* 2 ವರ್ಷಗಳ ವಿರಾಮದ ನಂತರ ಮತ್ತೆ ಆರಂಭವಾಗಿರುವ ಚಾರ್‌ಧಾಮ್‌ ಯಾತ್ರೆ* ಚಾರ್‌ಧಾಮ ಯಾತ್ರೆ: ಕಸದ ತೊಟ್ಟಿಯಾದ ಕೇದಾರನಾಥ!

ನವದೆಹಲಿ(ಮೇ.23): 2 ವರ್ಷಗಳ ವಿರಾಮದ ನಂತರ ಮತ್ತೆ ಆರಂಭವಾಗಿರುವ ಚಾರ್‌ಧಾಮ್‌ ಯಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಲಕ್ಷಾಂತರ ಜನ ಭೇಟಿ ನೀಡುತ್ತಿರುವುದರಿಂದ ಪವಿತ್ರ ಕ್ಷೇತ್ರಗಳ ಮಾರ್ಗಗಳು ಅಕ್ಷಶಃ ಕಸದ ತೊಟ್ಟಿಯಾಗಿ ಬದಲಾಗಿವೆ. ಎಲ್ಲಿ ನೋಡಿದರೂ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ವಸ್ತುಗಳು ರಾಶಿಯಾಗಿ ಬಿದ್ದಿವೆ.

ಹಿಮದಿಂದ ಆವೃತವಾದ ಪರ್ವತಗಳನ್ನು ಹೊಂದಿರುವ ವಿಶಾಲವಾದ ಭೂಭಾಗದಲ್ಲಿ ಹಲವು ಡೇರೆಗಳನ್ನು ನಿರ್ಮಿಸಿರುವ ಫೋಟೋವನ್ನು ಮಾಧ್ಯಮವೊಂದು ಪೋಸ್ಟ್‌ ಮಾಡಿದೆ. ಪ್ರದೇಶ ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬ್ಯಾಗ್‌ ಮತ್ತು ಬಾಟಲ್‌ ಕಸದಿಂದ ತುಂಬಿ ಹೋಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗಢವಾಲ್‌ ಕೇಂದ್ರೀಯ ವಿಶ್ವವಿದ್ಯಾಲಯದ ಭೂಗೋಳ ವಿಭಾಗದ ಅಧ್ಯಾಪಕರಾದ ಎಂ.ಎಸ್‌.ನೇಗಿ, ‘ಕೇದಾರನಾಥದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ಬೀಳುವುದು ನಮ್ಮ ಪರಿಸರಕ್ಕೆ ಹಾನಿಕಾರಕವಾಗಿದೆ. ಇದು ಭೂಕುಸಿತಕ್ಕೆ ಕಾರಣವಾಗಬಹುದು. 2013ರ ದುರಂತವನ್ನು ನಾವು ಮರೆಯಬಾರದು’ ಎಂದು ಹೇಳಿದ್ದಾರೆ.

.ಕೇದಾರನಾಥನ ಸನ್ನಿಧಿಯಲ್ಲಿ ಶಾಸಕಿ ಹೆಬ್ಬಾಳ್ಕರ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಉತ್ತರಾಖಂಡ ರಾಜ್ಯದ ಕೇದಾರಪೀಠದ ಪ್ರವಾಸ ಕೈಗೊಂಡಿದ್ದು, ಸೋಮವಾರ ಶ್ರೀ ರಾವಲ ಭೀಮಾಶಂಕರ ಶ್ರೀಗಳ ಆಶೀರ್ವಾದ ಪಡೆದರು.

ಶನಿವಾರ ಸಂಜೆ ಅವರು ಬೆಳಗಾವಿಯಿಂದ ಕೇದಾರನಾಥಕ್ಕೆ ಪ್ರಯಾಣ ಬೆಳೆಸಿದ್ದರು. ನೈಸರ್ಗಿಕವಾಗಿಯೇ ಅತ್ಯಂತ ಸುಂದರ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡ ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು ವಿಶೇಷ. ಕೈಲಾಸ ಪರ್ವತದ ನಂತರ ಶಿವನ ಎರಡನೇ ವಾಸಸ್ಥಾನವೆಂದು ಕರೆಯಲ್ಪಡುವ ಕೇದಾರನಾಥ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವ​ರು ತಿಳಿಸಿದ್ದಾರೆ.

ಪ್ರವಾಹ ಹಾಗೂ ಕೊರೋನಾಗಳಿಂದಾಗಿ ಕಳೆದ 2 ವರ್ಷಗಳಿಂದ ಜನರು ತತ್ತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಯಾವುದೇ ತೊಂದರೆಗಳು ಬಾರದೆ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ದೇವರಲ್ಲಿ ಬೇಡಿಕೊಂಡೆ ಎಂದು ಅವರು ತಿಳಿಸಿದರು.

ಈ ವರ್ಷ ಅನಾರೋಗ್ಯಕ್ಕೆ 39 ಯಾತ್ರಿಗಳ ಸಾವು

 ಪವಿತ್ರ ಚಾರ್‌ ಧಾಮ್‌ ಯಾತ್ರೆ ಆರಂಭವಾದಾನಿಂದ ಇಲ್ಲಿಯವರೆಗೆ ಸುಮಾರು 39 ಯಾತ್ರಿಕರು ಸಾವಿಗೀಡಾಗಿದ್ದಾರೆ. ಪ್ರಯಾಣದ ಹಾದಿಯಲ್ಲಿ ಹೃದಯ ಸ್ತಂಭನ, ಅತಿಯಾದ ರಕ್ತದೊತ್ತಡ ಮತ್ತು ಪರ್ವತ ಅನಾರೋಗ್ಯದಿಂದ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗೋತ್ರಿ, ಯಮುನೋತ್ರಿ ಯಾತ್ರೆ ಮೇ 3ರಿಂದ, ಕೇದಾರನಾಥ ಯಾತ್ರೆ ಮೇ 6 ಮತ್ತು ಬದರೀನಾಥ ಯಾತ್ರೆ ಮೇ 8ರಂದು ಆರಂಭವಾಗಿತ್ತು. ಯಾತ್ರಾತ್ರಿಗಳಿಗೆ ಯಾತ್ರೆಯ ವೇಳೆ ಹಲವು ಸ್ಥಳಗಳಲ್ಲಿ ಆರೋಗ್ಯ ಪರೀಕ್ಷೆ ನಡೆಸುತ್ತಾದರೂ, ಸಾವು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.