ಫತ್ವಾಗೆ ಡೋಂಟ್ ಕೇರ್: ಹೆಣ್ಮಕ್ಳಿಗೆ ಆಸ್ತಿ ವರ್ಗಾಯಿಸಲು ಮತ್ತೆ ವಿವಾಹವಾದ ಮುಸ್ಲಿಂ ದಂಪತಿ..!
“ಧರ್ಮವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವವರಿಂದ ನಿಜವಾದ ಭಕ್ತರು ಇಂತಹ ನಾಟಕಕ್ಕೆ ಬಲಿಯಾಗುವುದಿಲ್ಲ. ಅವರು (ನಿಜವಾದ ನಂಬಿಕೆಯುಳ್ಳವರು) ಧಾರ್ಮಿಕ ಕಾನೂನುಗಳನ್ನು ಅವಮಾನಿಸುವ ಮತ್ತು ಭಕ್ತರ ನೈತಿಕತೆಯನ್ನು ಬರಿದುಮಾಡುವ ಇಂತಹ ಹೇಯ ನಡೆಗಳನ್ನು ಬಲವಾಗಿ ವಿರೋಧಿಸುತ್ತಾರೆ" ಎಂದು ಫತ್ವಾ ಹೇಳುತ್ತದೆ.
ತಿರುವನಂತಪುರ (ಮಾರ್ಚ್ 9, 2023): ಷರಿಯಾ ಕಾನೂನು ಪ್ರಕಾರ ವಿವಾಹವಾಗಿದ್ದ ವಕೀಲ ಹಾಗೂ ನಟ ಸಿ. ಶುಕ್ಕೂರ್ ಮತ್ತು ಅವರ ಪತ್ನಿ ಶೀನಾ ಅವರು ವಿಶೇಷ ವಿವಾಹ ಕಾಯ್ದೆಯಡಿ ಮತ್ತೆ ಮದುವೆಯಾಗಿದ್ದಾರೆ. ಕೇರಳದ ಪ್ರತಿಷ್ಠಿತ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ ವೈಸ್ ಚಾನ್ಸೆಲರ್ ಆಗಿದ್ದ ಶೀನಾ ಅವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಬ್ - ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ. 29 ವರ್ಷಗಳ ಮುನ್ನ ಇವರ ಮದುವೆಯಾಗಿದ್ದು, ಈಗ ಮತ್ತೆ ಅವರನ್ನೇ ಮದುವೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ. ಇನ್ನು, ದಂಪತಿಯ ಮರು ಮದುವೆಯಾಗಿರುವ ಉದ್ದೇಶದ ಕಾರಣವೂ ಟೀಕೆಗೆ ಗುರಿಯಾಗುತ್ತಿದೆ.
ಹಾಗಾದ್ರೆ, ಈ ಮರು ಮದುವೆಯ (Marriage) ಕಾರಣವೇನು ಅಂತೀರಾ, ತಮ್ಮ ಹೆಣ್ಣು ಮಕ್ಕಳಿಗೆ (Daughter) ಪೂರ್ಣ ಆಸ್ತಿಯನ್ನು ವರ್ಗಾಯಿಸಲು (Inheritance of Property). ಹೌದು, ಷರಿಯಾ ಮುಸ್ಲಿಂ ಕಾನೂನಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ವರ್ಗಾಯಿಸಲು ಅನುಮತಿ ಇಲ್ಲ. ಈ ಹಿನ್ನೆಲೆ, ತಮ್ಮ ಮಗಳ 'ಆರ್ಥಿಕ ಭದ್ರತೆ'ಯನ್ನು ಖಚಿತಪಡಿಸಿಕೊಳ್ಳಲು ಅವರು ಮರುಮದುವೆಯಾಗಿದ್ದು, ಅವರ ಮೂವರು ಹೆಣ್ಣುಮಕ್ಕಳು ಕೂಡ ಈ ಮರು ಮದುವೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ: ಹಿಂದು-ಮುಸ್ಲಿಂ ಏಕತೆಯ ಪರವಾಗಿ ನಸ್ರತುಲ್ ಅಬ್ರಾರ್ ಫತ್ವಾ!
ಸಿ. ಶುಕ್ಕೂರ್ ಅವರು ತಮ್ಮ ಆಸ್ತಿಯನ್ನು ಸಹೋದರನಿಗೆ ಬದಲಾಗಿ ತಮ್ಮ ಹೆಣ್ಣುಮಕ್ಕಳಿಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ (Special Marriage Act) ತಮ್ಮ ಹೆಂಡತಿಯನ್ನು ಮದುವೆಯಾಗುವುದಾಗಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ (Social Media) ಟೀಕೆಗೆ ಗುರಿಯಾಗಿದ್ದರು. ಟೀಕೆ ಮಾತ್ರವಲ್ಲ, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಕೌನ್ಸಿಲ್ ಫಾರ್ ಫತ್ವಾ ಮತ್ತು ರೀಸರ್ಚ್ ಇವರ ವಿರುದ್ಧ ಫತ್ವಾ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ. ಅವರ ಮರುಮದುವೆಗೆ ಒಂದು ದಿನ ಮೊದಲು ಅಂದರೆ ಮಂಗಳವಾರ ಫತ್ವಾ ಹೊರಡಿಸಲಾಗಿತ್ತು.
“ಇಂತಹ ಆಲೋಚನೆಗಳು ಇಸ್ಲಾಮಿಕ್ ತತ್ವಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದ ದುರಂತ ಫಲಿತಾಂಶಗಳಾಗಿವೆ. ಎಲ್ಲಾ ಸಂಪತ್ತು ಮತ್ತು ಆಸ್ತಿಯ ನಿಜವಾದ ಮಾಲೀಕ ಅಲ್ಲಾಹ್ ಆಗಿದ್ದು, ಅವರು ನಿಗದಿಪಡಿಸಿದ ರೀತಿಯಲ್ಲಿ ಆಸ್ತಿಯನ್ನು ಬಳಸಿಕೊಳ್ಳಬೇಕು ಎಂದು ಫತ್ವಾ ಹೇಳಿದೆ. ಅಲ್ಲದೆ, ಮಹಿಳೆ ಅಥವಾ ಪುರುಷ ತಾನು ಜೀವಂತವಾಗಿದ್ದಾಗ ಹೆಣ್ಣುಮಕ್ಕಳಿಗೆ ಆಸ್ತಿಯನ್ನು ಭಾಗ ಮಾಡಿ ನೀಡಬಹುದು ಎಂದೂ ಅದು ಹೇಳಿದೆ.
ಇದನ್ನೂ ಓದಿ: Ganesha Chaturthi ಗಣಪತಿ ಕೂರಿಸಿದ ಬಿಜೆಪಿ ನಾಯಕಿ ವಿರುದ್ಧ ಮುಸ್ಲಿಂ ಮುಖಂಡರಿಂದ ಫತ್ವಾ!
“ಧರ್ಮವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವವರಿಂದ ನಿಜವಾದ ಭಕ್ತರು ಇಂತಹ ನಾಟಕಕ್ಕೆ ಬಲಿಯಾಗುವುದಿಲ್ಲ. ಅವರು (ನಿಜವಾದ ನಂಬಿಕೆಯುಳ್ಳವರು) ಧಾರ್ಮಿಕ ಕಾನೂನುಗಳನ್ನು ಅವಮಾನಿಸುವ ಮತ್ತು ಭಕ್ತರ ನೈತಿಕತೆಯನ್ನು ಬರಿದುಮಾಡುವ ಇಂತಹ ಹೇಯ ನಡೆಗಳನ್ನು ಬಲವಾಗಿ ವಿರೋಧಿಸುತ್ತಾರೆ" ಎಂದು ಸಹ ಫತ್ವಾ ಹೇಳುತ್ತದೆ.
ಮುಸ್ಲಿಂ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ, ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮಾತ್ರ ಪಡೆಯುತ್ತಾರೆ ಮತ್ತು ಉಳಿದ ಆಸ್ತಿ ಪುರುಷ ವಾರಸುದಾರರ ಅನುಪಸ್ಥಿತಿಯಲ್ಲಿ ವ್ಯಕ್ತಿಯ ಸಹೋದರರಿಗೆ ಹೋಗುತ್ತದೆ. ಈ ಹಿನ್ನೆಲೆ ಅವರು ಮರು ವಿವಾಹವಾಗಿದ್ದಾರೆ. ಇನ್ನು, ತಮ್ಮ ನಿರ್ಧಾರವು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಅಗೌರವಿಸುವ ಅಥವಾ ಭಕ್ತರ ನೈತಿಕತೆಯನ್ನು ಮುರಿಯುವ ಗುರಿಯನ್ನು ಹೊಂದಿಲ್ಲ ಮತ್ತು ಆದ್ದರಿಂದ ಯಾವುದೇ ಬಲವಾದ ವಿರೋಧದ ಅಗತ್ಯವಿಲ್ಲ ಎಂದು ತಮ್ಮ ವಿರುದ್ಧ ಫತ್ವಾ ಹೊರಡಿಸಿರುವುದಕ್ಕೆ ಶುಕ್ಕೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಖ್ಯಾತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ಅವರು ಸಹ ಮರುವಿವಾಹಕ್ಕಾಗಿ ದಂಪತಿಯನ್ನು ಅಭಿನಂದಿಸಿದ್ದಾರೆ ಮತ್ತು ಅವರ ಈ ಕ್ರಮವು ದೇಶದ ಪ್ರತಿಯೊಬ್ಬ ಉದಾರವಾದಿ ಮುಸ್ಲಿಮರ ಕಣ್ಣು ತೆರೆಸುವಂತಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.