* ಕೋವಿಡ್‌ ಬೆನ್ನಲ್ಲೇ ಕೇರಳಕ್ಕೆ ನಿಪಾ ಕಂಟಕ* 12 ವರ್ಷದ ಬಾಲಕ ಸೋಂಕಿಗೆ ಬಲಿ* ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರಿಗೂ ವೈರಸ್‌* ಬಾಲಕನ ಸಂಪರ್ಕದಲ್ಲಿದ್ದ 20 ಮಂದಿ ಆಸ್ಪತ್ರೆಗೆ ದಾಖಲು* ಕೇರಳದಲ್ಲಿ ಹೈ ಅಲರ್ಟ್‌

ಕಲ್ಲಿಕೋಟೆ(ಸೆ.06): ಕೋವಿಡ್‌ ಅಲೆ ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಕೇರಳದಲ್ಲಿ ಈಗ ‘ನಿಪಾ ವೈರ​ಸ್‌’ ಹಾವಳಿ ಆರಂಭ​ವಾ​ಗಿದೆ. ಭಾನುವಾರ 12 ವರ್ಷದ ಬಾಲಕನೊಬ್ಬ ನಿಪಾ ವೈರಸ್‌ ಸೋಂಕಿಗೆ ಬಲಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಿ​ದ್ದ ಇಬ್ಬರು ವೈದ್ಯ​ರಿಗೂ ಸೋಂಕು ತಾಗಿ​ದೆ. ಹೀಗಾಗಿ ರಾಜ್ಯದಲ್ಲಿ ಹೈಅಲರ್ಟ್‌ ಘೋಷಿಸಲಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಮತ್ತೊಂದೆಡೆ ಸಾಂಕ್ರಾಮಿಕ ರೋಗ ತಜ್ಞರ ತಂಡವೊಂದನ್ನು ಕೇಂದ್ರ ಸರ್ಕಾರ ಕೇರಳಕ್ಕೆ ಕಳುಹಿಸಿಕೊಟ್ಟಿದೆ.

YouTube video player

ಈ ನಡುವೆ ಕಳೆದ 12 ದಿನದಲ್ಲಿ ಬಾಲಕನ ಸಂಪರ್ಕಕ್ಕೆ ಬಂದಿದ್ದ 188 ಜನರನ್ನು ಗುರುತಿಸಲಾಗಿದ್ದು, ಈ ಪೈಕಿ ಹೆಚ್ಚು ಅಪಾಯದ ಭೀತಿಯಲ್ಲಿರುವ 20 ಜನರನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕ ಸಾವು:

ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಲಿಕೋಟೆ ಜಿಲ್ಲೆಯ 12 ವರ್ಷದ ಬಾಲಕನಿಗೆ ಕಳೆದ 4 ದಿನಗಳಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಆತನನ್ನು ಒಮಸ್ಸೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ವಿಷಮಗೊಂಡ ಹಿನ್ನೆಲೆಯಲ್ಲಿ ಆತನನ್ನು ಶನಿವಾರ ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಆತನ ರಕ್ತವನ್ನು ಪುಣೆಯ ವೈರಾಣು ಕೇಂದ್ರಕ್ಕೆ ರವಾನಿಸಲಾಗಿತ್ತು. ಆತನಿಗೆ ನಿಪಾ ಸೋಂಕು ತಗುಲಿದ್ದು ಶನಿವಾರ ರಾತ್ರಿ ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ತಂಡ ರಚನೆ ಮಾಡಿ ಬಾಲಕನಿಗೆ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದೆ ಆತ ಭಾನುವಾರ ಬೆಳಗ್ಗೆ 5 ಗಂಟೆಗೆ ಸಾವನ್ನಪ್ಪಿದ್ದಾನೆ.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯೇ ಪಿಪಿಇ ಕಿಟ್‌ ತೊಟ್ಟು ಸರ್ಕಾರದ ಶಿಷ್ಟಾಚಾರಗಳ ಅನ್ವಯ ಭಾನುವಾರವೇ ಬಾಲಕನ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಕುಟುಂಬದ ಕೆಲ ಸದಸ್ಯರಿಗೆ ಮಾತ್ರವೇ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿತ್ತು.

ಹೈಅಲರ್ಟ್‌:

ಬಾಲಕನ ಸಾವಿನ ಸುದ್ದಿ ಬೆನ್ನಲ್ಲೇ ಸೋಂಕು ಪ್ರಸರಣ ತಡೆಯಲು ಬಾಲಕನ ಮನೆಯ ಸುತ್ತಲಿನ 3 ಕಿ.ಮೀ ಪ್ರದೇಶವನ್ನು ಅಧಿಕಾರಿಗಳು ಪೂರ್ಣವಾಗಿ ಬಂದ್‌ ಮಾಡಿದ್ದಾರೆ. ಅಲ್ಲದೆ ಅಕ್ಕಪಕ್ಕದ ಕೆಲ ವಾರ್ಡ್‌ಗಳನ್ನು ಭಾಗಶಃ ಬಂದ್‌ ಮಾಡಲಾಗಿದೆ. ಉಳಿದಂತೆ ಇಡೀ ಕಲ್ಲಿಕೋಟೆ ಜಿಲ್ಲೆ, ಪಕ್ಕದ ಕಣ್ಣೂರು, ಮಲಪ್ಪುರಂ ಜಿಲ್ಲೆಗಳಲ್ಲೂ ಎಚ್ಚರ ವಹಿಸಲು ಸೂಚಿಸಲಾಗಿದೆ.

ಆತಂಕ ಬೇಡ:

ನಿಪಾ ವೈರಸ್‌ಗೆ ಬಾಲಕ ಬಲಿಯಾದ ಬೆನ್ನಲ್ಲೇ, ರಾಜ್ಯ ಸರ್ಕಾರ ಭಾನುವಾರ ತುರ್ತು ಸಭೆ ನಡೆಸಿ, ಸೋಂಕು ಪ್ರಸರಣ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿತು. ಸಭೆಯ ಬಳಿಕ ಪ್ರತಿಕ್ರಿಯಿಸಿದ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾಜ್‌ರ್‍, ರಾಜ್ಯದ ಜನರು ನಿಪಾ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. ಆದರೆ ಸೋಂಕು ಪ್ರಸರಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಜೊತೆಗೆ ಈಗಾಗಲೇ ಕೋವಿಡ್‌ ಶಿಷ್ಟಾಚಾರಗಳು ಜಾರಿಯಲ್ಲಿರುವ ಕಾರಣ, ಆತಂಕಕ್ಕೆ ಕಾರಣವಿಲ್ಲ ಎಂದು ಹೇಳಿದ್ದಾರೆ.

ಆದರೆ ಬಾಲಕ ಸಂಚರಿಸಿದ ಪ್ರದೇಶಗಳಲ್ಲಿ ಮತ್ತು ಆತನ ಸಂಪರ್ಕಕ್ಕೆ ಬಂದವರಲ್ಲಿ ತೀವ್ರ ಜ್ವರ, ವಾಂತಿ ಮತ್ತು ಇತರೆ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡುವಂತೆ ಸರ್ಕಾರ ಸೂಚಿಸಿದೆ.

ಈ ನಡುವೆ ಹಲವು ವೈದ್ಯರು ಕೂಡ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. 2018, 2019ರಲ್ಲಿ ರಾಜ್ಯ ಸರ್ಕಾರ ನಿಪಾ ವೈರಸ್‌ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಜೊತೆಗೆ ಈ ಬಾರಿ ಕೋವಿಡ್‌ ಮಾರ್ಗಸೂಚಿಗಳನ್ನು ಜನರು ಪಾಲಿಸುತ್ತಿರುವ ಕಾರಣ, ನಿಪಾ ಸೋಂಕು ಪ್ರಸರಣದ ಸಾಧ್ಯತೆಯೂ ಕಡಿಮೆ ಇದೆ ಎಂದಿದ್ದಾರೆ. ಸೋಂಕಿಗೆ ತುತ್ತಾದವರ ಸಂಪರ್ಕಕ್ಕೆ ಬಂದವರ ಪತ್ತೆ ಮತ್ತು ಅವರನ್ನು ಕ್ವಾರಂಟೈನ್‌ ಮಾಡುವುದು ಪ್ರಸರಣ ತಡೆಗೆ ಅತ್ಯಂತ ಮಹತ್ವದ ಕ್ರಮಗಳು ಎಂದಿದ್ದಾರೆ.

ಕೇರ​ಳ​ದಲ್ಲಿ ಮೊದ​ಲೇ​ನ​ಲ್ಲ:

ನಿಪಾ ವೈರಸ್‌ 1999ರಲ್ಲಿ ಮೊದಲ ಬಾರಿಗೆ ಮಲೇಷಿಯಾದಲ್ಲಿ ಕಾಣಿಸಿಕೊಂಡಿತ್ತು. ಆಗ 60 ಮಂದಿ ಸಾವನ್ನಪ್ಪಿದ್ದರು. ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು 2001ರಲ್ಲಿ ಬಂಗಾ​ಳ​ದಲ್ಲಿ. ಆಗ 45 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಲ್ಲಿಕೋಟೆಯಲ್ಲೇ ನಿಪಾ ವೈರಸ್‌ ಕಾಣಿಸಿಕೊಂಡಿತ್ತು. 17 ಜನ ಸಾವ​ನ್ನ​ಪ್ಪಿ​ದ್ದರು. 2019ರಲ್ಲಿ ಕೊಚ್ಚಿ, ಎರ್ನಾಕುಲಂನಲ್ಲೂ ಸೋಂಕು ಪತ್ತೆಯಾಗಿತ್ತು.

ಸಿನಿಮಾ ಕೂಡ ಬಂದಿ​ತ್ತು:

2018ರಲ್ಲಿ ಕೇರ​ಳ​ದಲ್ಲಿ ನಿಪಾ ವೈರಸ್‌ ಕಾಣಿ​ಸಿ​ಕೊಂಡ ಹಿನ್ನೆ​ಲೆ​ಯಲ್ಲಿ ‘ವೈ​ರ​ಸ್‌’ ಎಂಬ ಮಲ​ಯಾಳಂ ಚಿತ್ರ 2019ರಲ್ಲಿ ನಿರ್ಮಾ​ಣ​ವಾಗಿ ತೆರೆಗೆ ಬಂದಿ​ತ್ತು.

ಏನಿದು ನಿಪಾ ವೈರಸ್‌?

ಇದೊಂದು ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್‌. ವಿಶೇಷವಾಗಿ ಫ್ರೂಟ್‌ ಬ್ಯಾಟ್‌ (ಬಾವಲಿ)ಗಳಿಂದ ಮಾನವರಿಗೆ ಸೋಂಕು ಹಬ್ಬುತ್ತದೆ. ಸಾಮಾನ್ಯವಾಗಿ ಬಾವಲಿಗಳಿಂದ ಹಂದಿ, ನಾಯಿ, ಕುದುರೆ, ಮನುಷ್ಯರಿಗೆ ಸೋಂಕು ಹಬ್ಬುತ್ತದೆ. ಸೋಂಕಿಗೆ ತುತ್ತಾದ ಬಾವಲಿಗಳು ತಿಂದು ಹಾಕಿದ ಹಣ್ಣನ್ನು ಅನ್ಯರು ಸೇವಿ​ಸಿ​ದಾಗ ಸೋಂಕು ಹರಡುತ್ತದೆ. ಹೀಗೆ ಒಬ್ಬ ಮನುಷ್ಯನಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಇನ್ನೊಬ್ಬರಿಗೆ ಜೊಲ್ಲು, ಉಗು​ಳಿನ ಮೂಲಕ ಪ್ರಸರಣವಾಗುತ್ತದೆ.

ಸೋಂಕಿನ ಲಕ್ಷಣ

ಮೆದುಳು ಜ್ವರ, ನಿರಂತರ ಕಫದ ಜೊತೆಗೆ ಜ್ವರ, ಉಸಿರಾಡಲು ಕಷ್ಟ. ತೀವ್ರ ಉಸಿರಾಟದ ತೊಂದರೆ, ತಲೆ ನೋವು, ಮೈಕೈ ನೋವು, ವಾಂತಿ, ಗಂಟಲು ಉರಿತ, ಮಂಪರು- ಇವು ಲಕ್ಷ​ಣ​ಗ​ಳು. ನಿಫಾ ವೈರಸ್‌ ಮರಣ ದರ ಶೇ.40-80%. ಆರ್‌ಟಿಪಿಸಿಆರ್‌ ಪರೀಕ್ಷೆ ಮೂಲಕ ರೋಗ ಪತ್ತೆ ಮಾಡಬಹುದು.

ಅವಧಿ

ಸಾಮಾನ್ಯವಾಗಿ 5-14 ದಿನಗಳ ಕಾಲ ಮನುಷ್ಯರ ದೇಹದಲ್ಲಿ ಸೋಂಕು ಇರುತ್ತದೆ. ಶೀಘ್ರ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಅಪಾಯ ಇಲ್ಲ. ಇಲ್ಲದೇ ಹೋದಲ್ಲಿ ಸಾವಿನ ಸಾಧ್ಯತೆ ಇರುತ್ತದೆ.

ವೈರಸ್‌ನಿಂದ ರಕ್ಷಣೆ ಹೇಗೆ?

- ಸೋಂಕಿತ ಪ್ರಾಣಿಗಳಿಂದ ದೂರ ಇರುವುದು.

- ಆಗಾಗ ಸೋಪಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುತ್ತಿರಬೇಕು.

- ಸಂಪರ್ಕ ಪತ್ತೆ, ಕ್ವಾರಂಟೈನ್‌ ಅತ್ಯಗತ್ಯ

ಯಾವುದಿದು ಸೋಂಕು?

ಸೋಂಕಿಗೀಡಾದ ಬಾವಲಿಗಳು ತಿಂದು ಬಿಟ್ಟಹಣ್ಣನ್ನು ಅನ್ಯ ಪ್ರಾಣಿ ಅಥವಾ ಮನುಷ್ಯರು ಸೇವಿಸಿದಾಗ ನಿಪಾ ವೈರಸ್‌ ಅಂಟುತ್ತದೆ. ಜೊಲ್ಲು, ಉಗುಳಿನ ಮೂಲಕ ಇತರರಿಗೆ ಹರಡುತ್ತದೆ.

ರೋಗ ಲಕ್ಷಣ ಏನು?

ಜ್ವರ, ಉಸಿರಾಟ ಸಮಸ್ಯೆ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಉರಿ, ಮಂಪರು. ಆರ್‌ಟಿಪಿಸಿಆರ್‌ ಟೆಸ್ಟ್‌ ಮೂಲಕ ಸೋಂಕು ಪತ್ತೆ ಹಚ್ಚಬಹುದು. ಶೀಘ್ರ ಚಿಕಿತ್ಸೆ ನೀಡಿದರೆ ಅಪಾಯವಿಲ್ಲ.