ಕಮಗಳೂರು ಜಿಲ್ಲೆ ಮೂಲದವರು

* ಕರ್ನಾಟಕದ ನಕ್ಸಲ್‌ ನಾಯಕ ಕೃಷ್ಣಮೂರ್ತಿ ಕೇರಳದಲ್ಲಿ ಸೆರೆ

* ಕರ್ನಾಟಕ ಮೂಲದ ಸಾವಿತ್ರಿ ಕೂಡ ಬಂಧನ

 

Kerala Anti Terrorism Squad arrest senior Maoist leader and a commander from Wayanad pod
Author
Bangalore, First Published Nov 10, 2021, 6:33 AM IST

ಕಲ್ಪೆಟ್ಟ(ನ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಮೂಲದ ಕುಖ್ಯಾತ ನಕ್ಸಲ್‌ ನಾಯಕರಾದ (Naxal Leader) ಬಿ.ಜಿ.ಕೃಷ್ಣಮೂರ್ತಿ (BG Krishnamurthy) ಮತ್ತು ಸಾವಿತ್ರಿ ಅವರನ್ನು ಕೇರಳದ ಭಯೋತ್ಪಾದನಾ ನಿಗ್ರಹ ಪಡೆ (Kerala Anti Terrorism Squad) ದಳ ಸೋಮವಾರ ಬಂಧಿಸಿದೆ.

ಕರ್ನಾಟಕ ಮತ್ತು ವಯನಾಡು ಗಡಿ ಪ್ರದೇಶದಲ್ಲಿ ಎಟಿಎಸ್‌ ನಡೆಸಿದ ಕಾರ್ಯಾಚರಣೆ ವೇಳೆ ಪಶ್ಚಿಮ ಘಟ್ಟವಲಯ ಸಮಿತಿ ಕಾರ್ಯದರ್ಶಿ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬನಿದಳಂ ಕೇಡರ್‌ನ ಸಾವಿತ್ರಿಯನ್ನು ಬಂಧಿಸಲಾಗಿದೆ. ಕೃಷ್ಣಮೂರ್ತಿ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ (Sringeri) ಮೂಲದ ವ್ಯಕ್ತಿಯಾಗಿದ್ದರೆ, ಸಾವಿತ್ರಿ ಚಿಕ್ಕಮಗಳೂರು ಜಿಲ್ಲೆ ಕಳಸ (Kalasa) ಮೂಲದವಳು.

"

ಕೃಷ್ಣಮೂರ್ತಿ ಹಿನ್ನೆಲೆ:

ಕೃಷ್ಣಮೂರ್ತಿ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದವನು. ಶಿವಮೊಗ್ಗದಲ್ಲಿ (Shivamogga) ನ್ಯಾಯಾಂಗ ಪದವಿ ಪಡೆದಿದ್ದ ಈತ, ಅಲ್ಲಿಯೇ ಸಾಕಷ್ಟುಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಪಶ್ಚಿಮ ಘಟ್ಟ ಉಳಿಸಿ ((Save Western Ghat) ಹೋರಾಟ, ಕುದುರೆಮುಖ ಉಳಿಸಿ ಮೊದಲಾದ ಹೋರಾಟಗಳ ಮೂಲಕ ಪ್ರವರ್ಧಮಾನಕ್ಕೆ ಬಂದು ಬಳಿಕ ಇದ್ದಕ್ಕಿದ್ದಂತೆ ನಕ್ಸಲ್‌ ವಲಯದಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಕರ್ನಾಟಕದಲ್ಲಿ ನಕ್ಸಲ್‌ ಚಳವಳಿಯನ್ನು ಕಾಯ್ದಿಡುವಲ್ಲಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಹೊಸಗದ್ದೆ ಮೂಲದ ಪ್ರಭಾ ಎಂಬ ನಕ್ಸಲ್‌ ಕಾರ್ಯಕರ್ತೆಯನ್ನು ವಿವಾಹವಾಗಿದ್ದ ಈತ, ಕರ್ನಾಟಕ (Karnataka) ಭಾಗದಲ್ಲಿ ನಕ್ಸಲ್‌ ಸಂಘಟನೆಗೆ ಹಿನ್ನಡೆಯಾದ ಬಳಿಕ ಕೇರಳದತ್ತ (Kerala) ಮುಖ ಮಾಡಿದ್ದ. ಈತನ ವಿರುದ್ಧ ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹತ್ಯೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ನಕ್ಸಲ್‌ ನಂಟು ಆರೋಪ: ವಿಠಲ ಮಲೆಕುಡಿಯ ನಿರ್ದೋಷಿ

 

ನಕ್ಸಲ್‌ ನಂಟು ಆರೋಪದ ಮೇಲೆ ಬಂಧಿತರಾಗಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ಪೂರ್ತಿಗೊಳಿಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು, ವಿಠಲ ಮಲೆಕುಡಿಯ (33) ಹಾಗೂ ಅವರ ತಂದೆ ಲಿಂಗಣ್ಣ (61) ಅವರನ್ನು ನಿರ್ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಗಳಾಗಿದ್ದ ವಿಠಲ ಮಲೆಕುಡಿಯ ಹಾಗೂ ಲಿಂಗಣ್ಣ ಅವರು ನಕ್ಸಲರೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಇಬ್ಬರನ್ನೂ 2012ರ ಮಾ.3ರಂದು ಕಾರ್ಕಳದ ನಕ್ಸಲ್‌ ನಿಗ್ರಹ ಪಡೆ ಬಂಧಿಸಿತ್ತು. ಆ ಸಂದರ್ಭ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಇದೀಗ 9 ವರ್ಷಗಳ ಬಳಿಕ ಕೋರ್ಟ್‌ ತೀರ್ಪು ಅವರ ಪರವಾಗಿ ಹೊರಬಿದ್ದಿದೆ.

36 ಸೊತ್ತುಗಳು: ವಿಠಲ ಮಲೆಕುಡಿಯನ ಮನೆಯಲ್ಲಿ ದಿನಸಿ ಸೇರಿದಂತೆ ಇತರ ನಿತ್ಯೋಪಯೋಗಿ ವಸ್ತುಗಳು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಪುಸ್ತಕಗಳು, ಬೈನಾಕ್ಯುಲರ್‌, ಪೇಪರ್‌ಗಳು, ಕೆಲವು ಪಾತ್ರೆಗಳು, ಚುನಾವಣಾ ಬಹಿಷ್ಕಾರದ ಕರಪತ್ರ ಸೇರಿದಂತೆ 36 ಸೊತ್ತುಗಳು ಪತ್ತೆಯಾಗಿದ್ದವು. ಈ ದಾಖಲೆಗಳನ್ನು ಇಟ್ಟುಕೊಂಡು ಪೊಲೀಸರು ನಕ್ಸಲ್‌ ಹಣೆಪಟ್ಟಿಕಟ್ಟಿಬಂಧಿಸಿದ್ದರು.

ಕೈಕೋಳ ಹಾಕಿ ಪರೀಕ್ಷೆ:

ವಿಠಲ ಮಲೆಕುಡಿಯ ಬಂಧಿತನಾಗಿದ್ದರೂ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿತ್ತು. ಅದರಂತೆ 2012ರ ಏ.17ರಂದು ಕೈಕೋಳ ಹಾಕಿಯೇ ಪರೀಕ್ಷೆ ಬರೆದಿದ್ದು, ಇದರ ಫೋಟೊಗಳು ಭಾರೀ ಪ್ರಚಾರ ಪಡೆದು ರಾಜ್ಯ- ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಸೇರಿದಂತೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಮಂಗಳೂರು ಜೈಲಿಗೆ ಭೇಟಿ ನೀಡಿ ಖಂಡಿಸಿದ್ದರು. 2014ರಲ್ಲಿ ವಿಠಲ ಮಲೆಕುಡಿಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪೂರೈಸಿದ್ದರು.

Follow Us:
Download App:
  • android
  • ios