ಹೈದರಾಬಾದ್‌ (ನ.20): ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಕಟ್ಟುವ ಯತ್ನವನ್ನು ಮತ್ತೊಮ್ಮೆ ಆರಂಭಿಸಿರುವ ತೆಲಂಗಾಣ ಸಿಎಂ ಮತ್ತು ಟಿಆರ್‌ಎಸ್‌ ನಾಯಕ ಚಂದ್ರಶೇಖರ್‌ ರಾವ್‌, ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಸಭೆಯೊಂದನ್ನು ಆಯೋಜಿಸಿದ್ದಾರೆ.

ಈಗಾಗಲೇ ಸಭೆ ಸಂಬಂಧ ಪ್ರಾದೇಶಿಕ ಪಕ್ಷಗಳ ಮುಖಂಡರಿಗೆ ಆಹ್ವಾನವನ್ನೂ ರವಾನಿಸಲಾಗಿದೆ. ಆಹ್ವಾನ ತಲುಪಿರುವ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಟಿಎಂಸಿಯ ಮಮತಾ ಬ್ಯಾನರ್ಜಿ, ಬಿಎಸ್‌ಪಿಯ ಮಾಯಾವತಿ, ಎಸ್‌ಪಿಯ ಅಖಿಲೇಶ್‌ ಯಾದವ್‌, ಬಿಜೆಡಿಯ ನವೀನ್‌ ಪಟ್ನಾಯಕ್‌, ಡಿಎಂಕೆಯ ಸ್ಟ್ಯಾಲಿನ್‌ ಮತ್ತು ಕೃಷಿ ಕಾಯ್ದೆಗಳ ವಿಚಾರವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಇತ್ತೀಚೆಗಷ್ಟೇ ಹೊರಬಂದಿರುವ ಶಿರೋಮಣಿ ಅಕಾಲಿದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡಲ್ಲಿ ಕೇಸರಿ ಪತಾಕೆ ಹಾರಿಸಲು ಮೋದಿ- ಶಾ ಮಾಡಿದ ಮಾಸ್ಟರ್ ಪ್ಲಾನ್ ಇದು! ..

ಈ ಪ್ರಸ್ತಾಪಿತ ವಿಪಕ್ಷಗಳ ನಾಯಕರ ಸಭೆಯಲ್ಲಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ, ಈ ಸಭೆಗೆ ದೇಶದ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್‌ಗೆ ಆಹ್ವಾನ ನೀಡಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಈ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಸೇರಿ, ಬಿಜೆಪಿಗೆ ಪರ್ಯಾಯ ಮೈತ್ರಿಕೂಟ ರಚನೆಯ ಮಾತುಗಳನ್ನು ಆಡಿದ್ದರು.